ADVERTISEMENT

ಕೊಲೆಗಾರರನ್ನು ಶೂಟ್ ಮಾಡಿ: ಮಂಡ್ಯ ಪೊಲೀಸರಿಗೆ ಸಿಎಂ ಖಡಕ್ ಸೂಚನೆ

ಮೊಬೈಲ್‌ನಲ್ಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 7:10 IST
Last Updated 25 ಡಿಸೆಂಬರ್ 2018, 7:10 IST
   

ವಿಜಯಪುರ:‘ಹಾಡಹಗಲೇ ಒಳ್ಳೆ ವ್ಯಕ್ತಿಯ ಕೊಲೆಯಾಗಿದೆ. ಯಾರು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಕೊಲೆಗಾರರನ್ನು ಶೂಟೌಟ್‌ ಮಾಡಿ ತೊಂದರೆಯಿಲ್ಲ...’

ಸೋಮವಾರ ಮುಸ್ಸಂಜೆನಗರದ ಸೈನಿಕ ಶಾಲೆಯ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಮೊಬೈಲ್‌ ಮೂಲಕ ಮಂಡ್ಯ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ ಖಡಕ್‌ ಸೂಚನೆಯಿದು.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ, ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್‌ ಅವರನ್ನು ದುಷ್ಕರ್ಮಿಗಳು ಸೋಮವಾರ ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿದ ಮುಖ್ಯಮಂತ್ರಿ ಮೇಲಿನಂತೆ ಪ್ರತಿಕ್ರಿಯಿಸಿದರು ಎಂದು ತಿಳಿದು ಬಂದಿದೆ.

ADVERTISEMENT

‘ಘಟನೆಯಿಂದ ನನಗೆ ಬೇಸರವಾಗಿದೆ. ಆ ಭಾಗದ ಇನ್ಸ್‌ಪೆಕ್ಟರ್‌ಗಳು, ಡಿವೈಎಸ್‌ಪಿ ಅಲ್ಲೇನು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನಾಲ್ಕೈದು ಕೊಲೆಯಾದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದರಿಂದ ಇದೀಗ ಒಳ್ಳೆ ವ್ಯಕ್ತಿಯೊಬ್ಬರು ಕೊಲೆಯಾಗಿದ್ದಾರೆ‘.

ಏಕೆ ಕೊಲೆಯಾಗಿದೆ. ಕೊಲೆಗಾರರು ಯಾರು ಎಂಬುದು ನನಗೆ ಗೊತ್ತಿಲ್ಲ. ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರನ್ನು ಶೂಟೌಟ್‌ ಮಾಡಿ. ನಾನು ಅದಕ್ಕೆ ಕೇರ್‌ ಮಾಡಲ್ಲ’ ಎಂದು ಕುಮಾರಸ್ವಾಮಿ ಮೊಬೈಲ್‌ನಲ್ಲೇ ಅಧಿಕಾರಿಗೆ ನೀಡಿದ ಸೂಚನೆ ವಿಡಿಯೊ ಚಿತ್ರೀಕರಣಗೊಂಡಿದ್ದು, ಅದರ ಕ್ಲಿಪ್ಪಿಂಗ್‌ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಉದ್ವೇಗದಲ್ಲಿ ಹೇಳಿದೆ: ಸಿಎಂ ಸ್ಪಷ್ಟನೆ

ನಂತರ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ, ‘ಮಂಡ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತನ ಕೊಲೆ ವಿಷಯ ತಿಳಿದು ಉದ್ವೇಗದಲ್ಲಿ ಹಾಗೆ ಹೇಳಿದ್ದೇನೆ; ಸಿಎಂ ಆಗಿ ಆ ಆದೇಶ ನೀಡಿಲ್ಲ’ ಎಂದು ಹೇಳಿದ್ದಾರೆ. ‘ಮಂಡ್ಯಕ್ಕೆ ನಾಳೆ ಬೆಳಿಗ್ಗೆ ಭೇಟಿ ನೀಡಲಿದ್ದೇನೆ. ಸಾರ್ವಜನಿಕರು ಉದ್ವೇಗಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.