ADVERTISEMENT

ಇಲ್ಲಿದೆ ಜೋಳದ ಕಣಜ

ವಿನೋದ ಪಾಟೀಲ
Published 25 ಮಾರ್ಚ್ 2013, 19:59 IST
Last Updated 25 ಮಾರ್ಚ್ 2013, 19:59 IST
ಜೋಳದೊಂದಿಗೆ ರೈತ ಕಲ್ಲಪ್ಪ ನೇಗಿನಹಾಳ
ಜೋಳದೊಂದಿಗೆ ರೈತ ಕಲ್ಲಪ್ಪ ನೇಗಿನಹಾಳ   

ಈಗ ಎಲ್ಲೆಲ್ಲೂ ವಾಣಿಜ್ಯ ಜೋಳಗಳದ್ದೇ ಕಾರುಬಾರು. ಇದರ ಮಧ್ಯೆ ಅವಸಾನದತ್ತ ಸಾಗಿದೆ ದೇಸಿ ಜೋಳ. ಈ ದೇಸಿ ಜೋಳಗಳ ತಳಿ ಸಂಗ್ರಹಿಸಿ ಅವುಗಳ ಪ್ರಚಾರ ಕೈಗೊಂಡಿದ್ದಾರೆ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಕಲ್ಲಪ್ಪ ನೇಗಿನಹಾಳ. ಸುಮಾರು 20 ಜೋಳದ ತಳಿಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಚಲಿತಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದಾರೆ ಕಲ್ಲಪ್ಪ.

ಜೋಳದ ತಳಿ ಸಂಗ್ರಹಿಸಲು ಶುರುಮಾಡಿದ ಇವರಿಗೆ ಹೊಳೆದಿದ್ದು ಸುತ್ತಲೂರಿನ ಸಂತೆ. ಅಲ್ಲಿ ಅವರಿಗೆ ದೊರೆತದ್ದು ಸುಮಾರು 10 ತಳಿಗಳು. ನಂತರ ಸಾವಯವ ಕೃಷಿಕ ಶಂಕರ ಅವರಿಂದ 8 ತಳಿ ಸಂಗ್ರಹಿಸಿ ಇವೆಲ್ಲವನ್ನೂ ತಮ್ಮ ಹೊಲದಲ್ಲಿ ಬಿತ್ತಿದ್ದಾರೆ. ಗಟ್ಟಿದನಿ ಜೋಳ, ಮಾಲದಂಡಿ, ಸಕ್ಕರಿಮುಕ್ಕಿ, ಕಾಗೆಮೂತಿ ಜೋಳ, ಹುಲಸಿನ ಜೋಳ, ಕೆಂಪುಜೋಳ, ಬರನೀರೋಧಕ ತಳಿಗಳು, ದನಗಳಿಗೆ ಅವಶ್ಯವಿರುವ ಮೇವಿನ ತಳಿಗಳು ಹೀಗೆ ಹಲವು ಬಗೆಯ ಜೋಳ ಹೊಲದಲ್ಲಿ ನಳನಳಿಸುತ್ತಿವೆ.

ಸಾಮಾನ್ಯವಾಗಿ ಜೋಳ ಮೂರು ತಿಂಗಳ ಬೆಳೆ. ಮುಂಗಾರು, ಹಿಂಗಾರು ಬೆಳೆಯುವ ತಳಿಗಳಾದ ದೇಸಿ ಜೋಳವನ್ನು ಯಾವುದೇ ರಾಸಾಯನಿಕ ಗೊಬ್ಬರದ ಅವಶ್ಯಕತೆಯಿಲ್ಲದೆ ಸಮೃದ್ಧಿಯಾಗಿ ಬೆಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಕಲ್ಲಪ್ಪ. ನೀರಾವರಿ ಸೌಲಭ್ಯವಿದ್ದರೆ ಹೆಚ್ಚಿನ ಇಳುವರಿ ಪಡೆಯಬಹುದು ಎನ್ನುತ್ತಾರೆ ಅವರು.

ದೇಸಿ ಜೋಳದ ಮಹತ್ವ: ಕೆಂಪು ಜೋಳಕ್ಕೆ ಹಬ್ಬಹರಿದಿನಗಳಲ್ಲಿ ಭಾರಿ ಬೇಡಿಕೆ. ಕಡಬು, ದೋಸೆ ಸಂಗಟಿಗೆ ಇದರದ್ದೇ ವಿಶೇಷತೆ. ಹಿಂಗಾರು ಸಕ್ಕರಿಮುಕ್ಕಿ ಜೋಳಕ್ಕೆ ಶೀತ ತಡಿಯೋ ಶಕ್ತಿ ಇದೆ. ಕೋಡಮುರಕ ಜೋಳ ಬಾರ್ಸಿ ಜೋಳ ರೊಟ್ಟಿಗೆ ಹೇಳಿಮಾಡಿಸಿದ ತಳಿ. ಮಾಲದಂಡಿ ಜೋಳ ಕಪ್ಪುಮಣ್ಣಿಗೆ ಉತ್ತಮ ಫಸಲು ಕೊಡುತ್ತದೆ.

ಇದರ ಮೇವು ದನಗಳಿಗೆ ಬಲು ಇಷ್ಟ. ಗಟ್ಟಿದನಿ ಜೋಳ ಒತ್ತೊತ್ತಾಗಿರುವುದರಿಂದ ಗಟ್ಟಿಯಾಗಿದ್ದು, ಬರನಿರೋಧಕ ಗುಣ ಹೊಂದಿವೆ. ಈ ಎಲ್ಲ ತಳಿಗಳನ್ನು ಉಳಿಸಿ ಜನರಿಗೆ ರಾಸಾಯನಿಕ ಮುಕ್ತ ಜೋಳ ನೀಡಬೇಕು ಎನ್ನುತ್ತಾರೆ ಕಲ್ಲಪ್ಪ. ಸಂಪರ್ಕಕ್ಕೆ- 9980634062

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.