ADVERTISEMENT

ಸಂಸದೀಯ ಸಮಿತಿಯಿಂದ ಫೇಸ್‌ಬುಕ್, ಗೂಗಲ್‌ಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 16:00 IST
Last Updated 28 ಜೂನ್ 2021, 16:00 IST
ಸಾಂದರ್ಭಿಕ ಚಿತ್ರ (ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಎಎಫ್‌ಪಿ)   

ನವದೆಹಲಿ: ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಸರಣೆ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ಸಂಸ್ಥೆ ಮಧ್ಯೆ ನಡೆಯುತ್ತಿರುವ ಘರ್ಷಣೆಯ ನಡುವೆಯೇ, ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಫೇಸ್‌ಬುಕ್ ಮತ್ತು ಗೂಗಲ್ ಅಧಿಕಾರಿಗಳಿಗೆ ಮಂಗಳವಾರ ಹಾಜರಾಗುವಂತೆ ಸೂಚಿಸಿದೆ. ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಆನ್‌ಲೈನ್ ವೇದಿಕೆಗಳ ದುರುಪಯೋಗ ತಡೆಯುವ ಕುರಿತಂತೆ ಸಂಸ್ಥೆಗಳ ಅಧಿಕಾರಿಗಳ ಜೊತೆ ಸ್ಥಾಯಿ ಸಮಿತಿ ಚರ್ಚೆ ನಡೆಸಲಿದೆ.

ಸ್ಥಾಯಿಸಮಿತಿ ಹಂಚಿಕೊಂಡಿರುವ ಕಾರ್ಯಸೂಚಿಯ ಪ್ರಕಾರ, ನಾಗರಿಕರ ಹಕ್ಕುಗಳ ರಕ್ಷಣೆ, ಮಹಿಳಾ ರಕ್ಷಣೆಗೆ ವಿಶೇಷ ಒತ್ತು ಸೇರಿದಂತೆ ಸಾಮಾಜಿಕ ಹಾಗೂ ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವ ವಿಷಯದ ಕುರಿತು ಫೇಸ್‌ಬುಕ್ ಮತ್ತು ಗೂಗಲ್ ಸಂಸ್ಥೆಗಳ ಭಾರತದ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಕೇಳಲಾಗುತ್ತದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಮಿತಿಯು ಈ ಹಿಂದೆ ಟ್ವಿಟ್ಟರ್ ಪ್ರತಿನಿಧಿಗಳನ್ನು ಕರೆಸಿತ್ತು. ಅಮೆರಿಕ ಮೂಲದ ಟ್ವಿಟರ್ ಸಂಸ್ಥೆಯು ಸ್ಥಳೀಯ ಕಾನೂನುಗಳನ್ನು ಅನುಸರಿಸಬೇಕು ಎಂದು ಸೂಚಿಸಿತ್ತು.

ಕೋವಿಡ್ ಕಾರಣದಿಂದಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಿತಿಯ ಮುಂದೆ ಹಾಜರಾಗಲು ಫೇಸ್‌ಬುಕ್ ಈ ಹಿಂದೆ ಅನುಮತಿ ಕೋರಿತ್ತು. ಆದರೆ ಕಂಪನಿ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದು ಸಮಿತಿಯ ಅಧ್ಯಕ್ಷ ತರೂರ್ ಸ್ಪಷ್ಟವಾಗಿ ತಿಳಿಸಿದ್ದರು.

ಮುಂದಿನ ದಿನಗಳಲ್ಲಿ, ಸಮಿತಿಯು ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಕರೆಯಿಸಿಕೊಂಡು, ಇದೇ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.

ಮೇ 26ರಂದು ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಐ.ಟಿ ಕಾಯ್ದೆಗಳ ವಿಚಾರವಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿದೆ. ಕಾಯ್ದೆಗಳನ್ನು ಪ್ರಶ್ನಿಸಿರುವ ವಾಟ್ಸ್‌ಆ್ಯಪ್, ಈಗಾಗಲೇ ಕೋರ್ಟ್ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.