ADVERTISEMENT

ರೋಹಿತ್ ವೇಮುಲ ದಲಿತನಲ್ಲ: ಪೊಲೀಸ್‌ ವರದಿ ವಿರುದ್ಧ ಕುಟುಂಬಸ್ಥರಿಂದ ಮೇಲ್ಮನವಿ

ಪಿಟಿಐ
Published 4 ಮೇ 2024, 3:06 IST
Last Updated 4 ಮೇ 2024, 3:06 IST
<div class="paragraphs"><p> ರೋಹಿತ್ ವೇಮುಲ </p></div>

ರೋಹಿತ್ ವೇಮುಲ

   

ಹೈದರಾಬಾದ್: 2016ರಲ್ಲಿ ನಡೆದ ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು (closure report) ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ರೋಹಿತ್ ವೇಮುಲ ಸಹೋದರ ರಾಜ ವೇಮುಲ ತಿಳಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ರೇವಂತ ರೆಡ್ಡಿಯವರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದಾರೆ.

ADVERTISEMENT

ಕೆಳನ್ಯಾಯಾಲಯದಲ್ಲಿ ಪ್ರತಿಭಟನಾ ಅರ್ಜಿ (protest petition) ಸಲ್ಲಿಸಿ ಎಂದು ತೆಲಂಗಾಣ ಹೈಕೋರ್ಟ್‌ ನಮಗೆ ತಿಳಿಸಿದೆ ಎಂದು ರಾಜ ವೇಮುಲ ಹೇಳಿದ್ದಾರೆ.

‘ರೋಹಿತ್‌ ವೇಮುಲ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಮತ್ತು ತನ್ನ ನಿಜವಾದ ಗುರುತು ಎಲ್ಲಿ ಬಯಲಾಗುತ್ತದೆಯೋ ಎಂಬ ಆತಂಕದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ ವೇಮುಲ, ಕುಟುಂಬ ಪರಿಶಿಷ್ಠ ಪಂಗಡಕ್ಕೆ ಸೇರಿದೆಯೋ ಇಲ್ಲವೇ ಎಂಬುದನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲಾಧಿಕಾರಿ ನಿರ್ಧರಿಸಬೇಕು. ರೋಹಿತ್‌ ದಲಿತ ಎಂದು ಹೇಳಲು ಪೊಲೀಸರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ತನಿಖಾ ವರದಿಯಲ್ಲಿ ಏನಿದೆ?

‘ವೇಮುಲ ಅವರು 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರಿಗೆ ಹಲವು ಸಮಸ್ಯೆಗಳಿದ್ದವು, ಅವು ಆತ್ಮಹತ್ಯೆಗೆ ಪ್ರೇರೇಪಿಸಿವೆ. ಜತೆಗೆ, ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಲಿಲ್ಲ. ಅದು ಅವರಿಗೂ ತಿಳಿದಿತ್ತು. ಅವರಿಗೆ ಎಸ್‌.ಸಿ ಪ್ರಮಾಣಪತ್ರವನ್ನು ಅವರ ತಾಯಿಯೇ ಕೊಡಿಸಿದ್ದರು. ಇದು ಬಹಿರಂಗವಾದರೆ ಹಲವು ಸಂಕಷ್ಟಗಳು ಎದುರಾಗುತ್ತವೆ ಎಂದು ಅವರು ನಿರಂತರ ಭಯದಲ್ಲಿದ್ದರು. ತಾವು ಗಳಿಸಿದ ಶೈಕ್ಷಣಿಕ ಪದವಿಗಳು ವ್ಯರ್ಥ ವಾಗುತ್ತವೆ ಮತ್ತು ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದು ಅವರು ಚಿಂತಿತರಾಗಿದ್ದರು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೈದರಾಬಾದ್‌ ವಿಶ್ವವಿದ್ಯಾಲಯದ ಆಗಿನ ಕುಲಪತಿ ಅಪ್ಪಾ ರಾವ್‌ ಪೊಡಿಲೆ, ಪ್ರಸ್ತುತ ಹರಿಯಾಣ ರಾಜ್ಯಪಾಲರಾಗಿರುವ ಬಂಡಾರು ದತ್ತಾತ್ರೇಯ, ಕೆಲವು ಎಬಿವಿಪಿ ಅವರು ಈ ಪ್ರಕರಣದ ಆರೋಪಿಗಳಾಗಿದ್ದರು.

ಸಾಕ್ಷ್ಯಾಧಾರಗಳ ಕೊರೆತೆಯಿಂದ ಇವರನ್ನು ಖುಲಾಸೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.