ADVERTISEMENT

ಹುಲಿಗೆ ಬಿದ್ದ ಪುಣ್ಯಕೋಟಿಯ ಕನಸು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ಹುಲಿಗೆ ಬಿದ್ದ ಪುಣ್ಯಕೋಟಿಯ ಕನಸು
ಹುಲಿಗೆ ಬಿದ್ದ ಪುಣ್ಯಕೋಟಿಯ ಕನಸು   
ನಟರಾಜ್ ಹುಳಿಯಾರ್
ಕೊಟ್ಟ ಮಾತಿಗೆ ತಪ್ಪದೆ ಮರಳಿ ಬಂದ ಪುಣ್ಯಕೋಟಿಯ ಕಂಡು
ಹಾಗೆ ಹುಲಿ ಕಿಬ್ಬಿಯ ಕಡೆಗೆ ನಡೆಯಲು ಕಾರಣವಿತ್ತು: 
ಅದೇ ಆಗ ಭಿಕ್ಕುಗಳು ಅಡವಿಯಲ್ಲಿ ಬುದ್ಧನ ಕತೆ ಹೇಳಿ ಹೋಗಿದ್ದರು; 
ಅದು ಹುಲಿಯಂಥ ಹುಲಿಯ ಕಿವಿಗೂ ಬಿದ್ದಿತ್ತು
ಅವತ್ತು ಹುಲಿತನವೂ ಅಷ್ಟಿಷ್ಟು ಮಾಗಿತ್ತು.
 
ಹುಲಿ ಕಿಬ್ಬಿಯೇರಿ ಹಿಂಗಾಲೂರಿ ಕೆಳಗೆ ಜಿಗಿಯುವ ಗಳಿಗೆ
ಯಾಕೋ ಖಂಡವಿದುಕೋ ಮಾಂಸವಿದುಕೋ ಮೊರೆಯ
ಹೊಸ ಅರ್ಥ ಹೊಳೆಯತೊಡಗಿತು;
ಎಗರಿದ ಕಾಲು ಮೆಲ್ಲಗೆ ಕೆಳಗಿಳಿಯಿತು.
 
ಕಿಬ್ಬಿಯ ನೆತ್ತಿಯಿಂದ ಒಂದೇಟಿಗೆ ಕೆಳ ಹಾರಿ ಬಂದರೆ
ಹಸು ನಿಂತಲ್ಲೇ ನಿಂತಿತ್ತು; ಕಣ್ಣ ಕೊನೆಗೆ ಹನಿ ಹನಿದು ನಿಂತಿತ್ತು.
ಹುಲಿಯ ಹೆಜ್ಜೆಯ ದನಿಗೆ ಹಸುವಿನ ಬಾಲ ಜಿಗಿಯತೊಡಗಿತು
ಅರೆ! ಹುಲಿಗೂ ನಾಚಿಕೆಯೆ! ಹುಲಿಯ ಮುಖದಲ್ಲಿ ನಾಚಿಕೆ ಹಬ್ಬತೊಡಗಿತು.
  
ಮರಳಿ ಬೆಟ್ಟದ ಕಿಬ್ಬಿಯೇರಿದ ಹಸು ಹುಲಿಯ ಹೊಸ ಜೋಡಿ 
ಖಂಡ ಮಾಂಸಗಳಿಗಾಗಿ ಹುಡುಕಾಡಿತು
ಹಸು ಹುಲಿಯ ಮೈ ನೆಕ್ಕಿ, ಹುಲಿ ಪುಣ್ಯಕೋಟಿಯ ಎದೆ ಹೀರಿ
ಹಬ್ಬಿದಾ ಮಲೆ ಮಧ್ಯದೊಳಗೆ ಹೊಸ ನಂಟು ಚಿಗುರೊಡೆದಂತಿತ್ತು
ಚಿನ್ನಾಟ ಮುಗಿದ ಮೇಲಿನ ದಣಿವು ಸುಖ ಸೂರೆ ಹೊಡೆದ ಸಾವಿನಂತಿತ್ತು.
 
ಮತ್ತೆ ಹುಟ್ಟಿ ಬಂದಂತಿದ್ದ ಆ ಜೋಡಿ ಮುಸ್ಸಂಜೆ ಮೈಮುರಿದು ಮೇಲೆದ್ದು
ಹುಲಿಯು ಹಸುವಿನ ಹಾಗೆ ಹಸು ಹುಲಿಯ ಹಾಗೆ ಹೆಜ್ಜೆಯಿಡುವುದು ಕಂಡು,
ಧರಣಿಮಂಡಲ ಮಧ್ಯದೊಳಗೆಂದೂ ಕಂಡರಿಯದ ಮಾಯೆಯೊಂದನ್ನು ಕಂಡು
ಕಣ್ಣಗಲಿಸಿ ನಿಂತ ಗೊಲ್ಲಗೌಡನಿಗೆ ಆ ಸಂಜೆ ನಿತ್ಯದ ಹಾಡು ಮರೆತುಹೋಗಿತು;
 
ಗೊಲ್ಲಗೌಡನು ಮರೆತ ಹಾಡು ಹುಲಿಯ ಬಾಯಲ್ಲೀಗ:
ಗಂಗೆ ಬಾರೇ ಗೌರಿ ಬಾರೇ ತುಂಗಭದ್ರೆ ನೀನು ಬಾರೇ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.