ADVERTISEMENT

ಶ್ರೀಧರರ ಶತ ನೆನಪುಗಳು

ಸಂಧ್ಯಾ ಹೆಗಡೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಪತ್ನಿ ರಮಾದೇವಿ, ಮೊಮ್ಮಗ ಬ್ರಹ್ಮಾನಂದನೊಂದಿಗೆ ಬಿ.ಎಚ್.ಶ್ರೀಧರ
ಪತ್ನಿ ರಮಾದೇವಿ, ಮೊಮ್ಮಗ ಬ್ರಹ್ಮಾನಂದನೊಂದಿಗೆ ಬಿ.ಎಚ್.ಶ್ರೀಧರ   

‘You have all the attributes of Bendre, without their water of crystallization’ ಎಂದು ಪ್ರಿಯ ಮಿತ್ರ ಬಿ.ಎಚ್. ಶ್ರೀಧರರಿಗೆ ಕೌತುಕದಿಂದ ಹೇಳಿದ್ದೆ. ಅವರು ‘‍ಪ್ರತಿವಾದಿ ಭಯಂಕರರು’; ಆದರೆ ನನ್ನ ಸುದೈವವಿರಬೇಕು, ‍ಪ್ರತ್ಯುತ್ತರಿಸಲಿಲ್ಲ, ಸುಮ್ಮನೆ ನಕ್ಕು ತಾಳಿಕೊಂಡರು ! ಬ.ಹೇ.ಶ್ರೀಯವರ ಪ್ರತಿಭೆ ಅಕ್ಷರಶಃ ಬಹುಶ್ರೀಕವಾಗಿತ್ತು. ಅವರೊಂದಿಗೆ ಮಾತು ಬಂದಾಗ ಸೋತು ಹೋದವನು ಜಾಣನಾಗುತ್ತಿದ್ದನು. ಇದು ನನ್ನದೇ ಅನುಭವ...

ಶಿರಸಿಯ ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ 1999ರಲ್ಲಿ ಪ್ರಕಟಿಸಿದ ‘ಶ್ರೀಧರ ಸ್ಮರಣೆ’ ಸಾಹಿತ್ಯ ಪ್ರಶಸ್ತಿಯ ದಶಮಾನೋತ್ಸವ ಸ್ಮರಣ ಸಂಚಿಕೆಯ ಮೇಲೆ ಕಣ್ಣಾಡಿಸುತ್ತಿದ್ದಾಗ, ಅದರಲ್ಲಿ ಸಾಹಿತಿ ಗೌರೀಶ ಕಾಯ್ಕಿಣಿಯವರು ಬರೆದ ಈ ಮೇಲಿನ ಸಾಲುಗಳನ್ನು ಓದಿದೆ. ಶ್ರೀಧರರ ಮೇಲೆ ಲೇಖನ ಬರೆಯಬೇಕೆಂದು ಹೊರಟಿದ್ದ ನನ್ನ ಕೈ ಬೆರಳುಗಳು ಧರಣಿ ಹೂಡಿದವು. ಆಕಾಶಕ್ಕೆ ಏಣಿ ಕಟ್ಟಲಾಗದು ಎಂದು ಮನಸ್ಸು ಎಚ್ಚರಿಸಿತು.

ಬಿ.ಎಚ್.ಶ್ರೀ ಅವರನ್ನು ನಾನು ಕಂಡಿದ್ದು ಅವರ ಬರಹಗಳ ಮೂಲಕ, ಅದಕ್ಕಿಂತ ಹೆಚ್ಚಾಗಿ ಅವರ ಬಗೆಗಿನ ಮಾತಿನ ಮೆಲುಕುಗಳ ಮೂಲಕ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಪ್ರತಿ ವರ್ಷ ಏಪ್ರಿಲ್ 24, ಶ್ರೀಧರರ ಜನ್ಮದಿನ(ನಿಧನರಾದ ದಿನವೂ ಹೌದು)ದಂದು ನಡೆಯುವ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಪ್ರಶಸ್ತಿ ಪ್ರದಾನ ಮಾಡಲು ಬರುವ ಹಾಗೂ ಸ್ವೀಕರಿಸಲು ಬರುವ ಸಾಹಿತಿಗಳು, ಪ್ರಶಸ್ತಿ ಸಮಿತಿಯ ಪ್ರಮುಖರಾಗಿರುವ ಡಾ.ಎಂ.ಜಿ. ಹೆಗಡೆಯವರು ಆಡುವ ಪ್ರಾಸ್ತಾವಿಕ ಮಾತುಗಳು, ಶ್ರೀಧರರ ಬಗ್ಗೆ ನನ್ನಲ್ಲಿ ಭಯಮಿಶ್ರಿತ ಗೌರವ ಭಾವ ಮೂಡಿಸಿವೆ.

ADVERTISEMENT

‘ಶ್ರೀಧರರು ನಿಷ್ಠುರವಾದಿ’ ಎಂದು ಪ್ರತಿ ವರ್ಷ ತಪ್ಪದೇ ಕೇಳುತ್ತಿದ್ದ ನನಗೆ, ಲೇಖನದಲ್ಲಿ ಅಪ್ಪಿತಪ್ಪಿ ತಪ್ಪಾದರೆ, ಶ್ರೀಧರರ ಸಾಹಿತ್ಯಾತ್ಮ ಬಂದು ನನ್ನ ತಲೆತಟ್ಟೀತು ಎಂಬ ಭಯ ಮೂಡಿತು! ಆಗ ನೆನಪಾಗಿದ್ದು, ಅವರ ಮಗ ರಾಜಶೇಖರ ಹೆಬ್ಬಾರರು. ಬ್ಯಾಂಕ್ ಉದ್ಯೋಗದಿಂದ ನಿವೃತ್ತಿ ಪಡೆದಿರುವ ಅವರು, ಶ್ರೀಧರರ ಅಪ್ರಕಟಿತ ಬರಹಗಳನ್ನು, ಶಕ್ತ್ಯಾನುಸಾರ ಪ್ರಕಟಿಸುತ್ತ ಬಂದವರು. ಅವರು ‘ಅಪ್ಪಯ್ಯ’ನೊಂದಿಗಿನ ಭಾವಬಂಧವನ್ನು ಹಂಚಿಕೊಂಡರು.

ನಾ ಕಂಡಂತೆ ನನ್ನ ಅಪ್ಪಯ್ಯ
‘ನನ್ನ ಮೊದಲ ಮಾತು– ಕನ್ನಡ ಸಾಹಿತ್ಯಕ್ಕೆ 50ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿದವರು ಬಿ.ಎಚ್. ಶ್ರೀಧರರು. ಅರವಿಂದರ ‘ದಿ ಸಿಕ್ರೆಟ್ ಆಫ್ ವೇದ’, 800 ಪುಟಗಳ ಕೃತಿಯನ್ನು ‘ವೇದ ರಹಸ್ಯ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದವರು. ಅವರ ಸಾಹಿತ್ಯಿಕ ಬರಹಗಳನ್ನು ಸೇರಿಸಿದರೆ, 6000 ಪುಟಗಳು ದಾಟುತ್ತವೆ. ಲೇಖನಗಳ ಪುಟಗಳಂತೂ ಲೆಕ್ಕವಿಲ್ಲ. ಇನ್ನೂ ಸಾವಿರ ಪುಟದಷ್ಟು ಅಪ್ರಕಟಿತ ಬರಹಗಳು ಇವೆ. ಆದರೆ, ಅವರ ಸಾಹಿತ್ಯಿಕ ಮೌಲ್ಯ ಗುರುತಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಕೊರಗು ನನ್ನೊಳಗಿದೆ.’

‘ನಾನು ಎಸ್ಸೆಸ್ಸೆಲ್ಸಿಗೆ ಬಂದಾಗ ಅಪ್ಪಯ್ಯ ಸ್ವಲ್ಪ ತೆರೆದುಕೊಳ್ಳಲಾರಂಭಿಸಿದರು. ಅಲ್ಲಿಯವರೆಗಿನ ಅವರ ನೆನಪು ಕೇವಲ ಅಪ್ಪ ಎಂಬುದಷ್ಟೇ ಇರಬೇಕು. ಕಾರ್ಯಕ್ರಮಕ್ಕೆ ಹೋಗಿ ಬಂದರೆ, ಅವರ ವರ್ಣನೆಗಳು ನನ್ನ ಹಾಗೂ ಸಹೋದರಿಯರ ಕಣ್ಮುಂದೆ ಚಿತ್ರಕಥೆಯ ಪುಟಗಳಂತೆ ಪಟಪಟನೆ ದಾಟುತ್ತಿದ್ದವು. ಕನ್ನಡ ವಿಶ್ವಕೋಶ ರಚನೆ ಸಮಿತಿಯ ಸಭೆಗೆ ಮೈಸೂರಿಗೆ ಹೋಗುವಾಗ ಜೊತೆಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಸಾಹಿತ್ಯ ಒಡನಾಟದ ನನ್ನ ಮೊದಲ ಅನುಭವ. ಅಲ್ಲಿ ಹಾ.ಮಾ. ನಾಯಕ, ಶಿವರಾಮ ಕಾರಂತರು ಇದ್ದರು. ಅವರೆಲ್ಲ ನನ್ನನ್ನು ಪ್ರೀತಿಯಿಂದ ಕಂಡರು. ಆ ಸಭೆಯಲ್ಲಿ ಕುಳಿತಾಗ ಅಪ್ಪಯ್ಯನ ಭಾಷಾ ಪ್ರೌಢಿಮೆ ಕಂಡು ದಿಗ್ಭ್ರಮೆಗೊಂಡೆ.’

‘ಬೇಂದ್ರೆ, ಕಾರಂತರು, ಗೌರೀಶ ಕಾಯ್ಕಿಣಿ ಜೊತೆಯೇ ಅಪ್ಪಯ್ಯನ ಹೆಚ್ಚಿನ ಒಡನಾಟ. ಶಿರಸಿಯ ಮಾರಿಕಾಂಬಾ ದೇವಾಲಯದ ನವರಾತ್ರಿ ಕಾರ್ಯಕ್ರಮಗಳನ್ನು ಸಂಘಟಿಸುವವರು ಅಪ್ಪಯ್ಯನೇ ಆಗಿದ್ದರು. ಅದಕ್ಕೆ ಬರುತ್ತಿದ್ದ ಸಾಹಿತಿಗಳೆಲ್ಲ ಉಳಿಯಲು ಬರುತ್ತಿದ್ದುದು ನಮ್ಮನೆಗೇ. ಒಮ್ಮೆ ಕಾರಂತರು, ಬೆಂಕಿ ಪೆಟ್ಟಿಗೆ ಕಾರಿನ ಕತೆ ಹೇಳಿ, ದೇಶ ಯಾನ ಮಾಡಿಸಿದ್ದರು. ಕತೆ ಮುಗಿಯುವ ಹೊತ್ತಿಗೆ ನಾವೆಲ್ಲ ಸುಸ್ತು, ಗುಡ್ಡ– ಬೆಟ್ಟ, ಪರ್ವತ ಹತ್ತಿಳಿದು ಬಂದಷ್ಟು ಆಯಾಸ!’

‘ಗೌರೀಶ ಕಾಯ್ಕಿಣಿ ಜೊತೆ ಬರುತ್ತಿದ್ದ ಅವರ ಮಗ ಜಯಂತ ಮತ್ತು ನಾನು ಮಾರಿಗುಡಿಯ ಚಂದ್ರಶಾಲೆಯಲ್ಲಿ ಮುಟ್ಟಾಟ ಆಡುತ್ತಿದ್ದೆವು. ಅಪ್ಪಂದಿರದ್ದು ಸಾಹಿತ್ಯ ಲೋಕವಾಗಿದ್ದರೆ, ನಮ್ಮದು ಕೀಟಲೆ ಪ್ರಪಂಚವಾಗಿತ್ತು. ಬೈದಿದ್ದೆಲ್ಲ ನಮಗಲ್ಲವೆಂದುಕೊಂಡು, ಮತ್ತಷ್ಟು ಜೋರಾಗಿ ಓಡುತ್ತಿದ್ದೆವು. ಬೇಂದ್ರೆಯವರದ್ದು ಸದಾ ಸಂಖ್ಯೆಯ ಲೆಕ್ಕಾಚಾರ. ಮಕ್ಕಳಿಗೆ ಅರ್ಥವಾದರೆ ಎಲ್ಲರಿಗೂ ಅರ್ಥವಾದಂತೆ ಎನ್ನುತ್ತ, ನಮ್ಮನ್ನೂ ಕುಳ್ಳಿರಿಸಿಕೊಂಡು ಹೇಳಿಕೊಡಲು ಪ್ರಯತ್ನಿಸುತ್ತಿದ್ದರು, ನಾವು ಅರ್ಥವಾಯಿತೆಂದು ಜಾಗ ಖಾಲಿ ಮಾಡುತ್ತಿದ್ದೆವು! ಆದರೆ, ಅಪ್ಪಯ್ಯ ಹಾಗೂ ಅವರ ಸ್ನೇಹಿತರ ನಡುವಿನ ಸಾಹಿತ್ಯಿಕ ಚರ್ಚೆಗಳು ಹೂವಿನ ಪರಿಮಳದಂತೆ ಮನಸ್ಸನ್ನು ಆವರಿಸುತ್ತಿದ್ದವು.’

ಸಾಹಿತ್ಯದ ಖಾಂದಾನು
ಸಂಸ್ಕೃತ, ಲ್ಯಾಟಿನ್ ಬಲ್ಲವರಾಗಿದ್ದ ಶ್ರೀಧರರ ದೊಡ್ಡಪ್ಪ ವೆಂಕಟರಮಣ ಹೆಬ್ಬಾರರು ಮುದ್ದಣನ ರಾಮಾಶ್ವಮೇಧ ಪಟ್ಟಾಭಿಷೇಕಕ್ಕೆ ಶ್ಲೋಕ ಬರೆದುಕೊಟ್ಟಿದ್ದರಂತೆ. ಅವರ ಸಹೋದರ ಹಿರಿಯಣ್ಣ ಹೆಬ್ಬಾರರು ಯಕ್ಷಗಾನ ಕಲಾವಿದರು. ಶ್ರೀಧರರ ಅಪ್ಪ ಸೀತಾರಾಮ ಹೆಬ್ಬಾರರು ಪದ್ಯಗಳನ್ನು ಬರೆಯುತ್ತಿದ್ದರು. ಭಾರತೀಯ ಸೇನೆಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀಧರರು, ನಂತರ ಶಿಕ್ಷಕರಾದರು. ‘ಕರ್ಮವೀರ’ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದಾಗ ‘ಸುಭದ್ರಮ್ಮ’ನ ಹೆಸರಿನಲ್ಲಿ ಮಹಿಳಾ ಅಂಕಣ ಬರೆಯುತ್ತಿದ್ದರು.

ಬಿ.ಎ ಆನರ್ಸ್‌ನಲ್ಲಿ (ಸಂಸ್ಕೃತ) ಬಂಗಾರದ ಪದಕ ಪಡೆದ ಅವರು 1955ರಲ್ಲಿ ಕುಮಟಾ ಕಾಲೇಜಿನ ಪ್ರಾಧ್ಯಾಪಕರಾದರು. ಸಿದ್ದಾಪುರ ಎಂ.ಜಿ.ಸಿ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ವಜ್ರದಂತೆ ಕಠಿಣವಾಗಿದ್ದ ಶ್ರೀಧರರ ಮನಸ್ಸು ಕುಸುಮದಷ್ಟು ಮೃದು. ಅಸತ್ಯ, ಕಂದಾಚಾರಗಳನ್ನು ಯಾವ ಮುಲಾಜಿಲ್ಲದೇ ವಿರೋಧಿಸುತ್ತಿದ್ದರು ಎಂಬುದನ್ನು ರಾಜಶೇಖರರು ನೆನಪಿಸಿಕೊಂಡರು.

ಶತಮಾನದ ಹಬ್ಬ
1990ರಲ್ಲಿ ಶ್ರೀಧರರು ನಿಧನರಾದ ಮೇಲೆ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು, ಪ್ರತಿವರ್ಷ ಒಬ್ಬರು ಸಾಹಿತಿಗೆ ಶ್ರೀಧರರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತ ಬಂದಿದೆ. ಶ್ರೀಧರರು ಇದ್ದಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಅವರ ನೆನಪಲ್ಲಿ, ಪ್ರಶಸ್ತಿ ಪ್ರದಾನಕ್ಕೆ ಮುಂಚಿತವಾಗಿ ಸಮಿತಿಯು ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಕ್ಷರ ಕಲಿಯದೇ, ಭಾಮಿನಿ ಷಟ್ಪದಿಯಲ್ಲಿ ಕವನ ರಚಿಸುತ್ತಿದ್ದ ಮೂಕಜ್ಜಿ (ಶ್ರೀಧರರ ಅತ್ತೆ ಮಗಳು), ಗೋಪಾಲಕೃಷ್ಣ ಅಡಿಗ (ಸೋದರತ್ತೆಯ ಮಗ) ಹಾಗೂ ಬಿ.ಎಚ್.ಶ್ರೀಧರರು ಈ ಮೂವರ ಸ್ಮರಣೆಯಲ್ಲಿ ’ಶತಮಾನದ ಹಬ್ಬ’ ಇತ್ತೀಚೆಗಷ್ಟೇ, ಅವರ ಹುಟ್ಟಿದೂರು ಕುಂದಾಪುರ ಸಮೀಪದ ಬೌಲಾಡಿಯಲ್ಲಿ ನಡೆಯಿತು. ಧಾರವಾಡದ ಬೇಂದ್ರೆ ಪ್ರತಿಷ್ಠಾನ, ಆಲೂರು ವೆಂಕಟರಾಯರ ಪ್ರತಿಷ್ಠಾನದ ಸಹಯೋಗ ಪಡೆದು, ರಾಜಶೇಖರ ಹೆಬ್ಬಾರರು ವಿವಿಧೆಡೆಗಳಲ್ಲಿ ಶ್ರೀಧರರ ಗೀತೆಗಳ ಗಾಯನ, ವಿಚಾರ ಸಂಕಿರಣ, ಕೃತಿ ಪರಿಚಯದ ಮೂಲಕ ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವ ಯೋಜನೆ ಹಾಕಿಕೊಂಡಿದ್ದಾರೆ.
**
ಹಲವರಿಗೆ ಗೊತ್ತೇ ಇಲ್ಲ !
‘ಬೆಂದರೆ ಬೇಂದ್ರೆಯಾದಾನು’, ‘ಮಾಸ್ತಿ ಕನ್ನಡದ ಆಸ್ತಿ’, ‘ಕನ್ನಡಮ್ಮನ ಮನೆಯಲ್ಲಿ ಕನ್ನಡತಿ ಯಜಮಾನಿ’, ‘ಬಡತನ ಕೆಟ್ಟದ್ದಲ್ಲ ಬೌದ್ಧಿಕ ಬಡತನ ಕೆಟ್ಟದ್ದು’ ಇಂತಹ ಅಪರೂಪದ ಉಕ್ತಿಗಳ ಕರ್ತೃ ಬಿ.ಎಚ್. ಶ್ರೀಧರರು. ಆದರೆ, ಪೇಟೆಂಟ್ ಇಲ್ಲದ ಈ ಒಕ್ಕಣೆಗಳು ಯಾರದ್ದೆಂದು ಹಲವರಿಗೆ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.