ADVERTISEMENT

ಗುರು, ಶನಿ ಗ್ರಹಗಳ ಅಪೂರ್ವ ಸಮಾಗಮ

ಬಿ.ಎಸ್.ಶೈಲಜಾ
Published 19 ಡಿಸೆಂಬರ್ 2020, 19:30 IST
Last Updated 19 ಡಿಸೆಂಬರ್ 2020, 19:30 IST
ಗುರು
ಗುರು   

ಯಾರೋ ಇಬ್ಬರು ಒಬ್ಬರನ್ನೊಬ್ಬರು (ದೊಡ್ಡ ಮನುಷ್ಯರು ಎಂದುಕೊಳ್ಳೋಣ) ನಿಧಾನವಾಗಿ ಸಮೀಪಿಸುತ್ತಿದ್ದಾರೆ ಎಂದ ಕೂಡಲೇ ಅವರ ನಡುವಿನ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲ ಉಂಟಾಗುತ್ತದೆ. ಸಮಾಧಾನಕರವಾದ ನಮಸ್ಕಾರ, ಹಸ್ತಲಾಘವ ಇರಬಹುದು ಅಥವಾ ಡಿಕ್ಕಿ ಹೊಡೆದು ಜಗಳ ಕಾಯಲೂಬಹುದು. ಆಕಾಶಕಾಯಗಳದ್ದೂ ಇದೇ ಕತೆ. ಬಹಳ ಹಿಂದಿನಿಂದಲೂ ಈ ಬಗೆಯ ಘಟನೆಗಳಿಗೆ ವಿಶೇಷ ಮಹತ್ವ ಕೊಡಲಾಗಿದೆ. ಅವು ‘ಯುದ್ಧ ಮಾಡಲಿವೆಯೇ? ಅಥವಾ ಸಮಾಗಮ ಅಷ್ಟೇನೆ’ ಎಂಬಂತಹ ಪ್ರಶ್ನೆಗಳಿಗೆ ಮುಂಚಿತವಾಗಿ ಉತ್ತರ ಕಂಡುಕೊಂಡು ಆಕಾಶದಲ್ಲಿ ಅವುಗಳನ್ನು ಪರಿಶೀಲಿಸಿ ತಮ್ಮ ಲೆಕ್ಕದ ಹಿರಿಮೆಯನ್ನು ಪ್ರದರ್ಶಿಸುವ ಸನ್ನಾಹ ಇದ್ದರೂ ಇರಬಹುದು.

ಇಂದಿನ ಇಂಟರ್‌ನೆಟ್ ಯುಗದಲ್ಲಿ ಇದೇನೂ ಚಮತ್ಕಾರ ಎನ್ನಿಸುವುದಿಲ್ಲ. ಆದರೂ ಇದೇ ಡಿಸೆಂಬರ್ 21ರ ಸಮಾಗಮ ಬಹಳ ಮಹತ್ವ ಪಡೆಯುತ್ತಿದೆ. ಎಂದೂ ಆಕಾಶವನ್ನೇ ನೋಡದವರು ದುರ್ಬೀನು, ದೂರದರ್ಶಕಗಳ ದೂಳು ಒರೆಸುತ್ತಿದ್ದಾರೆ.

ಸೂರ್ಯನನ್ನು ಅವಿರತವಾಗಿ ಸುತ್ತುವ ಗ್ರಹಗಳನ್ನು ಭೂಮಿಯಿಂದ ನೋಡಿದಾಗ ಪರಸ್ಪರರಿಗೆ ಅಡ್ಡ ಬರುವಂತೆ ಕಾಣುವುದು ಬಹಳ ಸಹಜವೇ ಆದರೂ ಅದು ಅಪರೂಪದ ಘಟನೆ. ಗ್ರಹಗಳ ಕಕ್ಷೆಗಳ ತಲಗಳೇ ಬೇರೆ; ವೇಗಗಳೂ ಬೇರೆ. ಆದ್ದರಿಂದ ಅವು ಒಂದನ್ನೊಂದು ಮರೆಮಾಡುವ ಘಟನೆಗಳು ಬಹಳ ಅಪರೂಪವೇ. ಸೂರ್ಯ ಮತ್ತು ಚಂದ್ರ ದೊಡ್ಡ ಗಾತ್ರದ್ದಾಗಿ ಕಾಣುವ ಕಾಯಗಳು. ಅತಿ ಪ್ರಕಾಶಮಾನವಾದ ಕಾಯಗಳು. ಅವು ಹೀಗೆ ಒಂದಕ್ಕೊಂದು ಅಡ್ಡಬಂದರೆ ಬೆಳಕು ಕುಂದುವ ಪರಿಣಾಮ ಎಲ್ಲರ ಗಮನಕ್ಕೆ ಬಂದೇ ಬರುತ್ತದೆ. ಗ್ರಹಗಳ ‘ಗ್ರಹಣ’ಗಳನ್ನು ನೋಡಲು ಆಕಾಶವನ್ನು ತಲೆ ಎತ್ತಿ ನೋಡುವ ಅಭ್ಯಾಸ ಇರಲೇಬೇಕು.

ADVERTISEMENT

ನೂರಾರು ವರ್ಷಗಳ ಹಿಂದಿನ ಖಗೋಳ ಗ್ರಂಥಗಳಲ್ಲಿ ಈ ಬಗೆಯ ಸಮಾಗಮಗಳಿಗೆ ಮೀಸಲಾದ ಒಂದು ಅಧ್ಯಾಯವೇ ಕಂಡುಬರುತ್ತದೆ. ಅವು ಒಂದು ಡಿಗ್ರಿಗಿಂತ ಹತ್ತಿರ ಬಂದರೆ ಯುದ್ಧ ಎಂದೂ, ಇಲ್ಲದಿದ್ದರೆ ಸಮಾಗಮ ಎಂದೂ ಕರೆಯಲಾಗುತ್ತಿತ್ತು. ಸೂರ್ಯ ಸಿದ್ಧಾಂತದಲ್ಲಿ ಇವುಗಳ ವರ್ಗೀಕರಣವೂ ಇದೆ. ಉಲ್ಲೇಖ, ಭೇದ, ಅಪಸವ್ಯ, ಅಂಶುವಿಮರ್ದ ಮತ್ತು ಸಮಾಗಮ - ಎಂಬ ಈ ವರ್ಗಗಳಲ್ಲಿ ಭೇದ ಎಂಬುದು ಬಹಳ ಆಕರ್ಷಕವಾದುದು. ಒಂದು ಗ್ರಹ ಇನ್ನೊಂದನ್ನು ಮುಚ್ಚಿಹಾಕುವ ಈ ಘಟನೆಗೆ ಆಚ್ಛಾದನೆ ಎಂದೂ ಹೆಸರಿದೆ. ಇದನ್ನು ಖಗೋಳಜ್ಞರು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು ಎಂದು ಊಹಿಸಬಹುದು. ಭಾರತಕ್ಕೆ ದೂರದರ್ಶಕಗಳು ಕಾಲಿಡುವ ಮೊದಲಿನಿಂದಲೂ ಬರಿಗಣ್ಣಿನಿಂದಲೇ ಇವುಗಳ ವೀಕ್ಷಣೆ ನಡೆಯುತ್ತಿದ್ದಿರಬೇಕು ಎಂಬ ಸುಳಿವು ನಮಗೆ 1874ರ ಒಂದು ಪುಸ್ತಕದಲ್ಲಿ ಸಿಗುತ್ತದೆ. ಮದ್ರಾಸು ವೀಕ್ಷಣಾಲಯದಲ್ಲಿದ್ದ ಚಿಂತಾಮಣಿ ರಘುನಾಥಾಚಾರಿ ಅವರು ಶುಕ್ರ ಸಂಕ್ರಮದ ಕುರಿತು ಬರೆದ ಪುಸ್ತಕದಲ್ಲಿ ಚಂದ್ರ, ಶುಕ್ರ ಗ್ರಹವನ್ನು ಮರೆಮಾಡುವ ‘ಭೇದ ಯುತಿ’ಯ ಕುರಿತು ವಿವರಿಸಿ ಅದನ್ನು ವೀಕ್ಷಿಸುವ ವಿಧಾನವನ್ನೂ ತಿಳಿಸಿದ್ದಾರೆ. ಅದೇ ಸುಮಾರಿನಲ್ಲಿ ಒಡಿಶಾದಲ್ಲಿದ್ದ ಪಠಾನಿ ಚಂದ್ರಶೇಖರ ಸಮಂತ ಎಂಬ ಖಗೋಳಜ್ಞರೂ ಇಂತಹ ಘಟನೆಗಳನ್ನು ವೀಕ್ಷಿಸಲು ಸರಳವಾದ ಉಪಕರಣವೊಂದನ್ನು ಸ್ವತಃ ತಯಾರಿಸಿಕೊಂಡಿದ್ದರು.

ಇನ್ನೂ ಮುಂಚೆ ಇವುಗಳನ್ನು ವೀಕ್ಷಿಸುತ್ತಿದ್ದರು ಎಂಬ ಸಾಕ್ಷಿ ನಮಗೆ ದೊರಕುವುದು ಪಠ್ಯಪುಸ್ತಕಗಳಲ್ಲಲ್ಲ. ಹಳ್ಳಿಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಶಿಲಾ ಶಾಸನಗಳಲ್ಲಿ. ಸಾಮಾನ್ಯವಾಗಿ ದೇವಸ್ಥಾನಗಳಿಗೆ ದಾನ ದತ್ತಿ ನೀಡುವ ಈ ಶಾಸನಗಳಲ್ಲಿ ದಿನಾಂಕವನ್ನು ಬಹಳ ನಿಖರವಾಗಿ ನಮೂದಿಸಲಾಗುತ್ತಿತ್ತು. ಗ್ರಹಣ, ವೈಶಾಖ ತದಿಗೆ (ಅಕ್ಷ ತದಿಗೆ), ಸಂಕ್ರಮಣಗಳು ಮುಂತಾದವುಗಳು ದಾನಕ್ಕೆ ಬಹಳ ಪ್ರಶಸ್ತವಾದುವೆಂದು ಪರಿಗಣಿಸಲಾಗುತ್ತಿದ್ದುದರಿಂದ ಆಯಾ ವಿವರಗಳೆಲ್ಲ ದಾಖಲಾಗಿರುತ್ತವೆ. ಗ್ರಹಗಳು ಒಟ್ಟಾಗುವ ಸಂದರ್ಭಗಳೂ ಇಲ್ಲಿ ಸೇರುತ್ತವೆ. ಆರು ಗ್ರಹಗಳು ಸೇರಿದಾಗ ತುಲಾಪುರುಷದಾನ ಎಂದು ರಾಜನ ತೂಕಕ್ಕೆ ಸಮನಾದ ಚಿನ್ನ ಇತ್ಯಾದಿಗಳನ್ನು ದಾನ ಮಾಡುತ್ತಿದ್ದರು. ಸೂರ್ಯ ಮತ್ತು ಚಂದ್ರ ಅಷ್ಟೇ ಅಲ್ಲ; ರಾಹು ಮತ್ತು ಕೇತು ಎಂಬ ಪರ್ವಬಿಂದುಗಳನ್ನೂ ಗ್ರಹಗಳು ಎಂದೇ ಲೆಕ್ಕ ಮಾಡುತ್ತಿದ್ದರು. ಹಾಗಾಗಿ ಅಷ್ಟಗ್ರಹಯೋಗ ಅಂದರೆ ಎಂಟು ಗ್ರಹಗಳು ಗುಂಪುಗೂಡುವ ಅಪರೂಪದ ಸಂದರ್ಭಗಳು ವಿಶೇಷ ಮನ್ನಣೆ ಪಡೆಯುತ್ತಿದ್ದವು. ಒಂಬತ್ತನೆಯದು ಕೇತು - ಇದು ರಾಹುವಿನಿಂದ 180 ಡಿಗ್ರಿ ದೂರದಲ್ಲಿರಬೇಕೆಂಬುದೇ ವ್ಯಾಖ್ಯೆ. ಆದ್ದರಿಂದ ಉಳಿದ ಎಂಟು ಮಾತ್ರ ಗುಂಪುಗೂಡಬಹುದು. 1665ರಲ್ಲಿ ಇಂತಹ ಸಂದರ್ಭದಲ್ಲಿ ಪೂರ್ಣ ಸೂರ್ಯಗ್ರಹಣವೂ ಸಂಭವಿಸಿತ್ತು. ಮೈಸೂರು ಮಹಾರಾಜರು ತುಲಾಪುರುಷ ದಾನ ಮಾಡಿದ್ದನ್ನು ಹಲವಾರು ಶಾಸನಗಳು ದಾಖಲು ಮಾಡಿವೆ.

ಹೀಗೆ ಶಾಸನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ (ಅತಿ ಹಳೆಯ) ಖಚಿತವಾದ ದಾಖಲೆ ದೊರಕಿದ್ದು 1111ರ ನವೆಂಬರ್ 13ರದ್ದು. ಚಂದ್ರನು ರೋಹಿಣಿ ನಕ್ಷತ್ರವನ್ನು ಮರೆಮಾಡಿದ ಘಟನೆ. ಮುಂದೆ 1117ರ ಅಕ್ಟೋಬರ್ 2ರಂದು ಶನಿ ಮತ್ತು ರೋಹಿಣಿ ಬಹಳ ಹತ್ತಿರದಲ್ಲೇ ಇದ್ದುವೆಂದು ತಿಳಿಸುವಲ್ಲಿ ನಿಜವಾಗಿ ವೀಕ್ಷಣೆ ನಡೆಸಿದ್ದಾರೆ ಎಂಬುದು ವೇದ್ಯವಾಗುತ್ತದೆ. ಏಕೆಂದರೆ ಶನಿಯ ಚಲನೆ ಬಹಳ ನಿಧಾನ. ಅದು ರೋಹಿಣಿಗೆ ಹತ್ತಿರವಾಗಿ ಎರಡು ಮೂರು ದಿನಗಳು ಕಾಣುವುದು. ಅದರಲ್ಲಿ ಸಮೀಪ ಯಾವುದು ಎಂದು ನಡುವಿನ ಕೋನವನ್ನು ಅಳತೆ ಮಾಡಿ ನೋಡಿದಲ್ಲಿ ಮಾತ್ರ ಖಚಿತವಾಗುವುದು. ಎರಡು ತಿಂಗಳ ನಂತರ ಪುನಃ ಶನಿರೋಹಿಣಿಯುತ ಎಂಬ ಇನ್ನೊಂದು ಶಾಸನವಿದೆ. ಇದು ಹೇಗೆ ಸಾಧ್ಯ? ಇಲ್ಲಿ ಇನ್ನೊಂದು ಮಹತ್ವದ ವೀಕ್ಷಣೆ ಅಡಗಿದೆ. ಭೂಮಿಯು ಯಾವುದೇ ಗ್ರಹವನ್ನು ಹಿಂದೆಹಾಕಿ ಮುಂದೆ ಓಡಿದಾಗ ಅವು ಹಿಂದಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ಹಿನ್ನಡೆ ಎನ್ನಬಹುದಾದರೂ ವಕ್ರ ಎಂಬುದು ಜನಪ್ರಿಯವಾಗಿದೆ. (- ನೇರವಾಗಿ ಹೋಗಬೇಕಾದದ್ದು ವ್ಯತಿರಿಕ್ತ ದಿಕ್ಕಿಗೆ ಹೊರಟಿದೆ ಎಂದು) ಈ ನಡೆಯಲ್ಲಿ ಶನಿ ರೋಹಿಣಿಯನ್ನು ದಾಟಿ ಹಿಂದಕ್ಕೆ ಹೋಗಿ ಪುನಃ ನೇರ ನಡೆಗೆ ಬಂದಾಗ ಮತ್ತೆ ರೋಹಿಣಿಯ ಜೊತೆಗೂಡಿದೆ.

ತಿಪಟೂರಿನ ಒಂದು ಶಾಸನ 1134ರ ಜೂನ್ 5ರಂದು ನಡೆದ ಬುಧ ಮತ್ತು ರೋಹಿಣಿ ಸಮಾಗಮವನ್ನು ದಾಖಲಿಸಿದೆ. ಬುಧ ಬಹಳ ವೇಗವಾಗಿ ಓಡುವ ಗ್ರಹ, ಅದರ ಸ್ಥಾನವನ್ನು ನಿಖರವಾಗಿ ಸೂಚಿಸಿರುವುದರ ಕ್ಷಮತೆ ಇಲ್ಲಿ ಕಾಣುತ್ತದೆ.

ಗುರು ಮತ್ತು ಸೂರ್ಯ ಜೊತೆಯಾಗಿದ್ದನ್ನು ಎರಡು ಮೂರು ಶಾಸನಗಳಿಂದ ತಿಳಿಯಬಹುದು. ಇದಂತೂ ಲೆಕ್ಕಮಾಡಿ ತಿಳಿದದ್ದೇ ಆಗಿರಬೇಕು. ಚಂದ್ರ ರೋಹಿಣಿ ಜೊತೆಯಾದ ಶಾಸನಗಳು ಆಚ್ಛಾದನೆಯನ್ನೇ ಸೂಚಿಸುತ್ತವೆ ಎನ್ನಬಹುದು. ಏಕೆಂದರೆ ಪ್ರತಿ ತಿಂಗಳೂ ಚಂದ್ರ ರೋಹಿಣಿಯ ಪಕ್ಕ ಹಾದು ಹೋಗುವುದರಲ್ಲಿ ವಿಶೇಷವೇನೂ ಇರುವುದಿಲ್ಲ.

ಹೊಳೆನರಸೀಪುರದ 1392ರ ಸೆಪ್ಟೆಂಬರ್ 2ರ ಶಾಸನ ಸ್ಪಷ್ಟವಾಗಿ ಭಾರ್ಗವೇ ಭೌಮಸುತಯುತೇ ಎಂದು ಬರೆದಿದೆ. ಶುಕ್ರ ಮತ್ತು ಬುಧ ಗ್ರಹಗಳ ಸಮಾಗಮ ಇದು. 1675ರ ಮಾರ್ಚ್ 28ರ ಕನಕಗಿರಿಯ ಶಾಸನ ಬುಧೈಂದವಃ ಸಂಯುತೇ ಎಂದು ಬುಧ ಮತ್ತು ಚಂದ್ರ - ಇವುಗಳ ಸಮಾಗಮವನ್ನು ಸೂಚಿಸುತ್ತದೆ.

1604ರಲ್ಲಿ ಶೃಂಗೇರಿಯ ಶಂಕರ ನಾರಾಯಣ ಜೋಯಿಸರು ಬರೆದ ಗಣಿತಗನ್ನಡಿ ಎಂಬ ವ್ಯಾಖ್ಯಾನ ಗ್ರಂಥದಲ್ಲಿ ಈ ಬಗೆಯ ಸಮಾಗಮಗಳನ್ನು ಲೆಕ್ಕಹಾಕುವ ಅಧ್ಯಾಯವಿದೆ. ಅದರಲ್ಲಿ ಯಾವ ಸಂದರ್ಭದಲ್ಲಿ ಸಮಾಗಮ ಆಗಿಹೋಗಿದೆ ಯಾವ ಸಂದರ್ಭದಲ್ಲಿ ಇನ್ನೂ ಆಗಬೇಕಾಗಿದೆ ಎಂಬುದನ್ನು ಸೂಚಿಸುವ ಪಟ್ಟಿಯೊಂದು ಇರುವುದು ವಿಶೇಷ. ಈ ವಿವರಣೆ ಯಾವುದೇ ಸಂಸ್ಕೃತ ಗ್ರಂಥಗಳಲ್ಲಿ ಕಂಡುಬರುವುದಿಲ್ಲ.

ಡಿಸೆಂಬರ್ 21ರ ವಿಶೇಷ

ಕಳೆದ ಎರಡು ಮೂರು ತಿಂಗಳಿಂದ ಸಂಜೆಯ ಆಕಾಶದಲ್ಲಿ ಪಶ್ಚಿಮದಲ್ಲಿ ಕಾಣುತ್ತಿರುವ ಗುರು ಮತ್ತು ಶನಿ ಗ್ರಹಗಳು ಕ್ರಮೇಣ ದಿಗಂತದ ಅಂಚಿಗೆ ಸರಿಯುತ್ತಿವೆ. ಅವೆರಡರ ನಡುವಿನ ಅಂತರ ಕಡಿಮೆಯಾಗುತ್ತದೆ ಎಂಬುದು ಈಗ ಸ್ಪಷ್ಟವಾಗಿ ತಿಳಿಯುತ್ತಿದೆ. ಈ ಅಂತರ 21ರಂದು ಕನಿಷ್ಠವಾಗಿ ಆ ಬಳಿಕ ಅವು ಪುನಃ ದೂರ ದೂರ ಸರಿಯುತ್ತವೆ. ಕನಿಷ್ಠ ಎಂದರೆ 10 ಮಿನಿಟ್. ಒಂದು ಡಿಗ್ರಿಗೆ 60 ಮಿನಿಟ್. ಈ ಸಂಖ್ಯೆಗಳನ್ನು ಊಹೆ ಮಾಡಿಕೊಳ್ಳಲು ಚಂದ್ರನ ಗಾತ್ರವನ್ನು ಆಧಾರವಾಗಿಟ್ಟುಕೊಳ್ಳುವುದು ಸುಲಭ. ಚಂದ್ರ ಎಂಬ ವೃತ್ತದ ವ್ಯಾಸ 30 ಮಿನಿಟ್ (ಅರ್ಧ ಡಿಗ್ರಿ). ಅಂದರೆ ಚಂದ್ರನ ಗಾತ್ರಕ್ಕಿಂತ ಕಡಿಮೆ ಅಂತರದಲ್ಲಿ ಇವು ಸಮೀಪಿಸುತ್ತವೆ ಎಂದು ಅರ್ಥ. ಇದು ಆಗಾಗ್ಗೆ ಆಗುತ್ತಲೇ ಇರುತ್ತದೆಯಲ್ಲವೇ? ಅದೇನು ವಿಶೇಷ? ಪ್ರತಿ 20 ವರ್ಷಕ್ಕೊಮ್ಮೆ ಅವು ಸಮೀಪಿಸುವುದೇನೋ ನಿಜ. 2000ದಲ್ಲಿ ಅವು ಸಮೀಪಿಸಿದ್ದಾಗ (ಉಳಿದ ಗ್ರಹಗಳೂ ಜೊತೆ ಸೇರಿದ್ದವು) ಪ್ರಳಯ ಎಂದು ಗುಲ್ಲೆಬ್ಬಿಸಿದ್ದುದು ನೆನಪಿರಬೇಕು. ಆದರೆ ಇಷ್ಟು ಕಡಿಮೆ ಅಂತರ ಇರಲಿಲ್ಲ. ಆ ಗುಂಪಿನಲ್ಲಿ ಸೂರ್ಯನೂ ಸೇರಿದ್ದರಿಂದ ಆಗ ಇದು ಹಗಲಿನಲ್ಲಿ ನಡೆದಿತ್ತು. ನಮಗೆ ನೋಡುವ ಅವಕಾಶವೂ ಇರಲಿಲ್ಲ. 20-21ರಂದು ದುರ್ಬೀನು ಅಥವಾ ದೂರದರ್ಶಕದಿಂದ ನೋಡಿದರೆ ಒಟ್ಟಿಗೇ ಗುರು ಮತ್ತು ಶನಿ ಅಲ್ಲದೆ ಅವುಗಳ ಉಪಗ್ರಹಗಳನ್ನೂ ನೋಡಬಹುದು.

ಇದನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವೇ? ಎಂಬುದು ಮುಂದಿನ ಪ್ರಶ್ನೆ.

ಸಪ್ತರ್ಷಿ ಮಂಡಲದ ವಶಿಷ್ಟ ಮತ್ತು ಅರುಂಧತಿ ನಕ್ಷತ್ರಗಳನ್ನು ನೋಡಿ. ಅವೆರಡರ ಅಂತರವನ್ನು ಗುರುತಿಸಬಲ್ಲಿರಾ? ಅದರಷ್ಟು ಎಂದುಕೊಳ್ಳಬಹುದು. ಸಪ್ತರ್ಷಿ ಮಂಡಲ? ಅದೆಲ್ಲಿದೆ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯ್ತು ಎನ್ನುತ್ತೀರಾ? ಹೀಗಾದರೂ ಕತ್ತೆತ್ತಿ ನೋಡಿ ಕಡುಬಿನ ರುಚಿ ದೊರಕಿಸಿಕೊಳ್ಳುವ ಪ್ರಯತ್ನ ಮಾಡಿ. ಈ ಹೊಸ ಹವ್ಯಾಸದಿಂದ ಶಾಂತಿಯನ್ನು ದೊರಕಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.