ADVERTISEMENT

ಲಾಕ್‌ಡೌನ್‌ನಿಂದ ಭಾರತದ ಮಹಿಳೆಯರ ಆಹಾರ ವೈವಿಧ್ಯದ ಮೇಲೆ ಋಣಾತ್ಮಕ ಪರಿಣಾಮ: ಅಧ್ಯಯನ

ಟಾಟಾ–ಕಾರ್ನೆಲ್‌ ಕೃಷಿ ಮತ್ತು ಪೋಷಕಾಂಶ ಸಂಸ್ಥೆಯ ಅಧ್ಯಯನ

ಪಿಟಿಐ
Published 29 ಜುಲೈ 2021, 5:42 IST
Last Updated 29 ಜುಲೈ 2021, 5:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಕಳೆದ ವರ್ಷ ಭಾರತದಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಮಹಿಳೆಯರ ಪೌಷ್ಟಿಕಾಂಶದ ಮೇಲೆ ನಕಾರಾತ್ಮಕ ಪರಿಣಾಮಬೀರಿದೆ ಎಂದು ಅಮೆರಿಕದ ಸಂಶೋಧಕರ ತಂಡವೊಂದು ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಅಮೆರಿಕದ ಟಾಟಾ–ಕಾರ್ನೆಲ್‌ ಕೃಷಿ ಮತ್ತು ಪೋಷಕಾಂಶ ಸಂಸ್ಥೆ, ದೇಶದಲ್ಲೇ ಹಿಂದುಳಿದ ಜಿಲ್ಲೆಗಳಾಗಿರುವ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌, ಬಿಹಾರದ ಮುಂಗೇರ್‌ ಮತ್ತು ಒಡಿಶಾದ ಕಂಧಮಾಲ್ ಮತ್ತು ಕಾಳಹಂದಿ – ಈ ನಾಲ್ಕು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದೆ.

ಆ ಪ್ರಕಾರ ಮೇ 2019ಕ್ಕೆ ಹೋಲಿಸಿದರೆ, ಮೇ 2020ರಲ್ಲಿ ಮನೆಗೆ ಖರೀದಿಸಿ ತಂದ ಆಹಾರ ಧಾನ್ಯಗಳ ಪ್ರಮಾಣ, ವಿಶೇಷವಾಗಿ ಮಾಂಸ, ಮೊಟ್ಟೆ, ತರಕಾರಿ ಮತ್ತು ಹಣ್ಣಿನನಂತಹ ಆಹಾರ ಕಡಿಮೆಯಾಗಿದೆ. ಜೊತೆಗೆ, ಮಹಿಳೆಯರು ಸೇವಿಸುತ್ತಿದ್ದ ವೈವಿಧ್ಯಮಯ ಆಹಾರದ ಪ್ರಮಾಣವೂ ಕ್ಷೀಣಿಸಿದೆ.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ, ವಿಶೇಷ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ಆಹಾರ ಪೂರೈಕೆ, ಜನರ ಖಾತೆಗೆ ನೇರ ಹಣ ವರ್ಗಾವಣೆ, ಅಂಗನವಾಡಿಗಳ ಮೂಲಕ ಪಡಿತರ ವಿತರಣೆಯಂತಹ ಸೌಲಭ್ಯಗಳನ್ನು ಜನರಿಗೆ ತಲುಪಿಸಿರುವ ನಡುವೆಯೂ, ಮಹಿಳೆಯರ ಪೌಷ್ಟಿಕಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಸಮೀಕ್ಷೆಗೆ ಒಳಪಟ್ಟ ಜನರಲ್ಲಿ ಶೇ 80 ಮಂದಿಗೆಸರ್ಕಾರದ ವಿಶೇಷ ಸಾರ್ವಜನಿಕ ಪಡಿತರ ವಿತರಣೆ, ಶೇ 50ರಷ್ಟು ಮಂದಿಗೆ ನೇರ ನಗದು ವರ್ಗಾವಣೆ ಹಾಗೂ ಶೇ 30ರಷ್ಟು ಕುಟುಂಬಗಳಿಗೆ ಅಂಗನವಾಡಿ ಮೂಲಕ ಪಡಿತರ ಪೂರೈಕೆಯಾಗಿರುವ ನಡುವೆಯೂ ಮಹಿಳೆಯರ ಆಹಾರ ವೈವಿಧ್ಯ ಕ್ಷೀಣಿಸಿದೆ ಎಂದು ಇತ್ತೀಚೆಗಿನ ಎಕನಾಮಿಯಾ ಪೊಲಿಟಿಕಾ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.