ADVERTISEMENT

ಸೂರ್ಯನ 'ಕರೋನ' ಮುಟ್ಟಿದೆ ನಾಸಾದ ಪಾರ್ಕರ್‌ ಶೋಧ ನೌಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2021, 9:42 IST
Last Updated 15 ಡಿಸೆಂಬರ್ 2021, 9:42 IST
ಪಾರ್ಕರ್‌ ಸೂರ್ಯ ಶೋಧ ನೌಕೆ
ಪಾರ್ಕರ್‌ ಸೂರ್ಯ ಶೋಧ ನೌಕೆ   

ಭೂಮಿಯ ಮೇಲೆ ನಿಂತು ಜ್ವಲಿಸುವ ಸೂರ್ಯನನ್ನು ನೇರವಾಗಿ ದಿಟ್ಟಿಸುತ್ತ ನಿಂತರೆ ದೃಷ್ಟಿಯೇ ಇಲ್ಲವಾಗಬಹುದು...ಸೂರ್ಯನಿಂದ ಹೊಮ್ಮುವ ಪ್ರಕಾಶಮಾನ ಕಿರಣಗಳು, ಸೂರ್ಯ ಮಾರುತದ ಪ್ರಭಾವ ತೀಕ್ಷ್ಣವಾದುದು. ಬೇಸಿಗೆಯಲ್ಲಿ ಬಿಸಿಗಾಳಿಯ ಪರಿಣಾಮದಿಂದ ಹಲವು ಮಂದಿ ಸಾವಿಗೀಡಾಗುವ ವರದಿಗಳನ್ನೂ ಕಂಡಿದ್ದೇವೆ. ಭಾರತದ ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿರುವ ಹನುಮಂತನು ಚಿಕ್ಕಂದಿನಲ್ಲಿ ಉದಯಿಸುತ್ತಿರುವ ಸೂರ್ಯನನ್ನು ಹಿಡಿಯಲು ಅವನತ್ತ ಹಾರಿದ್ದನಂತೆ. ಈಗ ನಾಸಾದ 'ಪಾರ್ಕರ್‌' ಬಾಹ್ಯಾಕಾಶ ಶೋಧ ನೌಕೆಯು ಸಹ ಸೂರ್ಯನಿಗೆ ಸಮೀಪದಲ್ಲಿ ಸಾಗಿದೆ.

ಅಸಾಧ್ಯವೆಂದೇ ಪರಿಗಣಿಸಲಾಗಿದ್ದ ಹಂತವನ್ನು ಪಾರ್ಕರ್‌ ಶೋಧ ನೌಕೆ ತಲುಪಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯೊಂದು ಸೂರ್ಯನ ಪ್ರಭಾವ ವಲಯವನ್ನು (ಕರೋನ) ಮುಟ್ಟಿದೆ. ಸೂರ್ಯನ ಮೇಲ್ಮೈನಿಂದ 40.89 ಲಕ್ಷ ಮೈಲಿ ದೂರದ ವಾತಾವರಣದಲ್ಲಿ 'ಪಾರ್ಕರ್‌' ಸಾಗಿದೆ. ಮಾನವ ನಿರ್ಮಿತ ಸಾಧನವೊಂದು ಸೂರ್ಯನಿಗೆ ಇಷ್ಟು ಸಮೀಪದಲ್ಲಿ ಅಧ್ಯಯನ ನಡೆಸಿರುವುದು ಇದೇ ಮೊದಲು. ಸೌರ ವಿಜ್ಞಾನ ಕ್ಷೇತ್ರಕ್ಕೆ ಮತ್ತು ಇಡೀ ಮನುಕುಲಕ್ಕೆ ಇದು ಮಹತ್ತರ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಸೂರ್ಯನ ಸಮೀಪದಲ್ಲಿ ಪ್ರದಕ್ಷಿಣೆ ಹಾಕುತ್ತ, ಹಲವು ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕಲು 2018ರಲ್ಲಿ ಸೂರ್ಯ ಶೋಧಕ ನೌಕೆ ಪಾರ್ಕರ್‌ ಉಡಾವಣೆ ಮಾಡಲಾಗಿತ್ತು. ಸಂಶೋಧಕರ ಹಲವು ದಶಕಗಳ ಅಧ್ಯಯನ ಹಾಗೂ ಉಡಾವಣೆಯಾಗಿ ಮೂರು ವರ್ಷಗಳ ಬಳಿಕ ಪಾರ್ಕರ್‌ ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಗರಿಗೆದರಿಸಿದೆ.

ADVERTISEMENT

ಹಾರ್ವಡ್‌ ಮತ್ತು ಸ್ಮಿತ್‌ಸೋನಿಯನ್‌ನ (ಸಿಎಫ್‌ಎ) ಖಭೌತ ಶಾಸ್ತ್ರಜ್ಞರು, ಹಲವು ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಜೊತೆಯಾಗಿ ಪಾರ್ಕರ್‌ ಶೋಧ ನೌಕೆಯ ನಿರ್ಮಾಣ ಮತ್ತು ನಿರ್ವಹಣೆ ನಡೆಸಿದ್ದಾರೆ. ಸೂರ್ಯನ ವಾತಾವರಣದಿಂದ ಕಣಗಳನ್ನು ಸಂಗ್ರಹಿಸುವ ಮೂಲಕ ಶೋಧ ನೌಕೆಯು ಕರೋನ ದಾಟಿರುವುದನ್ನು ದೃಢಪಡಿಸಿದೆ. ಪಾರ್ಕರ್‌ನಲ್ಲಿರುವ 'ಕಪ್‌' ಸೂರ್ಯನಲ್ಲಿರುವ ಕಣಗಳನ್ನು ಸಂಗ್ರಹಿಸಲು ಸಹಕಾರಿಯಾಗಿದೆ. ಸೂರ್ಯನ ಶಾಖಕ್ಕೆ ನೇರವಾಗಿ ಒಡ್ಡಿಕೊಳ್ಳುವ ಕಪ್‌ ಸುಮಾರು 1,000 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಿಂದಾಗಿ ಕೆಂಪಗೆ ಉರಿಯುವಂತಿರುತ್ತದೆ.

ಪಾರ್ಕರ್‌ ಶೋಧ ನೌಕೆಯ ಚಲನೆ– ಚಿತ್ರ ಕೃಪೆ: ನಾಸಾ ವೆಬ್‌ಸೈಟ್‌

ಆಲ್ಫೆನ್‌ ವಲಯವನ್ನು ದಾಟಿ ಪಾರ್ಕರ್‌ ಶೋಧ ನೌಕೆಯು ಮುಂದೆ ಸಾಗುತ್ತಿರುವುದಾಗಿ ವಿಜ್ಞಾನಿಗಳು ನಂಬಿದ್ದಾರೆ. ಸೂರ್ಯನ ವಾತಾವರಣದ ಅತ್ಯಧಿಕ ಉಷ್ಣಾಂಶದಿಂದ ರಕ್ಷಣೆ ನೀಡಲು ಪಾರ್ಕರ್‌ಗೆ ಕವಚ ಅಳವಡಿಸಲಾಗಿದೆ. ಉಷ್ಣಾಂಶದಿಂದ ಶೋಧಕ ನೌಕೆಯ ಸಾಧನಗಳನ್ನು ರಕ್ಷಿಸುವ ಸಲುವಾಗಿ ಅವುಗಳನ್ನು ಅಧಿಕ ಕುದಿ ಬಿಂದು ಹೊಂದಿರುವ ವಸ್ತುಗಳಿಂದ ತಯಾರಿಸಲಾಗಿದೆ. ಟಂಗ್‌ಸ್ಟನ್‌, ನಿಯೊಬಿಯಮ್‌, ಮಾಲಿಬ್ಡೆನಮ್‌ ಹಾಗೂ ಸಫೈರ್‌ ಬಳಕೆ ಮಾಡಲಾಗಿದೆ.

ಸೂರ್ಯನ ಮೇಲ್ಮೈ ಭೂಮಿಯ ರೀತಿ ಘನವಾದ ನೆಲವನ್ನು ಹೊಂದಿಲ್ಲ. ಗುರುತ್ವಾಕರ್ಷಣೆ ಮತ್ತು ಕಾಂತೀಯ ಬಲದಿಂದಾಗಿ ಸೂರ್ಯನಿಗೆ ಅಂಟಿಕೊಂಡಂತೆ ಇರುವ ಅತ್ಯಧಿಕ ಉಷ್ಣತೆಯ ವಾತಾವರಣವಿದೆ.

ನಿಗೂಢ ಪ್ರಶ್ನೆಗಳು ಮತ್ತು ಸಿಗಬಹುದಾದ ಉತ್ತರಗಳು...

* ಸೂರ್ಯನಿಗಿಂತಲೂ (5,500 ಡಿಗ್ರಿ ಸೆಲ್ಸಿಯಸ್‌) ಸೂರ್ಯನ ಹೊರ ಮೇಲ್ಮೈ ವಾತಾವರಣವು (20 ಲಕ್ಷ ಡಿಗ್ರಿ ಸೆಲ್ಸಿಯಸ್‌) ಅಧಿಕ ಉಷ್ಣತೆ ಹೊಂದಿರುವುದೇಕೆ?

* ಸೂರ್ಯನ ಮೇಲ್ಮೈನಲ್ಲಿ ಉಕ್ಕುತ್ತಿರುವ ಶಕ್ತಿಯನ್ನು ಸೂರ್ಯನ ಹೊರ ವಾತಾವರಣವು ಹೇಗೆ ಹೀರಿಕೊಳ್ಳುತ್ತಿದೆ?

* ಭೂಮಿಗೆ ನೇರ ಪರಿಣಾಮ ಉಂಟು ಮಾಡಬಹುದಾದ ಸೂರ್ಯನ ಮಾರುತಗಳ ಬಗೆಗಿನ ಆಳವಾದ ಅಧ್ಯಯ...

* ಪಾರ್ಕರ್‌ ಶೋಧ ನೌಕೆಯು ಕರೋನ ವಲಯವನ್ನು ಮುಟ್ಟಿರುವುದರಿಂದ ದೂರದಿಂದ ಅಧ್ಯಯನ ನಡೆಸಲು ಅಸಾಧ್ಯವಾದುದನ್ನು ತಿಳಿಯಲು ಅಗತ್ಯ ಮಾಹಿತಿ ಸಿಗುವ ಸಾಧ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.