ADVERTISEMENT

ವೃದ್ಧರಿಗಾಗಿಯೇ ಹೊಸ ಲೌಡ್‌ಸ್ಪೀಕರ್‌!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಶ್ರವಣ ನ್ಯೂನತೆ ವೃದ್ಧರನ್ನು ಕಾಡುವ ಸಹಜ ಸಮಸ್ಯೆ. ಮೆಲ್ಲಗೆ ಮಾತನಾಡಿದ್ದು ಕೇಳಿಸುವುದಿಲ್ಲ. ಎಲ್ಲವನ್ನೂ ಏರು ದನಿಯಲ್ಲಿ ಅಥವಾ ಕಿರುಚಿಯೇ ಹೇಳಬೇಕು.

ಅವರೊಟ್ಟಿಗೆ ಮಾತನಾಡುವಾಗ ಏರು ದನಿಯಲ್ಲಿ ನಾವು ಸಂಭಾಷಣೆ ನಡೆಸಬೇಕು. ಮನೆಯಲ್ಲಿ ಒಟ್ಟಿಗೆ ಟಿವಿ ನೋಡಲು ಕುಳಿತಾಗಲಂತೂ ವಾಲ್ಯೂಂ ಎಷ್ಟು ಜೋರಾಗಿ ಇಟ್ಟರೂ ಸಾಲುವುದಿಲ್ಲ.

‘ಕೇಳೋದೇ ಇಲ್ಲ ಕಣ್ರೊ, ಇನ್ನೂ ಒಂಚೂರು ಸೌಂಡ್‌ ಜೋರು ಇಡು’ ಎನ್ನುತ್ತಾರೆ. ಅವರಿಗೇನೋ ಕಿವಿ ಸಮಸ್ಯೆ ಇರುತ್ತದೆ.  ಆದರೆ ಅವರೊಟ್ಟಿಗೆ ಟಿವಿ ನೋಡಲು ಕುಳಿತ ಉಳಿದವರ ಪಾಡೇನು? ಆ ಗರಿಷ್ಠ ಮಟ್ಟದ ವಾಲ್ಯೂಂ ಸಹಿಸಲು ಆಗುವುದೇ ಇಲ್ಲ.

ಆದರೆ ನಮ್ಮಿಷ್ಟದ ಕಾರ್ಯಕ್ರಮ ನೋಡುವಾಗ ಪ್ರತೀ ಬಾರಿಯೂ ಇದೇ ಸಮಸ್ಯೆ ಮುಂದುವರಿದರೆ, ‘ನೀನು ಆಮೇಲೆ ನೋಡು’ ಅಂತ ಅಜ್ಜ, ಅಜ್ಜಿಗೆ ಜೋರು ಮಾಡಿ ಅವರನ್ನೇ ಆ ಕಡೆ ಕಳುಹಿಸಿಬಿಡುತ್ತೇವೆ.

ವಯೋವೃದ್ಧರು ಟಿವಿ ನೋಡುವಾಗ ಎದುರಿಸುವ ಇಂತಹ ಶ್ರವಣ ದೋಷದ ಸಮಸ್ಯೆಗಳನ್ನು ಗಮನ­ದಲ್ಲಿಟ್ಟುಕೊಂಡು ಬ್ರಿಟನ್ನಿನ ಸೌತ್‌ಆ್ಯಂಪ್ಟನ್‌ ವಿಶ್ವವಿದ್ಯಾಲಯದ ತಂತ್ರಜ್ಞರು ವಿಶೇಷವಾದ ಲೌಡ್‌ ಸ್ಪೀಕರ್‌ ತಯಾರಿಸಿದ್ದಾರೆ.

ಲೌಡ್‌ ಸ್ಪೀಕರ್‌ ಎಂದಾಕ್ಷಣ ಕಿವಿಗಡಚಿಕ್ಕುವ ಶಬ್ಧ ಮಾಡುತ್ತದೆ ಎಂದು ಗಾಬರಿ ಪಡಬೇಕಿಲ್ಲ. ಏಕೆಂದರೆ  ಮೊದಲೇ ಹೇಳಿದಂತೆ ಶ್ರವಣ ನ್ಯೂನತೆ ಇರುವವರಿಗೆಂದೇ ಈ ವಿಶಿಷ್ಟ ಲೌಡ್‌ ಸ್ಪೀಕರ್‌ ವಿನ್ಯಾಸಗೊಳಿಸಲಾಗಿದೆ. ಕಿವಿ ಸ್ಪಷ್ಟವಾಗಿ ಕೇಳಿಸುವವರಿಗೆ ಈ ವಿಶಿಷ್ಟ ಸಾಧನ ಯಾವುದೇ ತೊಂದರೆ ಉಂಟು­ಮಾಡುವುದಿಲ್ಲ ಎನ್ನುತ್ತಾರೆ ತಂತ್ರಜ್ಞ ಮಾರ್ಕೋಸ್‌ ಸಿಮನ್‌.

70 ವರ್ಷವಾದವರಲ್ಲಿ ಸಹಜವಾಗಿ ಕಂಡುಬರುವ ಶ್ರವಣ ನ್ಯೂನತೆ ಬಗ್ಗೆ ಅಧ್ಯಯನ ನಡೆಸಿ ಈ ಸಾಧನ ತಯಾರಿಸಲಾಗಿದೆ ಎನ್ನುತ್ತಾರೆ ಅವರು.

ಶ್ರವಣ ಪ್ರಸಾರಕ ವ್ಯವಸ್ಥೆ (Acoustical Radiator) ಶ್ರವಣ ನ್ಯೂನತೆ ಇರುವ ವ್ಯಕ್ತಿ ಕುಳಿತಿರುವ ಕಡೆಗೆ ಮಾತ್ರ ಎತ್ತರಿಸಿದ ದ್ವನಿ ಅಥವಾ ಹೆಚ್ಚು ವಾಲ್ಯೂಂ ಕೇಳಿಸುವಂತೆ ಮಾಡುತ್ತದೆ. ಉಳಿದವರ ಕಿವಿಗೆ ಎಂದಿನ ಪ್ರಮಾಣದಲ್ಲೇ ಹಿತಿ ಮಿತವಾದ ವಾಲ್ಯೂಂ ರವಾನೆಯಾಗುತ್ತದೆ.

ಶ್ರವಣ ನ್ಯೂನತೆ ಇರುವವರನ್ನು ಒಳಗೊಂಡು ಎಲ್ಲಾ ವಯೋಮಾನದವರನ್ನೂ ಪರೀಕ್ಷೆಗೆ ಒಳಪಡಿಸಿ ಈ ವಿಭಿನ್ನವಾದ ಧ್ವನಿ ಏರಿಳಿತದ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಪರೀಕ್ಷಾರ್ಥ ಪ್ರಯೋಗದ ವೇಳೆಯಲ್ಲಂತೂ ಉತ್ತಮ ಫಲಿತಾಂಶವೇ ದೊರಕಿದೆ ಎನ್ನುತ್ತಾರೆ ಮಾರ್ಕೋಸ್‌.

ಟಿ.ವಿಯಲ್ಲಿ ಇಷ್ಟದ ಕಾರ್ಯಕ್ರಮವನ್ನು ಶ್ರವಣ ಸಮಸ್ಯೆ ಇರುವ ಕುಟುಂಬದ ಹಿರಿಯ ಸದಸ್ಯರ ಜೊತೆಗೇ ಕುಳಿತುಕೊಂಡು ಮನೆ ಮಂದಿಯೆಲ್ಲರೂ ವೀಕ್ಷಿಸಿ ಆನಂದಿಸಬಹುದು. ಅವರವರ ಕಿವಿಗೆ ಮಾತು ಕತೆ, ಗಾಯನ, ಹಿನ್ನೆಲೆ ಸಂಗೀತ ಎಲ್ಲವೂ ಸಮರ್ಪ ಕವಾಗಿ ಕೇಳುವಂತಹ ಈ ಹೊಸ ಸಾಧನದಿಂದ ಅಂತಹ ಮಹದುಪಕಾರವಾಗಲಿದೆ.

ಆದರೆ, ಸದ್ಯ ಪರೀಕ್ಷಾರ್ಥ ಪ್ರಯೋಗದ ಹಂತ ದಲ್ಲಿಯೇ ಇರುವ ಈ ವಿಶಿಷ್ಟ ಸಾಧನ, ಇನ್ನಷ್ಟೇ ಪರಿ ಪೂರ್ಣ ರೀತಿಯಲ್ಲಿ ಸಿದ್ಧವಾಗಿ ಮಾರುಕಟ್ಟೆ ಪ್ರವೇಶಿಸ ಬೇಕಿದೆ ಅಷ್ಟೆ. ಅಲ್ಲಿಯವರೆಗೂ ಟಿ.ವಿ ವೀಕ್ಷಣೆಯನ್ನು ಈಗಿನಂತೆಯೇ ಸ್ವಲ್ಪ ಹೊಂದಾಣಿಕೆಯಲ್ಲೇ ಮುಂದು ವರಿಸಬೇಕಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.