ADVERTISEMENT

ಮಾತಿನ ಮಹಲಿನಲ್ಲಿ ಕಲಾತ್ಮಕತೆಯ ಮಂದಹಾಸ

ಕೋಡಿಬೆಟ್ಟು ರಾಜಲಕ್ಷ್ಮಿ
Published 3 ಫೆಬ್ರುವರಿ 2024, 23:34 IST
Last Updated 3 ಫೆಬ್ರುವರಿ 2024, 23:34 IST
   

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತಿನ ಅರಮನೆಯದ್ದೇ ಕಾರುಬಾರು ಬಹುಪಾಲು. ಆದರೆ ಲೇಖಕರ, ಗಣ್ಯರ ಮಾತುಗಳು, ಪುಸ್ತಕ ಪರಿಚಯ, ಹೊರಹೊಮ್ಮುವ ಕಥೆಗಳನ್ನು ನಿರಂತರವಾಗಿ ಆಲಿಸುವುದಕ್ಕೆ ಅಮ್ಮನಂತೆ ಅಕ್ಕರೆಯಿಂದ ಸಹಾಯ ಮಾಡುವುದು ಇಲ್ಲಿ ಅರಳಿನಿಂತ ಈ ಕಲಾಜಗತ್ತು. ಸಾಹಿತ್ಯೋತ್ಸವದ ಆವರಣದಲ್ಲಿ ಕೆಂಪು ಗುಲಾಬಿ ರಂಗು ಹೊದ್ದ ಕಾಗದದ ಹೂವಿನ ಅಲಂಕಾರವನ್ನು ದಾಟುತ್ತಿದ್ದಂತೆಯೇ ಗುಲಾಬಿ ಡಿಜಿಟಲ್‌ ಕಲಾಕೃತಿಗಳು ಜೈಪುರದ ಸಾಂಸ್ಕೃತಿಕ ಲೋಕಕ್ಕೆ ಕನ್ನಡಿ ಹಿಡಿದು ನಿಂತಿವೆ. ಓದು, ಹಾಡು, ವಾದ್ಯ, ನೃತ್ಯವನ್ನು ಆಪ್ತವಾಗಿ ಬಿಂಬಿಸುವ ಚಿಕಣಿ ಕೃತಿಗಳು ಎಲ್ಲ ಫ್ಲೆಕ್ಸ್‌ನಲ್ಲಿ, ವೇದಿಕೆಯಲ್ಲಿ. ಈ ಬಣ್ಣಗಳು ನೋಡುಗರ ಮನಸ್ಸಿಗೂ ಕೊಂಚ ರಂಗು ತುಂಬುತ್ತಿವೆ.

ಬಲಬದಿಯ ಗೋಸಂಪಿಗೆ ಮರಗಳ ಪುಟಾಣಿ ವನದಲ್ಲಿ ಟೊಂಗೆಗಳ ತುಂಬಾ ಬಣ್ಣದ ಚೀಟಿಗಳು. ಒಂದೊಂದು ಚೀಟಿಯಲ್ಲಿ ಪುಟ್ಟ ಕವಿತೆ, ಆಶಯ, ಕನಸುಗಳನ್ನು ಹೊತ್ತ ನೂರಾರು ಬರಹಗಳು. ‘ಈ ಗೌಜು, ನನ್ನ ಮನದ ಕೊಳದಲ್ಲಿ ಒಂದಿಷ್ಟು ಶಾಂತಿಯನ್ನು ತಂದಿದೆ’ಎಂಬ ಸಂದೇಶ ಬದುಕಿನ ಜಂಜಡದಿಂದ ದೂರವಾಗಿ ಸಾಹಿತ್ಯಲೋಕದಲ್ಲಿ ವಿಹರಿಸಿದ ಹುಡುಗಿಯೊಬ್ಬಳದು. ‘ನನ್ನ ಮಿದುಳಿನಲ್ಲೊಂದು ಅಂತ್ಯಕ್ರಿಯೆ ನಡೆದಿದೆ..ಈಗೊಂದು ಹೊಸದಾರಿ ತೆರೆದುಕೊಳ್ಳುವುದೇ...’ ಎಂಬ ಪ್ರಶ್ನೆ ಹೊತ್ತ ಚೀಟಿ ಮತ್ತೊಂದು ಟೊಂಗೆಯಲ್ಲಿ. ಬರೆದವರ ಮನದಲ್ಲಿ ಉತ್ಸವದ ಬಗ್ಗೆ ಎಷ್ಟೊಂದು ನಿರೀಕ್ಷೆಯಿರಬಹುದು!

ನ್ಯೂಜಿಲೆಂಡ್‌ನಿಂದ ಬಂದಿರುವ ಪುಸ್ತಕ ಪ್ರಿಯೆ ಜೆಲ್, ಬೆಂಗಳೂರಿನ ಸೊಸೆ. ಇಲ್ಲಿನ ವಾತಾವರಣವನ್ನು ವಿವರಿಸುತ್ತ, ‘ನಿಜವಾಗಿಯೂ ವೇದಿಕೆಯಲ್ಲಿ ನಾವು ಕೇಳುವ ಭಾಷಣಗಳು ಮತ್ತು ಮಾತಿನ ಜಟಾಪಟಿಗಳು ಒರಟಾಗದಂತೆ ಕಲಾ ಜಗತ್ತು ಸಹಾಯ ಮಾಡುತ್ತದೆ. ನಮ್ಮ ಮನಸ್ಸು ದಣಿಯದಂತೆ ನೋಡಿಕೊಳ್ಳುವ ಈ ಹಿನ್ನೆಲೆಯ ರಂಗು, ಜನಜಂಗುಳಿಯ ನಡುವೆ ಯಾರೋ ಕಲಾವಿದ ತನ್ನ ಪಾಡಿಗೆ ನುಡಿಸುತ್ತಿರುವ ಕೊಳಲಿನ ಧ್ವನಿಗೆ ವಿಶೇಷ ಧನ್ಯವಾದ ಯಾರು ಹೇಳುತ್ತಾರೆ?’ ಎಂದು ಕೇಳಿದರು.

ADVERTISEMENT

ನಂದಗಡ ಬಾಗಾನ್‌ ಎಂಬ ಚಂದದವನದಲ್ಲಿ ಬಣ್ಣದ ಕಲಾಕೃತಿಗಳು ಜಮಾಯಿಸಿ ಕರೆಯುತ್ತಿವೆ. ಹಳದಿ, ನೀಲಿ ರಂಗಿನ ವೇದಿಕೆಯೊಂದು ನೆಪಕ್ಕಷ್ಟೆ. ಪೇಂಟಿಂಗ್‌, ಟ್ಯಾಟೂ, ಖುಷಿಯ ಚಟುವಟಿಕೆಗಳನ್ನು ನಡೆಸುವುದು ಅನಿಲ್‌ ಅಗರ್‌ವಾಲ್‌ ಫೌಂಡೇಶನ್‌ನ ತಂಡದವರು. ಈ ಖುಷಿಗೆ ಸಂಗೀತ ತುಂಬುವುದು ರಾಜಸ್ಥಾನದ ಜನಪದ ವಾದ್ಯ ಮಶ್ಕೀ, ಶಹನಾಯಿ ಮತ್ತು ಪಂಜಾಬಿ ಡೋಲಕ್‌ನ ಧ್ವನಿ. ‘ಮಶ್ಕೀ ಎಂಬುದು ಜೈ‍ಪುರದಲ್ಲಿ ಎಲ್ಲ ಶುಭ ಸಮಾರಂಭಕ್ಕೂ  ಸಾಕ್ಷಿಯಾಗಬೇಕು. ಮತ್ತೆ ಇಲ್ಲಿ ನಾನು ಅದನ್ನು ನುಡಿಸದೇ ಇದ್ದರೆ ಹೇಗೆ ಹೇಳಿ’ ಎಂದು ಕೇಳುತ್ತಾರೆ ಪರ್ಕಾಶ್‌ ಕಂಡರಾ. ರೊಘುವೀರ್‌ ಅವರು ತಂದಿರುವ ಬೊಂಬೆಯಾಟದ ರಾಣಿಬೊಂಬೆಗಳೋ, ಜೈಪುರದ ಮಹಲಿನಿಂದ ಆಗಷ್ಟೇ ಹೊರಟು ಬಂದಂತಿವೆ. ಕಲಾವಿದ ಅಭಿಷೇಕ್‌ ಸಿಂಘ್ ಅವರ ಲೈವ್‌ ಇನ್‌ಸ್ಟಾಲೇಷನ್‌, ಓಜಸ್‌ ಆರ್ಟ್‌ನ ಕಲಾವಿದರು ನಿರ್ಮಿಸಿದ ಇನ್‌ಸ್ಟಾಲೇಷನ್‌ಗಳು ಒಬ್ಬೊಬ್ಬರಿಗೂ ಪ್ರತ್ಯೇಕ ಕಥೆಯನ್ನು ಹೇಳುವಂತೆ ನಿಂತಿವೆ.

ವೇದಿಕೆಗಳಲ್ಲಿ ಶಾಸ್ತ್ರೀಯ, ಪಾಶ್ಚಾತ್ಯ ಸಂಗೀತ ಎಲ್ಲರನ್ನೂ ಕೈ ಬೀಸಿ ಕರೆಯುವುದು ಇದ್ದೇ ಇದೆ. ಹೀಗೆಲ್ಲಾ ಸಂಭ್ರಮ ಪಡುವ ಮನುಷ್ಯರನ್ನು ನೋಡಲೆಂಬಂತೆ ಈಜುಕೊಳದ ಬಳಿಗೆ ಸಂಜೆ ಸಾವಿರಾರು ಹಕ್ಕಿಗಳು ಬಂದು ತಮ್ಮ ಹಾಡನ್ನೂ ಸೇರಿಸುತ್ತವೆ. ಭೋಜ್‌ಪುರಿ ಲೇಖಕ ಬದರಿ ನಾರಾಯಣ್‌ ಹೇಳುವಂತೆ, ‘ಈ ಜಗತ್ತಿನ ಆದಿಕವಿಗಳೆಂದರೆ ಈ ಹಕ್ಕಿಗಳು. ಅವು ಹಾಡಿದ ಹಾಡುಗಳೇ ಪುರಾತನ ಕಾವ್ಯ. ಅವುಗಳಿಗೆ ಕಿವಿಯಾಗುವುದು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ನಮ್ಮೊಳಗೆ ಸಹೃದಯತೆ ಉಳಿದಿರುತ್ತದೆ.’ ಅಷ್ಟರಲ್ಲಿ ಜೈಪುರದ ಕೋಮಲ್‌,‘ಚಹಾ ಕುಡೀರಲ್ಲಾ..’ ಎನ್ನುತ್ತಾ ಸಂತೋಷದ ನಗು ಹರಡಿದಳು. ಬನಾರಸಿ ಸೀರೆಯುಟ್ಟು ರಾಜಸ್ಥಾನಿ ಟರ್ಬನ್‌ ಧರಿಸಿದ ಆಕೆ ಚೆಲ್ಲಿದ ನಗುವಿನ ಬಣ್ಣ ಸುತ್ತಲೂ ಹೊಳೆಯಲಾರಂಭಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.