ADVERTISEMENT

ಗುರು ನಮನ: ಜನಾನುರಾಗಿ ಗಣಿತ ಶಿಕ್ಷಕ ಸಿ.ಕೆ. ಸರ್

ಅಮರೇಶ ನುಗಡೋಣಿ
Published 29 ಜುಲೈ 2023, 23:30 IST
Last Updated 29 ಜುಲೈ 2023, 23:30 IST
ನಿವೃತ್ತಿಯಾದ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ ಸಿ.ಕೆ. ಸರ್
ನಿವೃತ್ತಿಯಾದ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ ಸಿ.ಕೆ. ಸರ್   

ನಿವೃತ್ತಿಯಾದ ಮೇಲೆಯೂ ಶಾಲೆಗೆ ಹೋಗಿ ಗಣಿತ ಪಾಠ ಹೇಳುತ್ತ, ಮಕ್ಕಳೊಂದಿಗೆ ಆಡುತ್ತಿದ್ದಾರೆ ಹಿರೆವಂಕಲಕುಂಟಾದ ಚಂದ್ರಕಾಂತಯ್ಯ ಮೇಷ್ಟ್ರು. ಇಡೀ ಊರಲ್ಲಿ ಇವರು ಸಿ.ಕೆ. ಸರ್ ಎಂದೇ ಜನಪ್ರಿಯರು.

ಚಂದ್ರಕಾಂತಯ್ಯನವರು 1986ರಲ್ಲಿ ಗಣಿತ ಶಿಕ್ಷಕರಾಗಿ ನೇಮಕಗೊಂಡು ಸರ್ಕಾರಿ ಶಾಲೆ, ಹಿರೆವಂಕಲಕುಂಟಾದಲ್ಲಿ ಸೇವೆ ಆರಂಭಿಸಿದಾಗ, ಯಲಬರ್ಗಾ ತಾಲ್ಲೂಕಿನಲ್ಲಿದ್ದ (ಜಿ. ಕೊಪ್ಪಳ) ಈ ಹಳ್ಳಿ ಚಿಕ್ಕದು. ನೀರಾವರಿ ಇರದೆ, ಮಳೆ ನೀರಿನಲ್ಲಿಯೇ ರೈತರು ವ್ಯವಸಾಯ ಮಾಡುತ್ತಿದ್ದರು. ವರ್ಷಕ್ಕೆ ಒಂದೇ ಬೆಳೆ. ಜೋಳ, ನವಣೆ, ಹತ್ತಿ ಬೆಳೆಗಳೇ ಪ್ರಮುಖವಾಗಿದ್ದವು. ಸರ್ಕಾರಿ ಶಾಲೆಯಿದ್ದರೂ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ತಮ್ಮ ಹೊಲ ಮನೆಗಳ ಕೆಲಸಗಳಿಗೆ ತೊಡಗಿಸುವುದೇ ಹೆಚ್ಚಾಗಿತ್ತು. ಸಿ. ಕೆ. ಸರ್ ಇತರ ಸಹ ಶಿಕ್ಷಕರೊಂದಿಗೆ ಮನೆ ಮನೆಗಳಿಗೆ ಅಲೆದು ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಲು ವರ್ಷ ವರ್ಷ ಶ್ರಮಿಸಿದರು.

ಊರಲ್ಲಿ ದುಡಿವವರಿಗೆ ಕೂಲಿ ಕೆಲಸಗಳು ಸಿಗುತ್ತಿರಲಿಲ್ಲ. ಬಡವರು ನಗರಗಳಿಗೆ ಮಕ್ಕಳೊಂದಿಗೆ ವಲಸೆ ಹೋಗುತ್ತಿದ್ದರು. ಇಂಥ ಸ್ಥಿತಿಯಲ್ಲೂ ಮಕ್ಕಳನ್ನು ಶಾಲಾ ಕಡೆಗೆ ಬರುವಂತೆ ಸಿ. ಕೆ. ಸರ್ ಮತ್ತು ಅವರ ಸಹ ಶಿಕ್ಷಕರ ತಂಡ ಶ್ರಮಿಸಿತು. ಕೆಲವೇ ವರ್ಷಗಳಲ್ಲಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಏರುತ್ತಲೇ ಹೋಯಿತು. ಹೈಸ್ಕೂಲ್‌ನಲ್ಲಿ ಅವರು ನಿವೃತ್ತಿ ಹೊಂದುವ ಸಮಯದಲ್ಲಿ ಏಳುನೂರು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅಕ್ಕಪಕ್ಕದ ಹತ್ತಾರು ಹಳ್ಳಿಗಳಲ್ಲಿ ಶಾಲೆಗಳಿದ್ದರೂ ಸಿ.ಕೆ. ಸರ್ ಪ್ರಭಾವದಿಂದ ಹಿರೇವಂಕಲಕುಂಟಾ ಹೈಸ್ಕೂಲಿಗೆ ಪೋಷಕರು ಮಕ್ಕಳನ್ನು ಕಳಿಸುತ್ತಿದ್ದರು. ಶಾಲಾ ಆಡಳಿತವೂ ಕಲಿಕೆಯ ಪರವಾಗಿ ಸುಧಾರಿಸಿತ್ತು.

ADVERTISEMENT

ಸಿ.ಕೆ. ಸರ್ ಅವರು ತಮ್ಮ ಶ್ರಮ-ಶ್ರದ್ಧೆಗಳಿಂದ ದುಡಿಯುವ ಪ್ರವೃತ್ತಿಯುಳ್ಳವರಾಗಿದ್ದರು. ಶಾಲೆಗೆ ನಿತ್ಯವೂ ಒಂಬತ್ತು ಗಂಗೆ ಹೋಗಿ ಗಣಿತದ ತರಗತಿಯನ್ನು ಶುರು ಮಾಡುತ್ತಿದ್ದರು. ಸಂಜೆ ಶಾಲಾ ಸಮಯ ಮುಗಿದ ಮೇಲೆಯೂ ಒಂದು ಗಂಟೆ ಗಣಿತದ ಪಾಠಗಳನ್ನು ಮಾಡುತ್ತಿದ್ದರು. ಶಿಸ್ತಿನಿಂದ ಈ ರೀತಿ ಕೆಲಸ ಮಾಡುತ್ತ ಬಂದಿದ್ದರಿಂದ ಮಕ್ಕಳಿಗೂ, ಹಳ್ಳಿಗಳ ಜನರಿಗೂ ವಿಶ್ವಾಸ ಹೆಚ್ಚಾಗಿ ಗೌರವ ಪಡೆದರು. ಮೂಲತಃ ಶಿಕ್ಷಕ ಚಂದ್ರಕಾಂತಯ್ಯನವರು ಪಾಠದ ಜೊತೆಗೆ ಆಟಗಳಲ್ಲಿ ವಿಶೇಷ ಆಸಕ್ತಿಯುಳ್ಳವರಾಗಿದ್ದಾರೆ. ನಿತ್ಯ ವಿದ್ಯಾರ್ಥಿಗಳ ಜೊತೆಗೆ ಆಟವಾಡಲು ಮೈದಾನಕ್ಕೆ ಇಳಿಯುತ್ತಿದ್ದರು. ಶಾಲಾ ಮಟ್ಟದ ಕ್ರೀಡಾಕೂಟಗಳಿಗೆ ಆಟದ ತಂಡಗಳನ್ನು ಸಿದ್ಧ ಮಾಡಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುತ್ತ ಬಂದಿದ್ದಾರೆ. ಅವರ ಜನಪ್ರಿಯತೆಗೆ ಅದೂ ಕಾರಣವಾಗಿದೆ.

ಹಿರೇವಂಕಲಕುಂಟಾ ಶಾಲೆಗೆ ಬರುವ ಶಿಕ್ಷಕರು ತಾಲ್ಲೂಕು, ಜಿಲ್ಲೆಗಳಲ್ಲಿ ವಾಸವಾಗಿರುವವರು. ಮುಂಜಾನೆ ಬಂದು, ಸಂಜೆ ಪುನಃ ಹೋಗುವವರು. ಸಿ.ಕೆ. ಸರ್ 1986 ರಿಂದ ಈ ಹಳ್ಳಿಯಲ್ಲಿಯೇ ವಾಸವಾಗಿದ್ದಾರೆ. ಹಾಸ್ಟೆಲ್‌ಗಳನ್ನು ಸರ್ಕಾರ ಆರಂಭಿಸಿದ ಮೇಲೆ, ಅಲ್ಲಿ ತಂಗುತ್ತಿದ್ದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಪೋಷಕರನ್ನು ಬಿಟ್ಟು ಬಂದಿರುತ್ತಿದ್ದ ಮಕ್ಕಳು ಸಿ.ಕೆ. ಸರ್ ಅವರಿಂದ ಸಾಂತ್ವನ ಪಡೆಯುತ್ತಿದ್ದರು. ಸಿ.ಕೆ. ಸರ್ ಅವರ ಚಿಕ್ಕಮಗುವೊಂದು ತೀರಿಕೊಂಡಿತ್ತು. ಊರಿನ ಜನರೇ ನೆರೆದು, ಮಗುವಿನ ಮಣ್ಣು ಮಾಡಿ ಸಂತೈಸಿದ್ದರು. ಮರು ವರ್ಷ ಮತ್ತೊಂದು ಮಗು ಹುಟ್ಟಿದಾಗ ಊರ ಜನರೇ ನಿಂತು ನಾಮಕರಣ ಮಾಡಿ ಸಂಭ್ರಮಿಸಿದ್ದರು. ಸಿ. ಕೆ. ಸರ್ ಅವರ ಪತ್ನಿ ಮನೆವಾರ್ತೆಯನ್ನು ನೋಡಿಕೊಂಡು ಬಂದಿದ್ದಾರೆ. 36 ವರ್ಷಗಳಿಂದ ಈ ಹಳ್ಳಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು ಜೀವನ ನಡೆಸಿದ್ದಾರೆ. ಪತಿಗೆ ಮೂರು ಹೊತ್ತು ಬಿಸಿ ರೊಟ್ಟಿ ಮಾಡಿ ಉಣ್ಣಲು ಕೊಡುತ್ತಾರಂತೆ. ಈಗ ನಿವೃತ್ತಿಯಾಗಿದ್ದರೂ ಸಾವಿರಾರು ಪೋಷಕರು ‘ನಮ್ಮೂರು ಬಿಟ್ಟು ಹೋಗಬೇಡಿ’ ಎಂದು ಕೈ ಮುಗಿಯುತ್ತಿದ್ದಾರೆ.

ಮುಂದಿನ ದಾರಿ ಯಾವುದೆಂದು ಸಿ.ಕೆ. ಸರ್ ಅವರನ್ನು ಕೇಳಿದರೆ, ‘ನಾನು ನಿವೃತ್ತಿಯಾದ ಮ್ಯಾಲ ಯಥಾ ರೀತಿ ಶಾಲೆಗೆ ಹೋಗಿ ಗಣಿತ ಪಾಠ ಮಾಡ್ತಿದ್ದೀನಿ. ಮಕ್ಕಳ ಜತೆ ಮೈದಾನದಲ್ಲಿ ಆಟ ಆಡ್ತಿದ್ದೀನಿ. ಮಕ್ಕಳಿಗೆ ನಾನು ನಿವೃತ್ತಿಯಾಗಿದ್ದೀನಿ ಅಂತನ್ನಿಸಿಲ್ಲ. ನನಗೂ ಅನ್ನಿಸಿಲ್ಲ. ನಿತ್ಯದ ದಿನಚರಿಯಲ್ಲಿ ಚೂರೂ ಬದಲಾವಣೆ ಮಾಡಿಕೊಂಡಿಲ್ಲ ನಾನು. ಹಳೆ ವಿದ್ಯಾರ್ಥಿ ಸಂಘದವರು ಸೇರಿಕೊಂಡು, ‘ನಮ್ಮ ಶಾಲೆಯಲ್ಲೇ ನೀವಿರಬೇಕು. ಇದ್ದು ಪಾಠ ಆಟದ ಜತೆಗೆ ಕಾಲ ಕಳೀರಿ. ತಿಂಗಳಿಗೆ ಒಂದಷ್ಟು ಗೌರವಧನ ಕೊಡ್ತೀವಿ’ ಅಂತ ಹೇಳಿದ್ರು. ‘ಸರ್ಕಾರ ನನ್ಗ ಸಾಯುವ ತನಕ ಪಿಂಚಣಿ ಕೊಡ್ತದ. ಅದು ಪಗಾರನೇ. ಆರೋಗ್ಯ ಗಟ್ಟಿಯಿರತನಕ ಪಾಠ ಮಾಡ್ತೀನಿ. ಯಾವ ಗೌರವಧನ ಬ್ಯಾಡ್ರೀ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.