ADVERTISEMENT

ವೀಕ್‌ ಎಂಡ್‌ ವಿತ್‌ ‘ಪ್ರತಿಬಿಂಬ’

ರಮಾ ಎಸ್.ಅರಕಲಗೂಡು
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
ಚಿತ್ರಗಳು: ಶ್ರೀಕಂಠ ಭಾರಧ್ವಾಜ
ಚಿತ್ರಗಳು: ಶ್ರೀಕಂಠ ಭಾರಧ್ವಾಜ   

ವಾರವಿಡೀ ಒತ್ತಡದಲ್ಲಿ ಕೆಲಸ ಮಾಡುವ ಬೆಂಗಳೂರಿನ ಯುವ ಜನ ಸಾಮಾನ್ಯವಾಗಿ ವಾರಾಂತ್ಯದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಇಳಿಯುತ್ತಾರೆ. ಪ್ರವಾಸ, ಪಾರ್ಟಿ, ಚಾರಣ, ಮೋಜು–ಮಸ್ತಿ.. ಹೀಗೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಹಿತವೆನಿಸುವಂತಹ ಚಟುವಟಿಕೆಗಳತ್ತ ಹೊರಳುತ್ತಾರೆ.

ಆದರೆ, ಇಲ್ಲೊಂದಿಷ್ಟು ಯುವ ಉದ್ಯೋಗಿಗಳಿದ್ದಾರೆ. ಅವರು ವಾರಾಂತ್ಯದ ಎರಡು ದಿನಗಳ ರಜೆಯನ್ನು ಸಾಮಾಜಿಕ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ತಾವು ಗಳಿಸುವ ಹಣದ ಸ್ವಲ್ಪ ಭಾಗವನ್ನು ಈ ಕಾರ್ಯಕ್ಕೆ ವಿನಿಯೋಗಿಸುತ್ತಾರೆ. ಶಿಕ್ಷಣ ವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದು, ಆ ಶಾಲೆಗಳಿಗೆ ಸೌಲಭ್ಯ ನೀಡುವುದು, ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಪರಿಸರ ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ‘ಪ್ರತಿಬಿಂಬ’ ಅಡಿಯಲ್ಲಿ ಈ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ವಾರವಿಡೀ ಉದ್ಯೋಗದಲ್ಲಿದ್ದರೆ ವೀಕ್‌ ಎಂಡ್‌ನಲ್ಲಿ ‘ಪ್ರತಿಬಿಂಬ’ದ ಜತೆಗಿರುತ್ತಾರೆ.

ಅಮ್ಮನ ಪ್ರೇರಣೆ..

ADVERTISEMENT

ಬೆಂಗಳೂರಿನ ಸಾ‌ಫ್ಟ್‌ವೇರ್‌ ಉದ್ಯೋಗಿ ಮುರಳಿ ಈ ಪ್ರತಿಬಿಂಬದ ರೂವಾರಿ. ಈ ಕಾರ್ಯಕ್ಕೆ ಶಿಕ್ಷಕಿಯಾಗಿದ್ದ ಅವರ ತಾಯಿಯ ಚಟುವಟಿಕೆಯೇ ಪ್ರೇರಣೆಯಂತೆ. ಶಾಲೆ ಮುಗಿದ ಬಳಿಕ ಅವರ ತಾಯಿ ಮನೆ ಸುತ್ತಮುತ್ತಲಿದ್ದ ಶಾಲೆಬಿಟ್ಟ ಮಕ್ಕಳನ್ನು ಒಂದೆಡೆ ಸೇರಿಸಿ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಮುಂದೆ ಇವರು ತಾನು ಕಾಲೇಜಿಗೆ ಹೋಗುವ ಹಂತದಲ್ಲಿ, ತಾಯಿಯಂತೆ ಶಿಕ್ಷಣ ವಂಚಿತ ಮಕ್ಕಳಿಗೆ ಪಾಠ ಹೇಳುತ್ತಿದ್ದರು.

ಒಮ್ಮೆ ಹೀಗಾಯಿತು; ಬೆಂಗಳೂರಿನ ಹನುಮಂತನಗರದ ಕಾರ್ಪೊರೇಷನ್ ಶಾಲೆಯೊಂದರಲ್ಲಿ ಶಿಕ್ಷಕರ ಕೊರತೆ ಇರುವುದು ಗೊತ್ತಾಯಿತು. ಆ ಶಾಲೆಗೆ ಮುರಳಿ ಪಾಠ ಮಾಡಲು ಹೋದರು. ಆದರೆ ಅಲ್ಲಿ, ಪಾಠಕ್ಕಿಂತ ಸೌಲಭ್ಯಗಳ ಕೊರತೆ ಇರುವುದನ್ನು ಶಿಕ್ಷಕರು ಹೇಳಿದರು. ಇದನ್ನು ಅರಿತ ಅವರು, ತಮ್ಮ ಗೆಳೆಯರೊಂದಿಗೆ ಸೇರಿ ಶಾಲೆಗೆ ಪೀಠೋಪಕರಣ, ಪುಸ್ತಕಗಳನ್ನು ಒದಗಿಸಿದರು. ‘ಹೀಗೆ ಸಣ್ಣದಾಗಿ ಶುರುವಾದ ಸೇವಾ ಕಾರ್ಯಕ್ಕೆ ಮಹೇಂದ್ರ ಕುಮಾರ್, ನಾಗೇಶ್, ವಲ್ಲೀಶ, ಶ್ರೀಕಂಠ ಭಾರದ್ವಾಜ, ರೇವತಿ, ಜಯಶ್ರೀಯಂತಹ ಸಮಾನ ಮನಸ್ಕ ಗೆಳೆಯರು ಕೈ ಜೋಡಿಸಿದರು. ‘ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ನಾವೆಲ್ಲ ‘ಪ್ರತಿಬಿಂಬ’ದಲ್ಲಿ ಒಟ್ಟಾಗಿದ್ದೇವೆ’ ಎನ್ನುತ್ತಾರೆ ಮುರಳಿ.

ಆರಂಭದಲ್ಲಿ ಕೆಲ ವರ್ಷ ಯಾವುದೇ ಚೌಕಟ್ಟಿಲ್ಲದೇ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸೇವೆಗೆ ಸಾಂಸ್ಥಿಕ ರೂಪ ನೀಡಿದರು. ದಿನ ಕಳೆದಂತೆ ಸಂಸ್ಥೆಯೊಂದಿಗೆ ಕೈ ಜೋಡಿಸುವ ಗೆಳೆಯರ ಸಂಖ್ಯೆಯೂ ಹೆಚ್ಚಿತು. ಖಾಸಗಿ ಕಂಪನಿಗಳ ಉದ್ಯೋಗಿಗಳು, ರೇವಾ, ದಯಾನಂದ್ ಸಾಗರ್, ಬಿಎಂಎಸ್ ಸೇರಿದಂತೆ ಹೆಸರಾಂತ ಕಾಲೇಜಿನ ವಿದ್ಯಾರ್ಥಿಗಳೂ ಸ್ವಯಂ ಪ್ರೇರಣೆಯಿಂದ ಇವರ ಚಟುವಟಿಕೆಗಳಿಗೆ ಜತೆಯಾಗಿದ್ದಾರೆ. ‘ಸಮಾಜದಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಅವರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಬೇಕು. ಜೀವನ ಕೌಶಲ, ಜ್ಞಾನದ ಅರಿವು ಸಿಗಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯ’ – ಈ ನಂಬಿಕೆಯೊಂದಿಗೆ ಸಂಸ್ಥೆ ಮುನ್ನಡೆದಿದೆ.

ನಾಲ್ಕು ವಿಭಾಗ; ಶಿಕ್ಷಣಕ್ಕೆ ಆದ್ಯತೆ

ಸಂಸ್ಥೆ ತನ್ನ ಕಾರ್ಯಕ್ಷೇತ್ರಗಳನ್ನು ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸಾಮಾಜಿಕ ಜಾಗೃತಿ ಎಂಬ ನಾಲ್ಕು ಸೇವಾ ಕ್ಷೇತ್ರಗಳನ್ನಾಗಿ ವಿಭಾಗಿಸಿಕೊಂಡಿದೆ. ಮೊದಲನೆಯ ಕಾರ್ಯಕ್ಷೇತ್ರ ಶಿಕ್ಷಣ. ಮೊದಲು ಬೆಂಗಳೂರು ಮತ್ತು ಸುತ್ತಲಿನ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆರಂಭಿಸಿದರು. ನಂತರ ಈ ಸೇವೆ ರಾಜಧಾನಿಯಿಂದ ಹೊರಗಿರುವ ಜಿಲ್ಲೆಗಳಿಗೂ ವಿಸ್ತರಿಸಿತು. ಸದ್ಯ ಬೆಂಗಳೂರಿನ ಬನ್ನೇರುಘಟ್ಟ, ಅಶೋಕ ನಗರದ ಸರ್ಕಾರಿ ಶಾಲೆಗಳು ಹಾಗೂ ಕೋಲಾರ, ತುಮಕೂರು ಜಿಲ್ಲೆಯಲ್ಲಿನ ಶಾಲೆಗಳಿಗೆ ಪ್ರತಿಬಿಂಬದ ಸೇವೆ ಲಭ್ಯವಾಗಿದೆ.

‘ಶಾಲೆಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ’ ಎಂದು ಸದಸ್ಯರನ್ನು ಪ್ರಶ್ನಿಸಿದರೆ, ಅವರು ಹೀಗೆ ಉತ್ತರಿಸುತ್ತಾರೆ. ಪ್ರತಿಬಿಂಬದ ಬಗ್ಗೆ ತಿಳಿದವರು, ‘ನಮ್ಮ ಶಾಲೆಗೆ ಇಂಥ ಸೌಲಭ್ಯ ಕಲ್ಪಿಸಿ’ ಎಂದು ಮನವಿ ಮಾಡುತ್ತಾರೆ. ಕೆಲವರು ‘ಈ ಸಮಸ್ಯೆ ಎದುರಿಸುತ್ತಿರುವ ಸರ್ಕಾರಿ ಶಾಲೆ ಬಗ್ಗೆ ಹೇಳಿ, ಏನಾದರೂ ಸೌಲಭ್ಯ ಕಲ್ಪಿಸಿ’ ಎಂದು ಮನವಿ ಮಾಡುವವರೂ ಇದ್ದಾರೆ.ಇಂಥ ವಿಷಯಗಳನ್ನು ತಂಡದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚರ್ಚಿಸಿ, ಎಲ್ಲರ ಒಪ್ಪಿಗೆ ಪಡೆದು, ಕಾರ್ಯ ಯೋಜನೆ ರೂಪಿಸಿ, ನೀಲನಕ್ಷೆ ಸಿದ್ಧಪಡಿಸುತ್ತೇವೆ. ತಿಂಗಳಿಗೊಮ್ಮೆ ಸಭೆ ಸೇರಿ ಯಾರು, ಯಾವ ಕೆಲಸ ಮಾಡಬೇಕೆಂದು ನಿರ್ಧರಿಸುತ್ತಾರೆ.

ವಿಷಯ ಪರಿಣತರ ತಂಡ

‘ನಮ್ಮಲ್ಲಿ ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಪರಿಣತಿ ಪಡೆದಿದ್ದಾರೆ. ಕೆಲವರು ಶಾಲೆಗಳಿಗೆ ಹೋಗಿ ಪಾಠ ಮಾಡುತ್ತಾರೆ. ಇನ್ನಷ್ಟು ಮಂದಿ ಚಂದವಾಗಿ ಮಕ್ಕಳಿಗೆ ಕಥೆ ಹೇಳುತ್ತಾರೆ. ಆಟದ ಮೂಲಕವೇ ಪಾಠ ಹೇಳಿ ಕೊಡುವವರಿದ್ದಾರೆ. ವಿಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿ, ಆರೋಗ್ಯ ವಿಷಯಗಳನ್ನು ಮಕ್ಕಳಿಗೆ ವಿವರಿಸುತ್ತಾರೆ. ಮಕ್ಕಳಲ್ಲಿನ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಗಾಗಿ ಆಟಗಳನ್ನು ಆಡಿಸುತ್ತಾರೆ. ಮಕ್ಕಳಿಂದಲೇ ಕೈತೋಟ ಮಾಡಿಸುತ್ತಾರೆ. ಪ್ರತಿ ಮಗುವಿನಿಂದ ಒಂದೊಂದು ಸಸಿ ನೆಡೆಸಿ, ಪೋಷಣೆ ಮಾಡುವುದನ್ನು ಹೇಳಿಕೊಟ್ಟು, ಅದರ ಆರೈಕೆ ಜವಾಬ್ದಾರಿಯನ್ನು ಮಗುವಿಗೇ ವಹಿಸುತ್ತಾರೆ.

ಇತ್ತೀಚೆಗೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಂದಿಗುಂಟೆ ಗ್ರಾಮ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ ದ್ದಾರೆ ಯುವಕರು. ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಶಾಲೆಗೆ ಪೀಠೋಪಕರಣ, ಕಂಪ್ಯೂಟರ್, ಲೈಬ್ರರಿಗೆ ಪುಸ್ತಕಗಳನ್ನು ಪೂರೈಸಿದ್ದಾರೆ. ‘ಮಕ್ಕಳಿಗೆ ಪರಿಸರ ಪಾಠ ಹೇಳಿಕೊಟ್ಟಿದ್ದೇವೆ. ಅವರಿಂದಲೇ ಬೀಜದುಂಡೆ ತಯಾರಿಸಿದ್ದೇವೆ. ಯುವಕ/ ಯುವತಿಯರಿಗೆ ಬಟ್ಟೆ ಬ್ಯಾಗ್ ತಯಾರಿಕೆಯಂತಹ ಉದ್ಯೋಗ ಕೌಶಲ ತರಬೇತಿ ನೀಡಿದ್ದೇವೆ’ ಎಂದು ಹೆಮ್ಮಯಿಂದ ಹೇಳುತ್ತಾರೆ ತಂಡದ ಸದಸ್ಯರು. ಸಂಸ್ಥೆ ಕಾರ್ಯ ಮೆಚ್ಚಿರುವ ಅನೇಕ ದಾನಿಗಳು, ಯುವಕರ ಸೇವಾ ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ. ಹೀಗಾಗಿ ಈ ತಂಡ ಶಿಕ್ಷಣ ಜತೆಗೆ, ಕೆರೆ ಸಂರಕ್ಷಣೆಯಂತಹ ಗ್ರಾಮಾಭಿವೃದ್ಧಿ ಕಾರ್ಯಕ್ಕೂ ಮುಂದಾಗಿದೆ.

ಪ್ರತಿಬಿಂಬ – ಕಾರ್ಯಕ್ರಮಗಳ ಕುರಿತ ಹೆಚ್ಚಿನ ಮಾಹಿತಿಗೆ ಮುರಳಿ– 9845255844, https://www.prathibimba.org ಜಾಲತಾಣ ನೋಡಬಹುದು. https://www.facebook.com/prathibimba.trust/ ಫೇಸ್‌ಬುಕ್‌ನಲ್ಲೂ ಸಂಸ್ಥೆಯ ಚಟುವಟಿಕೆಗಳು ನೋಡಬಹುದು.

* ‘ನಮ್ಮ ಶಾಲೆಯ ಕಟ್ಟಡ ಬಹಳ ಹಳೆಯದು. ವಿದ್ಯುತ್ ಸಂಪರ್ಕ ಹಾಳಾಗಿತ್ತು. ಪ್ರತಿಬಿಂಬ ಸಂಸ್ಥೆಯವರು ಶಾಲೆಯ ವಿದ್ಯುತ್ ವೈರಿಂಗ್ ಸರಿಪಡಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಸರಿ ಮಾಡಿಸಿದರು. ಮಕ್ಕಳ ಸುರಕ್ಷತೆಗಾಗಿ ಶಾಲೆಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ನಮ್ಮ ಶಾಲೆಯ ಅಭಿವೃದ್ಧಿಗೆ ಸಂಸ್ಥೆಯ ಗೆಳೆಯರು ಶ್ರಮಿಸಿದ್ದಾರೆ.

–ವಿಜಯ, ಮುಖ್ಯಶಿಕ್ಷಕಿ,
ಸರ್ಕಾರಿ ಶಾಲೆ, ಹನುಮಂತನಗರ,ಬೆಂಗಳೂರು.

ಶೈಕ್ಷಣಿಕೇತರ ಚಟುವಟಿಕೆಗಳು..

ಶಾಲೆಗೆ ಸುಣ್ಣ–ಬಣ್ಣ ಹೊಡೆಯುತ್ತಾರೆ. ಗೋಡೆಗಳ ಮೇಲೆ ಅಂದವಾದ ಚಿತ್ರ ಬಿಡಿಸುತ್ತಾರೆ. ಸರ್ಕಾರಿ ಶಾಲೆ ಸುಂದರವಾಗಿ ಕಾಣುವ ಜತೆಗೆ, ಮೂಲಸೌಲಭ್ಯಗಳೂ ಸಿಗಬೇಕೆಂಬುದು ಈ ತಂಡದ ಆಶಯ.

ಶಾಲೆಗಳಿಗೆ ನೆರವಾಗುವ ಜತೆಗೆ, ಬ್ಲಡ್ ಡೊನೇಷನ್ ಕ್ಯಾಂಪ್‌ ಮಾಡುತ್ತಾರೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಶಿಬಿರಗಳನ್ನು ಆಯೋಜಿಸುತ್ತಾರೆ. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಬಟ್ಟೆ, ಹೊದಿಕೆಯಂತಹ ವಸ್ತುಗಳನ್ನು ಪೂರೈಸುತ್ತೇವೆ ಎನ್ನುತ್ತಾರೆ ಪ್ರತಿಬಿಂಬ ಸದಸ್ಯರಲ್ಲೊಬ್ಬರಾದ ಶ್ರೀಕಂಠ ಭಾರಧ್ವಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.