ADVERTISEMENT

ಒಂದೇ ದಿನ ಇಬ್ಬರು ಪುಣ್ಯಾತ್ಮರು!

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST

ಡಾಕ್ಟರ್ ಷಾಪಿಗೆ ಹೊರಡುವಾಗ ಮಳೆ ಬರುವ ಯಾವುದೇ ಸೂಚನೆ ಇಲ್ಲದಿದ್ದರಿಂದ ಯಾವಾಗಲೂ ಛತ್ರಿಯನ್ನು ತೆಗೆದುಕೊಂಡು ಹೋಗುವ ನಾವು ಅಂದು ಮರೆತಿದ್ದೆವು. ಸರಿ ಪರವಾಗಿಲ್ಲ ಎಂದುಕೊಂಡು ಹಾಗೆ ಹೊರಟೆವು. ಡಾಕ್ಟರ್‌ ಅವರ ತಪಾಸಣೆಯ ನಂತರ ಹೊರಗೆ ಬಂದು ನೋಡಿದರೆ ಅನಿರೀಕ್ಷಿತ ಜೋರು ಮಳೆ.

ಇಬ್ಬರಿಗೂ ಮೈ ಹುಷಾರು ಬೇರೆ ಸರಿ ಇರಲಿಲ್ಲ. ನಮ್ಮ ಬವಣೆ ನೋಡಿ ಆ ಷಾಪಿಗೆ ಬಂದಿದ್ದ ಮಹನೀಯನೊಬ್ಬ ಅವರಲ್ಲಿದ್ದ ಛತ್ರಿಯನ್ನು ಎಷ್ಟೇ ಬೇಡವೆಂದರೂ 'ಪರವಾಗಿಲ್ಲ ತೊಗೊಳ್ಳಿ' ಎಂದು ಬಲವಂತದಿಂದ ಕೊಟ್ಟು 'ಯಾವಾಗಲಾದರೂ ಈ ಕಡೆ ಬಂದಾಗ ಡಾಕ್ಟರ್ ಹತ್ತಿರ ಕೊಡಿ' ಎಂದು ನಮ್ಮ ಉತ್ತರಕ್ಕೂ ಕಾಯದೇ ಹೊರಟೇಬಿಟ್ಟರು ಆ ಮಹಾತ್ಮ!

ಆಮೇಲೆ ನಮ್ಮ ಸ್ಥಳಕ್ಕೆ ಹೋಗಲು ಯಾವುದೇ ಆಟೋವನ್ನು ಕೇಳಿದರೆ ಜೋರುಮಳೆಯಾದ್ದರಿಂದ ಎಲ್ಲರೂ ನಿರಾಕರಿಸುತ್ತಿದ್ದರು. ಬಸ್ ನಿಲ್ದಾಣ ಸಹ ದೂರದಲ್ಲಿತ್ತು. ನಮ್ಮ ಕಷ್ಟ ಕಂಡು ಪಕ್ಕದಲ್ಲಿ ನಿಂತಿದ್ದ ಒಬ್ಬ ಯುವತಿಯು- 'ಅಂಕಲ್, ಈಗ ಯಾರೂ ಬರಲ್ಲ, ನಿಮಗಾಗಿ ನಾನು ಓಲಾ ಟಾಕ್ಸಿ ಬುಕ್ ಮಾಡಿಕೊಡ್ತೀನಿ ಪರ್ವಾಗಿಲ್ವಾ?' ಎಂದು ಕೇಳಿದಾಗ - 'ಸರಿಯಮ್ಮ' ಎಂದೆ.

ADVERTISEMENT

ಪಾಪ ಆಕೆಯೇ ಬುಕ್ ಮಾಡಿಕೊಟ್ಟು, 'ಇಳೀಬೇಕಾದರೆ ನೀವೇನೂ ಹಣ ಕೊಡಬೇಡಿ, ಓಲಾಮನಿಯಲ್ಲಿ ಬುಕ್ ಆಗಿದೆ' ಎಂದಾಗ - ನಾನು, 'ಅಯ್ಯೋ ಯಾಕಮ್ಮ, ನೀನು ಕೊಡ್ತೀಯಾ, ನನ್ನ ಹಣ ತೆಗೆದುಕೊ' ಎಂದು ಹೇಳಿದಾಗ, ಆಕೆ ಸುತರಾಂ ಒಪ್ಪದೇ, 'ಬೇಡ ಅಂಕಲ್, ನೀವು ನನ್ನ ತಂದೆ ತಾಯಿಯರ ತರಾ, ಯಾಕೆ ನಾನು ಕೊಡಬಾರದೇ' ಎಂದಾಗ ನಾವು ಮೂಕವಿಸ್ಮಿತರಾಗಿ - 'ನೀನು ಯಾರಮ್ಮಾ?' ಎಂದಾಗ 'ನಾನು ಸುಷ್ಮಾ ಅಂತ, ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೇನೆ' ಎಂದು ಹೇಳುತ್ತಿದ್ದಾಗ ಟ್ಯಾಕ್ಸಿ ಬಂದಿದ್ದರಿಂದ ಆಕೆಗೆ ವಂದಿಸಿ ಮಳೆಯಲ್ಲೇ ಹತ್ತುವ ಭರದಲ್ಲಿ ಆಕೆಯ ಫೋನ್ ನಂಬರ್ ಪಡೆಯಲು ಆಗಲೇ ಇಲ್ಲ. ಆಕೆಗೆ ಹೇಗೆ ವಂದಿಸುವುದೆಂದು ತೋಚದೇ ಈ ಅಂಕಣದ ಮೂಲಕವಾದರೂ ನಮ್ಮ ಅಭಿನಂದನೆಗಳನ್ನು ತಿಳಿಸುತ್ತಿದ್ದೇವೆ.

ವಿ.ವಿಜಯೇಂದ್ರ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.