ADVERTISEMENT

ಅಡಿಕೆಯಿಂದ ಬುಲೆಟ್ ಪ್ರೂಫ್ ಜಾಕೆಟ್!

ಸಂಶೋಧನೆಗೆ ಮುಂದಾದ ಡಾ. ಗುರುಮೂರ್ತಿ ಹೆಗಡೆ l ವಿವಿಧ ಉತ್ಪನ್ನಗಳ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 21:50 IST
Last Updated 15 ಫೆಬ್ರುವರಿ 2021, 21:50 IST
   

ಬೆಂಗಳೂರು: ನ್ಯಾನೋ ತಂತ್ರಜ್ಞಾನ ಬಳಸಿ ಅಡಕೆಯಿಂದ ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿ ಬಳಸಬಹುದಾದಷ್ಟು ಸಾಮರ್ಥ್ಯ ಇರುವ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ತಯಾರಿಸುವ ಸಂಶೋಧನೆ ಫಲ ಕೊಡುವತ್ತ ಸಾಗಿದೆ.

ನಗರದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ನ್ಯಾನೋ ಮೆಟಿರಿಯಲ್ಸ್‌ ಆ್ಯಂಡ್‌ ಡಿಸ್‌ಪ್ಲೇಸ್‌ ಕೇಂದ್ರದಲ್ಲಿ ಅಡಿಕೆ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಮೇಲೆ ಪ್ರಯೋಗಗಳು ನಡೆಯುತ್ತಿವೆ.

ಕೇಂದ್ರದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಗುರುಮೂರ್ತಿ ಹೆಗಡೆ ಅವರು ವಿದ್ಯಾರ್ಥಿಗಳ ನೆರವಿನಿಂದ ಈಗಾಗಲೇ ಅಡಿಕೆಯ ನ್ಯಾನೋ ಪಾರ್ಟಿಕಲ್‌ನಿಂದ ಎಪಾಕ್ಸಿ ಫೈಬರ್ ಗಾಜು, ನೀರಿನ ಪೈಪ್‌, ಬ್ಯಾಟರಿ, ನೀರು ಶುದ್ಧಿಕಾರಕ ಪರಿಕರ, ನೆಲ ಸ್ವಚ್ಛತಾ ದ್ರಾವಣ ಸೇರಿದಂತೆ ವಿವಿಧ ವಸ್ತುಗಳನ್ನು ಸಿದ್ಧಗೊಳಿಸಿದ್ದಾರೆ. ಅವರು ಈ ಸಂಶೋಧನೆಗಳ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿದ್ದು, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಕೂಡ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.

ADVERTISEMENT

ಅಡಿಕೆಯಿಂದ ಸಂಶೋಧಿಸಿರುವ ಉತ್ಪನ್ನಗಳನ್ನು ರಾಜ್ಯ ಸರ್ಕಾರದ ನೆರವಿನಿಂದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅಡಿಕೆ ಕಾರ್ಯಪಡೆಗೆ ಮಾದರಿ ಪ್ರದರ್ಶಿಸಿ, ಪೂರಕ ದಾಖಲಾತಿಗಳನ್ನು ಒದಗಿಸಿದ್ದಾರೆ. ಅಡಿಕೆಯ ನ್ಯಾನೋ ಪಾರ್ಟಿಕಲ್‌ ನೆರವಿನಿಂದ ಮುಂದಿನ ದಿನಗಳಲ್ಲಿ ಮದ್ದು ಗುಂಡುಗಳು, ಮೊಬೈಲ್ ಪರದೆ, ನೀರಿನ ಬಾಟಲಿ ಸೇರಿದಂತೆ ವಿವಿಧ ವಸ್ತುಗಳನ್ನು ಸಂಶೋಧಿಸಲು ಮುಂದಾಗಿದ್ದಾರೆ. ಬುಲೆಟ್‌ ಫ್ರೂಪ್ ಜಾಕೆಟ್‌ಗಳನ್ನು ಡಿಆರ್‌ಡಿಒ ಪ್ರಯೋಗಾಲಯದ ಸಹಯೋಗದಲ್ಲಿ ಸಿದ್ಧಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. 10 ವರ್ಷಗಳು ವಿದೇಶದಲ್ಲಿದ್ದ ಅವರು, ಕಳೆದ 5 ವರ್ಷಗಳಿಂದ ಇಲ್ಲಿ ಸಂಶೋಧನೆನಡೆಸುತ್ತಿದ್ದಾರೆ.

ಅಧಿಕ ಬಾಳಿಕೆ: ‘ಮೊದಲು ಅಡಿಕೆ ಸಿಪ್ಪೆಯನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಆದರೆ, ಅದರಲ್ಲಿ ನಮಗೆ ಫಲಿತಾಂಶ ದೊರೆಯಲಿಲ್ಲ. ಅಡಿಕೆಯನ್ನು ಪುಡಿಮಾಡಿ, ಸಾವಿರ ಡಿಗ್ರಿಯಲ್ಲಿ ನ್ಯಾನೋ ಪಾರ್ಟಿಕಲ್ ಆಗಿ ಪರಿವರ್ತಿಸಲಾಯಿತು. ಅದರಿಂದ ಬ್ಯಾಟರಿ ತಯಾರಿಸಲಾಯಿತು. ಬಳಿಕ ವಿವಿಧ ವಸ್ತುಗಳನ್ನು ಸಂಶೋಧಿಸಿದೆವು’ ಎಂದು ಗುರುಮೂರ್ತಿ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬುಲೆಟ್‌ ಫ್ರೂಪ್ ಜಾಕೆಟ್ ತಯಾರಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಲೋಹದ ಗುಂಡುಗಳ ಬದಲು ಅಡಿಕೆಯ ಗುಂಡುಗಳನ್ನು ಕೂಡ ತಯಾರಿಸಲು ನಿರ್ಧರಿಸಿದ್ದೇವೆ. ಅದರ ಪರಿಣಾಮದ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಅದೇ ರೀತಿ, ಡಾಂಬರುಗಳ ಜತೆಗೆ ಅಡಿಕೆಯ ನ್ಯಾನೋ ಪಾರ್ಟಿಕಲ್ ಮಿಶ್ರಣ ಮಾಡಿ, ರಸ್ತೆಗಳಿಗೆ ಬಳಸಲಾಗಿದೆ. ಸಿಮೆಂಟ್‌ಗೆ ಜತೆಗೆ ಕೂಡ ಸೇರಿಸಿ, ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಬಹುದು. ಈಗ ಸಿದ್ಧಪಡಿಸಿರುವ ಎಲ್ಲ ವಸ್ತುಗಳು ಮಾರುಕಟ್ಟೆಯಲ್ಲಿ ಇರುವ ವಸ್ತುಗಳಿಗಿಂತ ಶೇ 30 ರಷ್ಟು ಹೆಚ್ಚು ಬಲಿಷ್ಠ ಎನ್ನುವುದು ಸಾಬೀತಾಗಿದೆ’ ಎಂದು
ವಿವರಿಸಿದರು.

ಅಡಿಕೆಯಿಂದ ಫೈಬರ್ ಗಾಜು ಸಿದ್ಧ
‘ಎಪಾಕ್ಸಿ ಫೈಬರ್ ಗಾಜನ್ನು ಕೂಡ ಅಡಿಕೆಯಿಂದ ತಯಾರಿಸಲಾಗಿದೆ. ಇದು 200 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳಲಿದೆ. ಯಾವುದೇ ಗೀರುಗಳು ಕೂಡ ಇದರ ಮೇಲೆ ಬೀಳುವುದಿಲ್ಲ. ಹೆಚ್ಚಿನ ಅವಧಿ ಬಾಳಿಕೆ ಬರಲಿದೆ. ಬಾಗಿಲುಗಳ ರೂಪದಲ್ಲಿ, ಮನೆಗಳ ಮುಂದೆ ಹಾಕುವ ಪಾರದರ್ಶಕ ಮೇಲು ಹಾಸು, ಶಾಲಾ–ಕಾಲೇಜಗಳಲ್ಲಿ ಬಳಸುವ ಬೋರ್ಡ್‌ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬಳಸಬಹುದು. ಔಷಧ ಉದ್ಯಮಗಳಲ್ಲಿ ಪೆಲಾಡಿಯಂ ಕಾರ್ಬನ್‌ ಕೆಟಲಿಸ್ಟ್‌ಗೆ ಬದಲಾಗಿ ಅಡಿಕೆಯ ನ್ಯಾನೋ ಪಾರ್ಟಿಕಲ್‌ ಅನ್ನು ಬಳಸಬಹುದು ಎಂಬುದನ್ನು ದೃಢಪಡಿಸಲಾಗಿದೆ’ ಎಂದರು.

***

ಕಳೆದ ನಾಲ್ಕು ವರ್ಷಗಳ ಸಂಶೋಧನೆಗಳು ಈಗ ಫಲಿತಾಂಶ ನೀಡುತ್ತಿವೆ. ಸಿದ್ಧಗೊಂಡ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ.
-ಡಾ. ಗುರುಮೂರ್ತಿ ಹೆಗಡೆ, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.