ADVERTISEMENT

ಅಕಾಲಿಕ ಹೂ ತಂದ ಸಂಕಷ್ಟ

ಆರ್.ಚೌಡರೆಡ್ಡಿ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಅಕಾಲಿಕ ಹೂ ತಂದ ಸಂಕಷ್ಟ
ಅಕಾಲಿಕ ಹೂ ತಂದ ಸಂಕಷ್ಟ   

‘ಮಾವಿನ ಮಡಿಲು’ ಎಂದು ಹೆಸರಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಬೆಳೆ ಮೂರು ದಾರಿ ಹಿಡಿದಿದೆ. ಮರಗಳಲ್ಲಿ ಮೂರು ಹಂತದಲ್ಲಿ ಕಾಯಿ ಕಾಣಿಸಿಕೊಂಡಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಮಾವು ಇಲ್ಲಿನ ಜನರ ಜೀವನಾಡಿ. ಸುಮಾರು 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸಾಂಪ್ರದಾಯಿಕ ತಳಿಗಳಾದ ತೋತಾಪುರಿ, ನೀಲಂ, ರಾಜಗೀರ, ಬಾದಾಮಿ, ಬೇನಿಷಾ, ರಸಪೂರಿ, ಮಲಗೋಬ, ಕುದ್ದೂಸ್‌ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಮಧ್ಯೆ ಹೊಸ ತಳಿಗಳಾದ ಮಲ್ಲಿಕಾ ಹಾಗೂ ಅಮರಪಾಲಿಯನ್ನು ಕಡಿಮೆ ವಿಸ್ತೀರ್ಣದಲ್ಲಿ ಬೆಳೆಯಲಾಗಿದೆ.

ಈ ಬಾರಿ ವಾತಾವರಣದಲ್ಲಿ ಅಧಿಕ ಉಷ್ಣಾಂಶದ ಪರಿಣಾಮ ಮರಗಳಲ್ಲಿ ಅಕಾಲಿಕ ಹೂ ಕಾಣಿಸಿಕೊಂಡಿತು. ಬೆಳೆಗಾರರು ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ಹೂವು ಹಾಳಾಗದೆ ಉಳಿದು ಹೀಚಾಗಿ ಮಾರ್ಪಟ್ಟಿತು. ಅಕಾಲಿಕ ಹೀಚು ಕಾಯಿಯಾಗುತ್ತಿದಂತೆ, ಜನವರಿ ತಿಂಗಳಲ್ಲಿ ವಾಡಿಕೆಯಂತೆ ಹೂ ಬರತೊಡಗಿತು.

ಇದು ಎರಡನೇ ಹಂತದ ಫಸಲಿಗೆ ನಾಂದಿ ಹಾಡಿತು. ಎರಡನೇ ಹಂತದ ಹೀಚು ಬಲಿಯುತ್ತಿದ್ದಂತೆ, ಅದೇ ಮರಗಳಲ್ಲಿ ಮೂರನೇ ಬಾರಿಗೆ ಹೂವು ಬಂದು ಅಚ್ಚರಿ ಮೂಡಿಸಿತು. ಇದು ಮೂರನೇ  ಹಂತದ ಫಸಲಿಗೆ ಕಾರಣವಾಯಿತು.

ಈ ಹಿಂದೆ ಅಕಾಲಿಕ ಮಾವಿನಕಾಯಿ ಕೋತಿಗಳ ಹಾಗೂ ದನಗಾಹಿಗಳ ಪಾಲಾಗುತ್ತಿತ್ತು. ಬೆಳೆಗಾರರು ಅಕಾಲಿಕ ಹೂವನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ. ಈಗ ಹೂ ಕಾಣಿಸಿಕೊಂಡರೆ ಉಳಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಈಗ ಅಕಾಲಿಕ ಕಾಯಿ ಬಲಿತು ಕೊಯಿಲಿಗೆ ಬಂದಿದೆ. ಎಲ್ಲ ತಳಿಗಳ ಮಾವನ್ನೂ ಕಿತ್ತು ಮಾರುಕಟ್ಟೆಗೆ ಹಾಕಲಾಗುತ್ತಿದೆ.

ವ್ಯಾಪಾರಿಗಳಲ್ಲಿ ಅಕಾಲಿಕ ಮಾವಿನ ಬಗ್ಗೆ ತಾತ್ಸಾರ ಮನೋಭಾವ ಇರುವುದರಿಂದ, ಒಳ್ಳೆ ಬೆಲೆ ಸಿಗುತ್ತಿಲ್ಲ. ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಟನ್‌ ಮಾವಿನ ಕಾಯಿ ₹8 ರಿಂದ 12 ಸಾವಿರಕ್ಕೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಬೆಳೆಗಾರರು ಹಾಗೂ ತೋಟಗಳ ಮೇಲೆ ಫಸಲು ಖರೀದಿಸಿರುವ ವ್ಯಾಪಾರಿಗಳಿಗೆ ಗಿಟ್ಟುತ್ತಿಲ್ಲ ಎನ್ನುವ ಕೊರಗು ಕೇಳಿಬರುತ್ತಿದೆ.

ಬೆಳೆಗಾರರು ಮಾವನ್ನು ವೈಜ್ಞಾನಿಕವಾಗಿ ಕೊಯಿಲು ಮಾಡುವುದು ಅಪರೂಪ. ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಮಾವಿನ ತಳಿಗಳ ಕಾಯಿಗಳನ್ನು, ಆಯಾ ಕಾಲಕ್ಕೆ ಒಂದೇ ಸಲ ಕಿತ್ತು (ಉದುರಿಸಿ) ಮಾರುಕಟ್ಟೆಗೆ ಹಾಕುವುದು ರೂಢಿ. ಆದರೆ ಈ ಬಾರಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ ಒಂದೇ ಗಿಡದಲ್ಲಿ ಎರಡು ಮೂರು ಹಂತದ ಕಾಯಿ ಇದೆ. ಹಾಗಾಗಿ ಬಲಿತ ಕಾಯಿಯನ್ನು ಮಾತ್ರ ಕಿತ್ತು ಮಂಡಿಗೆ ಹಾಕಬೇಕಾಗುತ್ತದೆ. ಕೃಷಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ರೈತರಿಗೆ ಇದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಬಲಿತ ಕಾಯಿಗೆ ಕಪ್ಪು ಮಚ್ಚೆ ರೋಗ ಕಾಣಿಸಿಕೊಂಡಿದೆ. ಕಾಯಿಯ ಮೇಲೆ ಚಿಕ್ಕದಾಗಿ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆ ಅತಿ ವೇಗವಾಗಿ ವಿಸ್ತಾರಗೊಂಡು ಕಾಯಿ ಕೊಳೆಯುವಂತೆ ಮಾಡುತ್ತದೆ. ಈ ರೋಗಕ್ಕೆ ತುತ್ತಾದ ಕಾಯಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲ. ಹಾಗಾಗಿ ಬೆಳೆಗಾರರಲ್ಲಿ ಬೇಗ ಕಾಯಿ ಕಿತ್ತು ಮಂಡಿಗೆ ಸುರಿಯುವ ಧಾವಂತ. ಬೆಲೆ ಕುಸಿತಕ್ಕೆ ಇದೂ ಒಂದು ಕಾರಣ.



ಒಂದೆರಡು ಸಲ ಸುರಿದ ಅಕಾಲಿಕ ಮಳೆ ಸಾಕಷ್ಟು ಹೂವನ್ನು ಬಲಿ ತೆಗೆದುಕೊಂಡಿದೆ. ವಯಸ್ಸಾದ ಮಾವಿನ ಮರಗಳು ಒಣಗುತ್ತಿದ್ದು, ಎಲೆಗಳಿಲ್ಲದೆ ಬರಲಾಗಿವೆ. ಅಂಥ ಮರಗಳಲ್ಲಿ ಫಸಲು ಬಂದಿಲ್ಲ. ಒಣಗಿದ ಮರಗಳ ಬುಡಕ್ಕೆ ಬೆಳೆಗಾರರು ಕೊಡಲಿ ಹಾಕಿದ್ದಾರೆ. ಈಗಾಗಲೇ ಸಾವಿರ ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿದೆ. ಈಚೆಗೆ ತಾಲ್ಲೂಕಿನಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮಾವಿನ ಕಾಯಿ ದೊಡ್ಡ ಪ್ರಮಾಣದಲ್ಲಿ ಉದುರಿ ನೆಲಕಚ್ಚಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲೂ ಇಂಥದ್ದೇ ಪರಿಸ್ಥಿತಿ ಇದೆ.

ಶ್ರೀನಿವಾಸಪುರದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಮಾವಿನ ಮಾರುಕಟ್ಟೆ ಇದೆ. ಆದರೆ ಇಲ್ಲಿ ಮಾರುಕಟ್ಟೆ ನಿಯಮಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ, ‘ಇ’ ಹರಾಜು ಸಾಧ್ಯವಾಗಿಲ್ಲ. ಮಾವು ಖರೀದಿ ಮುಗಿದ ತಕ್ಷಣ ಹಣ ಪಾವತಿಯಾಗುತ್ತಿಲ್ಲ. ಮಂಡಿ ಮಾಲೀಕರು ಶೇ 10ರಷ್ಟು ಕಮಿಷನ್‌ ಪಡೆಯುವುದು ನಿಂತಿಲ್ಲ ಎಂಬ ಆಪಾದನೆ ಬೆಳೆಗಾರರ ದೂರುಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ.

ಇಲ್ಲಿನ ಮಾವಿನಹಣ್ಣು ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಪಂಜಾಬ್‌, ದೆಹಲಿ, ಆಂಧ್ರಪ್ರದೇಶ, ತಮಿಳುನಾಡಿಗೆ ಹೋಗುತ್ತಿದೆ. ಉಳಿದಂತೆ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ತೋತಾಪುರಿ ಮಾವು ಮಾತ್ರ ಜ್ಯೂಸ್‌ ತಯಾರಿಕಾ ಕಂಪೆನಿಗಳ ಪಾಲಾಗುತ್ತಿದೆ.

ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ಮಾವಿನ ಸುಗ್ಗಿ ಮುಗಿಯುತ್ತದೆ. ಆದರೆ ಈ ಸಲ ಮಾವಿನ ಬೆಳೆ ತಾಳ ತಪ್ಪಿರುವುದರಿಂದ ಜುಲೈ ಮಾಹೆಯಲ್ಲೂ ಮಾವಿನ ವಹಿವಾಟು ನಡೆಯುವ ಸಾಧ್ಯತೆ ಇದೆ. ಮಾವಿನ ಬೆಳೆ ರಕ್ಷಣೆ, ಕಾಯಿ ಬಿಡಿಸುವಿಕೆ, ಮಂಡಿಗೆ ಸಾಗಾಟ, ಮಂಡಿಯಲ್ಲಿ ಮಾವಿನ ಗ್ರೇಡಿಂಗ್‌, ಲೋಡಿಂಗ್‌, ಹೊರ ರಾಜ್ಯಗಳಿಗೆ ರವಾನೆ, ಉಪ್ಪಿನ ಕಾಯಿ ತಯಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ತುತ್ತಿನ ಮೂಲವಾಗಿದೆ.

ಮಳೆ ಬರಲಿ, ಹೋಗಲಿ ರೈತರಿಗೆ ವರ್ಷಕ್ಕೊಮ್ಮೆ ಮಾವಿನ ಕಾಯಿಯಲ್ಲಿ ನಾಲ್ಕು ಕಾಸು ಸಿಗುತ್ತಿತ್ತು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಕೊಳವೆಬಾವಿ ನಿರ್ಮಾಣದಂಥ ಕಾರ್ಯಗಳಿಗೆ ಮಾವಿನ ತೋಟ ಆರ್ಥಿಕ ಶಕ್ತಿ ತುಂಬುತ್ತಿತ್ತು.

ADVERTISEMENT

ನೆಲದಲ್ಲಿ ತೇವಾಂಶ ಇಲ್ಲದಿರುವುದಿಂದ ಮಾವಿನ ಬೆಳೆ ಈಗ ಅಪಾಯ ಎದುರಿಸುತ್ತಿದೆ. ಪಸಿ ಆರಿದ ನೆಲದಲ್ಲಿ ಮಾವಿಗೆ ಪರ್ಯಾಯ ಹುಡುಕುವುದು ಸುಲಭದ ಮಾತಲ್ಲ. ಹಾಗಾಗಿ ಕಡಿದ ಮರದ ಬುಡ ತೆಗೆದು, ಮತ್ತೆ ಮಾವಿನ ಸಸಿಯನ್ನೇ ನಾಟಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.