ADVERTISEMENT

ಶೀಘ್ರವೇ ಬಾಲಕಿಯರಿಗೆ ಶಾಲೆ, ದೇವರು ಬಯಸಿದರೆ ಮಹಿಳೆಗೆ ಮಂತ್ರಿ ಸ್ಥಾನ: ತಾಲಿಬಾನ್

ರಾಯಿಟರ್ಸ್
Published 21 ಸೆಪ್ಟೆಂಬರ್ 2021, 10:22 IST
Last Updated 21 ಸೆಪ್ಟೆಂಬರ್ 2021, 10:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾಬೂಲ್‌: ಬಾಲಕಿಯರು ಪ್ರೌಢಶಾಲೆಗಳಿಗೆ ತೆರಳಲು ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ದೇವರು ಬಯಸಿದರೆ ಮಹಿಳೆಗೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗಲಿದೆ ಎಂದು ತಾಲಿಬಾನ್‌ ವಕ್ತಾರರು ತಿಳಿಸಿದ್ದಾರೆ.

ತಾಲಿಬಾನ್‌ಗಳ 1996-2001ರ ಅಧಿಕಾರವಧಿಯಲ್ಲಿ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಇದರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ನಿರಾಕರಣೆಯೂ ಒಂದಾಗಿತ್ತು. ಆದರೆ, ಈ ಬಾರಿಯ ಸರ್ಕಾರ ವಿಭಿನ್ನವಾಗಿರುವುದಾಗಿಯೂ, ತಾವು ಬದಲಾಗಿರುವುದಾಗಿಯೂ ತಾಲಿಬಾನ್‌ಗಳು ಹೇಳಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಶಾಲೆಗಳನ್ನು ಪುನಾರಾರಂಭಿಸಿದ್ದ ತಾಲಿಬಾನ್‌ಗಳು ಬಾಲಕರಿಗೆ ಮಾತ್ರವೇ ಅವಕಾಶ ನೀಡಿದ್ದರು. ಹೀಗಾಗಿ ‘ನಾವು ಬದಲಾಗಿದ್ದೇವೆ,’ ಎಂಬ ತಾಲಿಬಾನ್‌ಗಳ ಮಾತಿನ ಮೇಲೆ ಅನುಮಾನಗಳು ಮೂಡಿವೆ.‌

‘ಪ್ರೌಢ ಶಾಲೆಯಲ್ಲಿ ಬಾಲಕಿಯರ ಶಿಕ್ಷಣಕ್ಕೆ ಸಾಧ್ಯವಾದಷ್ಟು ಬೇಗ ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ಪ್ರಕ್ರಿಯೆಗಳು ನಡೆಯುತ್ತಿವೆ. ಆಶಾದಾಯಕ ನಿರ್ಧಾರವಾಗುವ ನಿರೀಕ್ಷೆಗಳಿವೆ. ಎಲ್ಲವೂ ದೇವರ ಇಚ್ಚೆ,‘ ಎಂದು ತಾಲಿಬಾನ್ ವಕ್ತಾರ ಜಬಿ ಉಲ್ಲಾ ಮುಜಾಹಿದ್ ಕಾಬೂಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಅಫ್ಗಾನಿಸ್ತಾನದ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಬಾಲಕಿಯರಿಗೆ ಪ್ರತ್ಯೇಕ ತರಗತಿಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ದೇವರು ಬಯಸಿದರೆ ಮಹಿಳೆಗೆ ಮಂತ್ರಿ ಮಂಡದಲ್ಲಿ ಸ್ಥಾನ

ತಾಲಿಬಾನ್‌ ಇತ್ತೀಚೆಗೆ ಹಲವರನ್ನು ಉಪ ಮಂತ್ರಿಗಳನ್ನಾಗಿ ನೇಮಕ ಮಾಡಿದೆ. ಆದರಲ್ಲಿ ಯಾರೊಬ್ಬರೂ ಮಹಿಳೆಯರಿಲ್ಲ.

ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ವಕ್ತಾರ ಮುಜಾಹಿದ್‌ ‘ನಾವು ಕ್ಯಾಬಿನೆಟ್ ಅನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದ್ದೇವೆ. ದೇವರು ಬಯಸಿದಲ್ಲಿ ಮಹಿಳೆಯರನ್ನು ಅಗತ್ಯ ವಿಭಾಗಗಳಿಗೆ ನೇಮಿಸುತ್ತೇವೆ. ಒಂದಲ್ಲ ಒಂದು ದಿನ ಅಂಥ ನೇಮಕಗಳನ್ನು ಖಚಿತವಾಗಿಯೂ ನಾವು ಇಲ್ಲಿಯೇ ಘೋಷಣೆ ಮಾಡಲಿದ್ದೇವೆ,‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.