ADVERTISEMENT

ಕಾರ್ಡ್‌ ಸೇವಾ ಶುಲ್ಕ ಗುಮ್ಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಕಾರ್ಡ್‌ ಸೇವಾ ಶುಲ್ಕ ಗುಮ್ಮ
ಕಾರ್ಡ್‌ ಸೇವಾ ಶುಲ್ಕ ಗುಮ್ಮ   
ಪೆಟ್ರೋಲ್‌ ಬಂಕ್‌ಗಳಲ್ಲಿ ಹಣ ಪಾವತಿಸುವ ವಿಚಾರ ಇತ್ತೀಚೆಗೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಗ್ರಾಹಕರು ಡೆಬಿಟ್‌ ಮತ್ತ ಕ್ರೆಡಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸುವಾಗ ಕಡಿತವಾಗುವ ಶುಲ್ಕದ ಬಗ್ಗೆ ಗೊಂದಲ ಉಂಟಾಗಿತ್ತು. ಅದಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ, ಕಾರ್ಡ್‌ಗಳನ್ನು ಬಳಸಿದಾಗ ‘ಸೇವಾ ಶುಲ್ಕ’ ಎನ್ನುವ ಗುಮ್ಮ ಈಗ ಎಲ್ಲರನ್ನೂ ಕಾಡುತ್ತಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಸ್ಪಷ್ಟವಾದ ನೀತಿ ರೂಪಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
 
ಪ್ರತಿ ಬಾರಿ ಕಾರ್ಡ್‌ ಬಳಸಿದಾಗ ಸ್ವೈಪ್‌ ಸಾಧನ ಅಳವಡಿಸಿದ ಕಂಪೆನಿಗೂ ಸೇವಾ ಶುಲ್ಕದಲ್ಲಿನ ಪಾಲು ಪಾವತಿಯಾಗುತ್ತದೆ. ಕ್ರೆಡಿಟ್‌ ಕಾರ್ಡ್‌ ವಿತರಿಸುವ ವೀಸಾ, ಮಾಸ್ಟರ್‌ಕಾರ್ಡ್‌ ಮತ್ತು ಈ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡುವ ಬ್ಯಾಂಕ್‌ಗಳು ಶೇಕಡ 1ರಷ್ಟು ಶುಲ್ಕವನ್ನು ಪ್ರತಿ ವಹಿವಾಟಿಗೆ ಪಡೆದುಕೊಳ್ಳುತ್ತವೆ. ಈ ಶುಲ್ಕಕ್ಕೆ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಎಂದು ಕರೆಯಲಾಗುತ್ತದೆ. ಪ್ರತಿ ಬಾರಿ ಕಾರ್ಡ್‌ ಬಳಸಿದಾಗ ಈ ಶುಲ್ಕವನ್ನು ವ್ಯಾಪಾರಿಗಳು ಅಥವಾ ಯಂತ್ರ ಅಳವಡಿಸಿಕೊಂಡಿರುವ ವರ್ತಕರು ಪಾವತಿಸುತ್ತಾರೆ.
 
ಕಾರ್ಡ್‌ ಬಳಕೆಯ ಮೂಲ ಸೌಕರ್ಯಗಳ ನಿರ್ವಹಣೆಗೆ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.
 
ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ವಿತರಿಸುವವರು (ಸಾಮಾನ್ಯವಾಗಿ ಬ್ಯಾಂಕ್‌ಗಳು) ಮತ್ತು ಪೆಟ್ರೋಲ್‌ ಬಂಕ್‌ ಮಾಲೀಕರ ಮಧ್ಯೆ ಕಾರ್ಡ್‌ ಮೂಲಕ ಹಣ ಪಾವತಿ ವಿಷಯದಲ್ಲಿ ಇತ್ತೀಚೆಗೆ ಸಂಘರ್ಷ ನಡೆಯಿತು. ಹೀಗಾಗಿ ಸೇವಾ ಶುಲ್ಕ ವಿಷಯ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯಿತು. ಪೆಟ್ರೋಲ್‌ ಬಂಕ್‌ಗಳಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಸಿದಾಗ ಪಡೆಯುವ ಸೇವಾ ಶುಲ್ಕದಿಂದ ಡೀಲರ್‌ಗಳ ಲಾಭಕ್ಕೂ ಕುತ್ತು ತಂದಿದೆ ಎನ್ನುವ ವಾದ ಮಂಡಿಸಲಾಗಿತ್ತು.
 
2016ರ ನವೆಂಬರ್‌ 8ರ ನಂತರ ಗ್ರಾಹಕರು ನಗದು ರಹಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಇಂಧನ ಖರೀದಿಸುವಾಗ ಕಾರ್ಡ್‌ ಬ ಳಸುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಶೇಕಡ 0.75ರಷ್ಟು ರಿಯಾಯ್ತಿ ಘೋಷಿಸಿತ್ತು. 50 ದಿನಗಳ ಕಾಲ ಎಂಡಿಆರ್‌ ಶುಲ್ಕದಿಂದ ವಿನಾಯಿತಿ ಸಹ ನೀಡಲಾಯಿತು. ಆದರೆ, 50 ದಿನಗಳ ಬಳಿಕ ಬ್ಯಾಂಕ್‌ಗಳು ಮತ್ತೆ ಕಾರ್ಡ್‌ ಬಳಸಿದಾಗ ಶುಲ್ಕವನ್ನು ಪಡೆಯಲು ಆರಂಭಿಸಿದ್ದವು.
 
‘ಪೆಟ್ರೋಲ್‌ ಬಂಕ್‌ಗಳ ಮಾಲೀಕರು ಶುಲ್ಕ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಲಾಭ ದೊರೆಯದ ಕಾರಣ ಪ್ರತಿ ವಹಿವಾಟಿಗೂ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.’ ಎಂದು ಎಸ್‌ಬಿಐ ಕಾರ್ಡ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್‌ ಜಸುಜಾ ಹೇಳುತ್ತಾರೆ. ಆದರೆ, ಸರ್ಕಾರ ಘೋಷಿಸಿದ್ದ ಶೇಕಡ 0.75 ರಿಯಾಯ್ತಿ ಶುಲ್ಕವನ್ನು ಯಾರು ಭರಿಸುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ.
 
ಡಿಜಿಟಲ್‌ ಪಾವತಿ ಮೂಲಕ ಕೇವಲ ವ್ಯಾಪಾರಿಗಳಿಗೆ ಸಮಸ್ಯೆ ಸೃಷ್ಟಿಸಿಲ್ಲ. ಗ್ರಾಹಕರಿಗೂ ಹೊರೆಯಾಗುತ್ತಿದೆ. ಗ್ರಾಹಕರು ಕಾರ್ಡ್‌ ಮೂಲಕ ಪೆಟ್ರೋಲ್‌ ಅಥವಾ ಡೀಸೆಲ್‌ ಖರೀದಿಸಿದಾಗ ಶೇಕಡ 2.5ರಷ್ಟು ಸರ್ಚಾರ್ಜ್‌ ಪಾವತಿಸಬೇಕಾಗುತ್ತಿದೆ. ಕೆಲವು ಬ್ಯಾಂಕ್‌ಗಳು ಮಾತ್ರ ಈ ಶುಲ್ಕಕ್ಕೆ ವಿನಾಯಿತಿ  ನೀಡಿವೆ.
 
‘ಈ ಮೊದಲು ಕಾರ್ಡ್‌ ವಿತರಿಸುವ ಕಂಪೆನಿಗಳು ವಿವಿಧ ಬಿಲ್‌ಗಳು, ರೈಲ್ವೆನಲ್ಲಿ ಸೀಟುಗಳ ಕಾಯ್ದಿರಿಸುವಿಕೆ ಮತ್ತು ಜೀವ ವಿಮೆ ಪಾವತಿಸಲು ಕಡಿಮೆ ಎಂಡಿಆರ್‌ ಶುಲ್ಕವನ್ನು ಪಡೆಯುತ್ತಿದ್ದವು. ಪೆಟ್ರೋಲ್‌ ಬಂಕ್‌ಗಳಲ್ಲಿ ಎಂಡಿಆರ್‌ ಶುಲ್ಕವನ್ನೇ ಪಡೆಯುತ್ತಿರಲಿಲ್ಲ. ಆದರೆ, ಬ್ಯಾಂಕ್‌ಗಳು ಶೇಕಡ 2.5ರಷ್ಟು ಸರ್ಚಾರ್ಜ್‌ ಅನ್ನು ಗ್ರಾಹಕರಿಂದ ಪಡೆಯುತ್ತಿದ್ದವು’ ಎಂದು ಪೈಸಾಬಜಾರ್‌ಡಾಟ್‌ಕಾಮ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಕುಕ್ರೇಜಾ ಹೇಳುತ್ತಾರೆ.
 
ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಡಿಜಿಟಲ್‌ ಪಾವತಿಗೆ ಉತ್ತೇಜಿಸಲು ಮುಂದಾಗಿರುವ ಸರ್ಕಾರ ಹೊಸದಾಗಿ ಸೃಷ್ಟಿಯಾಗಿರುವ ಗೊಂದಲಗಳನ್ನು ಯಾರಿಗೂ ಹೊರೆಯಾಗದಂತೆ ನಿವಾರಿಸುವ ಪ್ರಯತ್ನ ಮಾಡಬೇಕಾಗಿದೆ.
 
ಎಂಡಿಆರ್‌ ಅಂದರೇನು?
ವಿದ್ಯುನ್ಮಾನ ಸಾಧನಗಳ ಮೂಲಕ ನಡೆಯುವ ಪ್ರತಿಯೊಂದು ವಹಿವಾಟಿಗೂ ವ್ಯಾಪಾರಿಗಳು ಪಾವತಿಸುವ ಶುಲ್ಕಕ್ಕೆ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌)  ಎಂದು ಕರೆಯಲಾಗುತ್ತದೆ. ತಮಗೆ ಕಡಿಮೆ ಲಾಭ ದೊರೆಯುತ್ತದೆ ಎನ್ನುವ ಕಾರಣ ಹೇಳಿ ಹಲವು ಬಾರಿ ಈ ಶುಲ್ಕವನ್ನು ವ್ಯಾಪಾರಿಗಳು ಗ್ರಾಹಕರಿಂದಲೇ ಪಡೆಯುತ್ತಾರೆ. 
 
ಎಸ್‌ಬಿಐ ವಿನಾಯ್ತಿ
ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ ಎಸ್‌ಬಿಐ ಡೆಬಿಟ್‌ ಕಾರ್ಡ್‌ ಮೂಲಕ ಸಣ್ಣ ವ್ಯಾಪಾರಿಗಳು ನಡೆಸುವ ವಹಿವಾಟಿಗೆ ಒಂದು ವರ್ಷಗಳ ಕಾಲ ಎಂಡಿಆರ್‌ ಶುಲ್ಕದಿಂದ ವಿನಾಯಿತಿ ನೀಡುವುದಾಗಿ ತಿಳಿಸಿದೆ.
 
₹ 20 ಲಕ್ಷ ವಹಿವಾಟು ನಡೆಯುವ ವ್ಯಾಪಾರಿಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ. ಕಾರ್ಡ್‌ ಬಳಕೆಯನ್ನು ಉತ್ತೇಜಿಸಲು ಹಾಗೂ ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.
 
ಆರ್‌ಬಿಐ ನಿಗದಿಪಡಿಸಿದ ಶುಲ್ಕ
ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಪಾವತಿಸಬೇಕಾದ ಶುಲ್ಕವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌  ನಿಗದಿಪಡಿಸಿದೆ.  
₹ 1,000 ವರೆಗಿನ ವಹಿವಾಟಿಗೆ ಶೇ 0.25  ಮತ್ತು ₹ 2,000ವರೆಗಿನ ವಹಿವಾಟಿಗೆ ಶೇ 0.50 ಮತ್ತು ₹ 2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 1ರಷ್ಟು ಶುಲ್ಕ ನಿಗದಿ ಮಾಡಿದೆ.
 
ಆದರೆ,  ಕ್ರೆಡಿಟ್‌ ಕಾರ್ಡ್‌ ವಹಿವಾಟಿಗೆ ಪಾವತಿಸುವ ಶುಲ್ಕದ ಬಗ್ಗೆ ಆರ್‌ಬಿಐ ಯಾವುದೇ ಮಿತಿ ವಿಧಿಸಿಲ್ಲ. ಇದನ್ನು ಬ್ಯಾಂಕ್‌ಗಳು ಮತ್ತು ವರ್ತಕರ ವಿವೇಚನೆಗೆ ಬಿಟ್ಟಿದೆ. 
 
ಈ ಶುಲ್ಕವು ಶೇ 1 ರಿಂದ ಶೇ 1.75 ಮಧ್ಯೆ ಇರಲಿದೆ. ಕೆಲ ಸಂದರ್ಭಗಳಲ್ಲಿ ಇದು ಶೇ 2ಕ್ಕೂ ತಲುಪಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
 
ನಿಯಮ ಉಲ್ಲಂಘನೆ
ಈ ಕಾರ್ಡ್‌ ಶುಲ್ಕವನ್ನು ವರ್ತಕರು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಹಲವಾರು ಸಂದರ್ಭಗಳಲ್ಲಿ ವರ್ತಕರು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮಧ್ಯೆ ವಿಧಿಸುವ ಶುಲ್ಕದಲ್ಲಿ ವ್ಯತ್ಯಾಸ ಇರುವುದನ್ನು  ಲೆಕ್ಕಕ್ಕೆ ತೆಗೆದುಕೊಳ್ಳದೇ ಏಕರೂಪವಾಗಿ ಶೇ 2ರಷ್ಟು ಶುಲ್ಕ ವಿಧಿಸುತ್ತಾರೆ ಎಂದೂ ಬ್ಯಾಂಕಿಂಗ್‌ ಮೂಲಗಳು ತಿಳಿಸುತ್ತವೆ.
 
ಈ ರೀತಿ ಗ್ರಾಹಕರ ಮೇಲೆ ಹೊರೆ ವಿಧಿಸುವುದು ಕಾನೂನು ಬಾಹಿರ ನಡೆಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.