ADVERTISEMENT

Valentine day: ರತನ್‌ ಟಾಟಾ ಬದುಕಿನ ಭಗ್ನ ಪ್ರೇಮ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2021, 6:08 IST
Last Updated 13 ಫೆಬ್ರುವರಿ 2021, 6:08 IST
ರತನ್‌ ಟಾಟಾ
ರತನ್‌ ಟಾಟಾ   

ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿರುವ ರತನ್‌ ಅವರು, ತಮ್ಮ ಖಾಸಗಿ ಬದುಕಿನ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು.ಅವರತಮ್ಮ ಪ್ರೀತಿ ಮತ್ತು ಮುರಿದು ಬಿದ್ದ ಮದುವೆ ಬಗ್ಗೆ ಅನೇಕ ಕುತೂಹಲಕರ ಸಂಗತಿಗಳು ಇಲ್ಲಿವೆ...

ಅಮೆರಿಕದಲ್ಲಿ ಕೆಲಸ ಮಾಡುವಾಗ ತರುಣಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದ ಅವರಿಗೆ, ತಮ್ಮ ಕಾಯಿಲೆಪೀಡಿತ ಪ್ರೀತಿಯ ಅಜ್ಜಿಯ ಆರೈಕೆಗಾಗಿ ಭಾರತಕ್ಕೆ ಮರಳ ಬೇಕಾಯಿತು. ಅದೇ ಸಂದರ್ಭದಲ್ಲಿ (1962) ನಡೆದ ಚೀನಾ ಮತ್ತು ಭಾರತ ನಡುವಣ ಯುದ್ಧವು ಅವರ ಮದುವೆಗೆ ಅಡ್ಡಿಯಾಯಿತು.

‘ಲಾಸ್‌ಏಂಜೆಲ್ಸ್‌ನ ವಾಸ್ತುಶಿಲ್ಪ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸಕ್ಕೆ ಇದ್ದಾಗ ನಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಮದುವೆಯಾಗುವುದೊಂದೇ ಬಾಕಿ ಇತ್ತು. ಅದೇ ಹೊತ್ತಿಗೆ ನನ್ನ ಕಾಯಿಲೆಪೀಡಿತ ಪ್ರೀತಿಯ ಅಜ್ಜಿಯ ಆರೈಕೆಗಾಗಿ ಭಾರತಕ್ಕೆ ಮರಳ ಬೇಕಾಯಿತು. ನಾನು ಮದುವೆಯಾಗಬೇಕಾಗಿದ್ದ ಯುವತಿಯೂ ನನ್ನ ಜತೆ ಭಾರತಕ್ಕೆ ಬರಬೇಕು ಎನ್ನುವುದು ನನ್ನ ಇಚ್ಛೆಯಾಗಿತ್ತು. ಆ ದಿನಗಳಲ್ಲಿ ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆಯುತ್ತಿತ್ತು. ಹೀಗಾಗಿ ಯುವತಿಯ ಪಾಲಕರು ಆಕೆಯನ್ನು ಭಾರತಕ್ಕೆ ಕಳಿಸಲು ಸಮ್ಮತಿಸಲಿಲ್ಲ. ಹೀಗಾಗಿ ಮದುವೆ ಮುರಿದು ಬಿದ್ದಿತು.

ADVERTISEMENT

‘ಬಾಲ್ಯದಲ್ಲಿ ನಾನು ತುಂಬ ಖುಷಿಯಿಂದ ಕಾಲ ಕಳೆದಿದ್ದೆ. ನಾನು ಮತ್ತು ನನ್ನ ಸೋದರ ಬೆಳೆದು ದೊಡ್ಡವರಾಗುತ್ತಿದ್ದಂತೆ ನಮ್ಮ ಸುತ್ತಮುತ್ತಲಿನವರು ನಮ್ಮನ್ನು ಅನಾದರದಿಂದ ಕಾಣತೊಡಗಿದ್ದರು. ನನ್ನ ಪಾಲಕರು ವಿಚ್ಛೇದನ ಪಡೆದುಕೊಂಡಿದ್ದರು. ಆ ದಿನಗಳಲ್ಲಿ ಅದು ದೊಡ್ಡ ಸುದ್ದಿಯಾಗಿತ್ತು. ನನ್ನ ತಾಯಿ ಮರುಮದುವೆ ಆಗುತ್ತಿದ್ದಂತೆ ಶಾಲೆಯ ಹುಡುಗರು ನಮ್ಮ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರು'

‘ಆದರೆ, ನನ್ನ ಅ‌ಜ್ಜಿ ನಮ್ಮನ್ನು ಸನ್ಮಾರ್ಗದಲ್ಲಿ ಬೆಳೆಸಲು ಪಣತೊಟ್ಟಿದ್ದಳು. ಘನತೆಯಿಂದ ಜೀವಿಸುವುದನ್ನು ಆಕೆ ನಮಗೆ ಮುತುವರ್ಜಿಯಿಂದ ಹೇಳಿಕೊಟ್ಟಿದ್ದಳು. ಅಂದು ಆಕೆ ನಮ್ಮಲ್ಲಿ ಬಿತ್ತಿದ ಮೌಲ್ಯಗಳು ಈಗಲೂ ನನ್ನಲ್ಲಿ ಉಳಿದಿವೆ. ಕೀಳು ಮಾತಿಗೆ ಎದುರುತ್ತರ ನೀಡುವ ಬದಲಿಗೆ ಟೀಕೆಗಳನ್ನು ಧೈರ್ಯದಿಂದ ಎದುರಿಸಿ ಘನತೆಯಿಂದ ಬಾಳುವುದನ್ನು ಹೇಳಿಕೊಟ್ಟಿದ್ದಳು.

‘ಇಂತಹ ಮಾತು ಆಡಬಾರದು. ಇಂತಿಂತಹ ಘಟನೆಗಳಿಗೆ ಪ್ರತಿಕ್ರಿಯಿಸಬಾರದು. ಎಲ್ಲಕ್ಕಿಂತ ಘನತೆಯಿಂದ ಇರುವುದು ಮುಖ್ಯ ಎನ್ನುವ ತತ್ವಗಳನ್ನು ಬೋಧಿಸಿದ್ದಳು. ಪಾಲಿಸುವುದನ್ನು ರೂಢಿಸಿದ್ದಳು. ಆಕೆಯ ಮಾತು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದ್ದವು.

‘ಈ ಘಟ್ಟದಲ್ಲಿ ಹಿಂತಿರುಗಿ ನಿಂತು ನೋಡಿದಾಗ, ಯಾರು ಸರಿ ಮತ್ತು ಯಾರು ತಪ್ಪು ಎಂದು ಹೇಳುವುದು ಕಷ್ಟ. ನಾನು ಅಮೆರಿಕದಲ್ಲಿ ಓದಲು ಇಷ್ಟಪಟ್ಟಿದ್ದೆ. ಇಂಗ್ಲೆಂಡ್‌ನಲ್ಲಿ ಓದಬೇಕು. ಎಂಜಿನಿಯರ್‌ ಆಗಬೇಕು ಎನ್ನುವುದು ನನ್ನ ಅಪ್ಪನ ಇಚ್ಛೆಯಾಗಿತ್ತು. ಅಜ್ಜಿಯ ಒತ್ತಾಸೆಯಿಂದ ನಾನು ವಾಸ್ತುಶಿಲ್ಪದಲ್ಲಿ ಪದವಿ ಪಡೆದೆ. ಇದು ನನ್ನ ಅಪ್ಪನಿಗೆ ಇಷ್ಟವಾಗಿರಲಿಲ್ಲ’ ಎಂದು ರತನ್‌ ಟಾಟಾ ಅವರು ತಮ್ಮ ಬದುಕಿನ ವಿವರಗಳನ್ನು ಬಿಚ್ಚಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.