ADVERTISEMENT

Explainer: ಇಂಟರ್‌ನೆಟ್ ಸ್ಲೋ ಆಗಿದೆಯೇ? ಗಾಳಿ ಮಳೆಯೂ ಕಾರಣವಿರಬಹುದು..

ಪಿಟಿಐ
Published 14 ಜೂನ್ 2021, 11:52 IST
Last Updated 14 ಜೂನ್ 2021, 11:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಳೆಗಾಲ ಆರಂಭವಾಗಿದೆ. ಲಾಕ್‌ಡೌನ್ ಜಾರಿಯಲ್ಲಿದ್ದು, ಬಹಳಷ್ಟು ಮಂದಿ ಮನೆಯಲ್ಲಿಯೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುವುದು ಎಂದರೆ ಅದು ಇಂಟರ್‌ನೆಟ್ ಸಂಪರ್ಕ.

ಇಂಟರ್‌ನೆಟ್ ವೈಫೈ ಸಂಪರ್ಕ ನಿಧಾನವಾಗಲು ಪ್ರಮುಖ ಕಾರಣವೆಂದರೆ, ಹವಾಮಾನದಲ್ಲಾಗುವ ಏರುಪೇರು. ಇಂಟರ್‌ನೆಟ್ ಸಂಪರ್ಕ ಮತ್ತು ವೈಫೈ ವೇಗದಲ್ಲಿ ವ್ಯತ್ಯಾಸ ಉಂಟಾಗಲು ಮಳೆ, ಬಿಸಿಲು, ಗಾಳಿಯೂ ಕಾರಣವಾಗಿರುತ್ತದೆ.

ಮಳೆ ಬಂದಾಗ ಸಾಮಾನ್ಯವಾಗಿ ಇಂಟರ್‌ನೆಟ್ ಕೇಬಲ್ ವ್ಯವಸ್ಥೆಗೆ ಸಮಸ್ಯೆಯಾಗಬಹುದು. ಒಂದು ಇಂಟರ್‌ನೆಟ್ ಜಾಲದಲ್ಲಿ ವಿವಿಧ ರೀತಿಯ ಅಂಶಗಳು ಮುಖ್ಯವಾಗುತ್ತವೆ. ಹಳೆಯ ವ್ಯವಸ್ಥೆಯಲ್ಲಿ ತಾಮ್ರದ ವೈರಿಂಗ್ ಇದ್ದರೆ, ಹೊಸ ವ್ಯವಸ್ಥೆಯಲ್ಲಿ ಫೈಬರ್ ಆಪ್ಟಿಕ್ ಬಳಕೆಯಾಗಿರುತ್ತದೆ.

ADVERTISEMENT

ಹಳೆಯ ಫೋನ್ ನೆಟ್‌ವರ್ಕ್ ಬಳಸುವ ಎಡಿಎಸ್ಎಲ್ ವ್ಯವಸ್ಥೆಯಲ್ಲಿ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಗಮನಿಸಿದರೆ, ಬಹಳಷ್ಟು ಜನರು ನ್ಯಾಶನಲ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಬಳಸುತ್ತಾರೆ. ಅಲ್ಲಿ ಆಧುನಿಕ ಮಾದರಿಯ ಆಪ್ಟಿಕಲ್ ಫೈಬರ್ ಜತೆಗೇ, ಹಳೆಯ ತಾಮ್ರದ ಕೇಬಲ್ ವ್ಯವಸ್ಥೆಯೂ ಇದೆ. ಜತೆಗೆ ಬಹುತೇಕ ಇಂಟರ್‌ನೆಟ್ ಸಂಪರ್ಕ ವ್ಯವಸ್ಥೆ ನೀಡುವ ಕಂಪನಿಗಳು, ನೆಲದಾಳದಲ್ಲಿ ಕೇಬಲ್ ಜಾಲ ಹೊಂದಿರುತ್ತವೆ. ಹೀಗಾಗಿ ಮಳೆ ಬಂದಾಗ, ನೀರು ಹರಿದು ಸಹಜವಾಗಿ ಅಲ್ಲಿ ಕೇಬಲ್ ಜಾಲಕ್ಕೆ ಸಮಸ್ಯೆಯಾಗುತ್ತದೆ. ಕೇಬಲ್ ತುಂಡಾಗಬಹುದು, ಬಿರುಕು ಬಿಡಬಹುದು ಇಲ್ಲವೆ ಸಂಪರ್ಕ ಏರುಪೇರಾಗಬಹುದು. ಜತೆಗೆ ಮಳೆ ನೀರು ಸೇರಿಕೊಂಡು, ಅಲ್ಲಿ ತೇವಾಂಶ ಸೃಷ್ಟಿಯಾದರೆ ಕೂಡ ಇಂಟರ್‌ನೆಟ್ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಹೀಗಾದಾಗ ಅಲ್ಲಿ ಇಂಟರ್‌ನೆಟ್ ವೇಗ ಕುಂಠಿತ, ಸ್ಥಗಿತವಾಗುವುದು ನಡೆಯುತ್ತದೆ.

ಮಳೆ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಮನೆಯ ನೆಟ್‌ವರ್ಕ್ ಮಾತ್ರ ಸಮಸ್ಯೆಯಾಗುವುದಿಲ್ಲ, ಮನೆಯಾಚೆಗಿನ ಕಟ್ಟಡ, ಇತರ ಸ್ಥಳಗಳಲ್ಲಿ ಕೂಡ ನೆಟ್‌ವರ್ಕ್ ಸಮಸ್ಯೆಯಾಗುತ್ತದೆ. ಮಳೆ ಬಿದ್ದಾಗ ಸಿಗ್ನಲ್ ಕಡಿತವಾಗುತ್ತದೆ. ವಾತಾವರಣದಲ್ಲಿನ ಹೆಚ್ಚಿನ ತೇವಾಂಶವೂ ವೈರ್‌ಲೆಸ್ ಸಿಗ್ನಲ್ ಮತ್ತು ಇಂಟರ್‌ನೆಟ್ ಸಂಪರ್ಕ ವೇಗದ ಮೇಲೆ ಪ್ರಭಾವ ಬೀರುತ್ತದೆ.

ತಾಮ್ರದ ಕೇಬಲ್‌

ಎಡಿಎಸ್ಎಲ್ ಅಥವಾ ಎನ್‌ಬಿಎನ್ ವ್ಯವಸ್ಥೆಯನ್ನು ನೀವು ಮನೆಯಲ್ಲಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಬಳಸುತ್ತಿದ್ದರೆ, ಅದರಲ್ಲಿ ತಾಮ್ರದ ತಂತಿಯ ವ್ಯವಸ್ಥೆ ಇರಬಹುದು. ಅವು ಸುಮಾರು 35 ವರ್ಷಗಳಷ್ಟು ಹಳೆಯ ವ್ಯವಸ್ಥೆಯಾಗಿದ್ದು, ಮುಖ್ಯವಾಗಿ ಡೇಟಾ ಚಲಾವಣೆಗಿಂತ ವಾಯ್ಸ್ ಸಿಗ್ನಲ್ ಕಳುಹಿಸಲು ವಿನ್ಯಾಸ ಮಾಡಲಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಸುಮಾರು ಶೇ 18ರಷ್ಟು ಜನರು ಮಾತ್ರ ವೇಗದ, ಆಪ್ಟಿಕಲ್ ಫೈಬರ್ ಇಂಟರ್‌ನೆಟ್ ಸಂಪರ್ಕ ಬಳಸುತ್ತಿದ್ದಾರೆ.

ಅಲ್ಲದೆ, ಮಳೆ ಬಂದಾಗ ಸಹಜವಾಗಿ ಇಂಟರ್‌ನೆಟ್ ವೇಗ ಕುಂಠಿತವಾಗಲು ಇನ್ನೊಂದು ಅಂಶ ಕಾರಣವಾಗುತ್ತದೆ. ಮಳೆಯಿದ್ದಾಗ ಜನರು ಹೊರಗಡೆ ಹೋಗುವ ಬದಲು, ಮನೆಯೊಳಗೆಯೇ ಇರಲು ಬಯಸುತ್ತಾರೆ. ಅಥವಾ ಮನೆಯಲ್ಲೇ ಇದ್ದುಕೊಂಡು ಇಂಟರ್‌ನೆಟ್, ಸ್ಮಾರ್ಟ್ ಟಿವಿ ಬಳಕೆ, ವರ್ಕ್ ಫ್ರಮ್ ಹೋಮ್ ಮಾಡುವುದರಿಂದ ಇಂಟರ್‌ನೆಟ್ ಬಳಕೆ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗುತ್ತದೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ಒಮ್ಮೆಲೆ ಗರಿಷ್ಠ ಇಂಟರ್‌ನೆಟ್ ಬಳಸಿದರೆ ಅಲ್ಲಿ ಇಂಟರ್‌ನೆಟ್ ವೇಗ ಹಂಚಿಕೆಯಾಗಿ, ನಿಧಾನವಾಗುತ್ತಾ ಹೋಗುತ್ತದೆ.

ತಾಪಮಾನ ಮತ್ತು ಗಾಳಿ ಬೀಸುವಿಕೆ

ಅತಿಯಾದ ತಾಪಮಾನ ಮತ್ತು ಜೋರಾದ ಗಾಳಿ ಬೀಸುವಿಕೆ ಕೂಡ ಇಂಟರ್‌ನೆಟ್ ವೇಗದಲ್ಲಿ ವ್ಯತ್ಯಾಸವಾಗಲು ಪರೋಕ್ಷ ಕಾರಣವಾಗುತ್ತದೆ. ಹೆಚ್ಚಿನ ಉಷ್ಣತೆಯಿರುವ ಪ್ರದೇಶ, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸುವ ಉಪಕರಣಗಳು ಅಧಿಕ ತಾಪಮಾನದ ಒತ್ತಡಕ್ಕೆ ಸಿಲುಕಿದರೆ, ಅಲ್ಲಿ ಕೂಡ ವೇಗದಲ್ಲಿ ವ್ಯತ್ಯಾಸವಾಗುತ್ತದೆ. ಕೇಬಲ್‌ ಕೂಡ ಗರಿಷ್ಠ ತಾಪಮಾನಕ್ಕೆ ಸಿಲುಕಿದರೆ ತೊಂದರೆಯಾಗಬಹುದು. ಕಂಪ್ಯೂಟರ್ ತೀರಾ ಬಿಸಿಯಾಗಿ, ಫ್ಯಾನ್ ಕಾರ್ಯನಿರ್ವಹಿಸದಿದ್ದರೆ, ಅಲ್ಲೂ ಸಮಸ್ಯೆಯಾಗುತ್ತದೆ. ಅದೇ ಮಾದರಿಯಲ್ಲಿ ಇಂಟರ್‌ನೆಟ್ ವ್ಯವಸ್ಥೆಯಲ್ಲೂ ದೋಷ ಕಂಡುಬರಬಹುದು.

ಗ್ರಾಮೀಣ ಪ್ರದೇಶದಲ್ಲಿ ಕೂಡ ಇಂತಹ ಸಮಸ್ಯೆಗಳಿರುತ್ತದೆ. ಉಪಗ್ರಹದ ಮೂಲಕ ಪಡೆಯುವ ಸಿಗ್ನಲ್ ಸ್ವೀಕರಿಸುವಲ್ಲಿ ತಡವಾಗುವುದು ಮತ್ತು ನಿಧಾನಗತಿಯ ಸಂಪರ್ಕ ಇದಕ್ಕೆ ಕಾರಣವಾಗಿದೆ. ರೇಡಿಯೋ ಸಿಗ್ನಲ್ ಚಲಾವಣೆಗೆ ಸಮಸ್ಯೆಯಾಗದಿದ್ದರೂ, ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಉಪಗ್ರಹ ಡಿಶ್ ಗಾಳಿಯ ಹೊಡೆತಕ್ಕೆ ಸಿಲುಕುವುದು ಕೂಡ ಸಿಗ್ನಲ್ ಸ್ವೀಕರಿಸಲು ಅಡ್ಡಿಯಾಗುತ್ತದೆ. ಜತೆಗೆ ಕಡಿಮೆ ನೆಟ್‌ವರ್ಕ್ ಹಂಚಿಕೆ ಇರುವ ಪ್ರದೇಶದಲ್ಲಿ ಹೆಚ್ಚಿನ ಉಪಕರಣಗಳಲ್ಲಿ ಇಂಟರ್‌ನೆಟ್ ಬಳಕೆಯ ಬೇಡಿಕೆ ಇರುವಾಗಲೂ ವೇಗದಲ್ಲಿ ವ್ಯತ್ಯಾಸವಾಗುತ್ತದೆ. ಲಭ್ಯವಿರುವ ಇಂಟರ್‌ನೆಟ್ ವೇಗದ ಪ್ರಮಾಣ ಹಲವೆಡೆ ಹಂಚಿಹೋಗುವುದರಿಂದ ಸಹಜವಾಗಿ ಅಲ್ಲಿ ಇಂಟರ್‌ನೆಟ್ ಸ್ಲೋ ಆಗುತ್ತದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.