ADVERTISEMENT

ಐ.ಟಿ ಉದ್ಯೋಗಿಗಳ ಸಂಘಟನೆ ನೋಂದಣಿಗೆ ವೇದಿಕೆ ಸಜ್ಜು

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST

ಬೆಂಗಳೂರು :  ದೊಡ್ಡ ಪ್ರಮಾಣದಲ್ಲಿ ಐ.ಟಿ ಉದ್ಯೋಗಗಳ  ಕಡಿತ  ಮಾಡಲಾಗುತ್ತಿದೆ ಎನ್ನುವ ವರದಿಗಳ ಬೆನ್ನಲ್ಲೇ ದೇಶದಲ್ಲಿ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಐ.ಟಿ ಉದ್ಯೋಗಿಗಳ ಸಂಘಟನೆಯೊಂದು ಅಸ್ತಿತ್ವಕ್ಕೆ ಬರಲು ವೇದಿಕೆ ಸಿದ್ಧವಾಗಿದೆ.

ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ವೇದಿಕೆ ‘ಎಫ್‌ಐಟಿಇ’ (ಫೋರಂ ಫಾರ್‌ ಇನ್‌ಫಾರ್ಮೇಷನ್‌ ಟೆಕ್ನಾಲಜಿ ಎಂಪ್ಲಾಯೀಸ್‌) ನೋಂದಣಿಗೆ ಸಿದ್ಧತೆ ನಡೆದಿದ್ದು, ದೇಶದ ಮೊದಲ ಐ.ಟಿ ಉದ್ಯೋಗಿಗಳ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

‘ಮುಂದಿನ ಐದಾರು  ತಿಂಗಳ ಒಳಗೆ  ಸಂಘಟನೆ ನೋಂದಣಿ ಕಾರ್ಯ ಮುಗಿದ ನಂತರ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬರಲಿದೆ’ ಎಂದು   ವೇದಿಕೆಯ ಉಪಾಧ್ಯಕ್ಷೆ ವಸುಮತಿ ತಿಳಿಸಿದ್ದಾರೆ.

ADVERTISEMENT

‘ದೇಶದ ಪ್ರಮುಖ ಐ. ಟಿ. ಕಂಪೆನಿಗಳು ಸಕಾರಣವಿಲ್ಲದೆ ಏಕಾಏಕಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ಬೆಳವಣಿಗೆಯ ಕಾರಣಕ್ಕೆ  ಸಂಘಟನೆಯನ್ನು ನೋಂದಣಿ ಮಾಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು. 2008ರಿಂದಲೂ ವೇದಿಕೆಯು  ಚಟುವಟಿಕೆಯಲ್ಲಿ ತೊಡಗಿದ್ದು ಈ ಹಿಂದೆ ಶ್ರೀಲಂಕಾ ತಮಿಳರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿತ್ತು.  ಸುಮಾರು ಒಂದು ಸಾವಿರದಷ್ಟು ಆನ್‌ಲೈನ್‌ ಸದಸ್ಯರು ಮತ್ತು ನೂರಕ್ಕೂ ಹೆಚ್ಚು ಸಕ್ರೀಯ ಕಾರ್ಯಕರ್ತರನ್ನು ಈ ಸಂಘಟನೆ ಹೊಂದಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಪುಣೆ, ಮುಂಬೈ, ಕೊಚ್ಚಿ ಹಾಗೂ ದೆಹಲಿ ಸೇರಿದಂತೆ ಒಟ್ಟು 9 ನಗರಗಳಲ್ಲಿ ಶಾಖೆ ಹೊಂದಿದ್ದು, ಐ.ಟಿ ಉದ್ಯೋಗಳ ಪರ ಹೋರಾಟ ನಡೆಸುತ್ತಿದೆ. ‘ಲಾಭದ ದೃಷ್ಟಿಯಿಂದ ಐ.ಟಿ ಕಂಪೆನಿಗಳು ವಿನಾಕಾರಣ ಉದ್ಯೋಗಿಗಳ ‘ಕಾರ್ಯಕ್ಷಮತೆ ಕೊರತೆ’ಯ ನೆಪವೊಡ್ಡಿ ಕೆಲಸದಿಂದ ಕಿತ್ತು ಹಾಕುತ್ತಿವೆ.

ಐ.ಟಿ ಕಂಪೆನಿಗಳ ಉದ್ಯೋಗ ಕಡಿತ ಪ್ರವೃತ್ತಿ ಆ ಸಂಸ್ಥೆಗಳಿಗೆ ತಾತ್ಕಾಲಿಕ ಲಾಭ ತಂದುಕೊಡಬಹುದು. ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮ ಗೋಚರಿಸಲಿದೆ’ ಎಂದು ಹೇಳುತ್ತಾರೆ. ‘ಕೈಗಾರಿಕಾ ವ್ಯಾಜ್ಯ ಕಾಯ್ದೆಯ ಅನ್ವಯ,  ಲಾಭದಲ್ಲಿರುವ ಐ.ಟಿ ಕಂಪೆನಿಗಳು ಉದ್ಯೋಗಿಗಳನ್ನು ವಜಾ ಮಾಡುವಂತಿಲ್ಲ’ ಎನ್ನುವುದು ಸಂಘಟನೆಯ  ಸದಸ್ಯ ಜಯಪ್ರಕಾಶ್‌ ಅವರ ವಾದ.

‘ನಷ್ಟದಲ್ಲಿರುವ ಕಂಪೆನಿಗಳು ಮಾತ್ರ  ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬಹುದು. ಒಂದೊಮ್ಮೆ ಆ ಕಂಪೆನಿ ಆರ್ಥಿಕವಾಗಿ ಸದೃಢವಾಗಿ ಪುನಃ ಕಾರ್ಯಾರಂಭ ಮಾಡಿದರೆ ನೇಮಕಾತಿ ವೇಳೆ ಮೊದಲಿದ್ದ  ಸಿಬ್ಬಂದಿಗೆ ಆದ್ಯತೆ ನೀಡಬೇಕೆಂದು  ಕಾನೂನು ಹೇಳುತ್ತದೆ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.