ADVERTISEMENT

ಷೇರುಪೇಟೆ ವಹಿವಾಟು ಚಂಚಲ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಷೇರುಪೇಟೆ­ಯಲ್ಲಿ ಬಾಂಡ್‌ಗಳ ವಾಯಿದೆ ಅವಧಿ ಗುರುವಾರ ಮುಕ್ತಾಯಗೊಳ್ಳಲಿದೆ. ಇದರಿಂದ ಈ ವಾರದ ವಹಿವಾಟು ಚಂಚಲವಾಗಿರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪರಿಣಿತರು ವಿಶ್ಲೇಷಿಸಿ­ದ್ದಾರೆ.

ವಿದೇಶಿ ಹೂಡಿಕೆ, ಜಾಗತಿಕ ವಿದ್ಯ­ಮಾನಗಳು, ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ ಮತ್ತು ಕಚ್ಚಾ ತೈಲ ಬೆಲೆ ಏರಿಳಿತವೂ ಕೂಡಾ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಭಾರತೀಯ ರಿಸರ್ವ್‌್ ಬ್ಯಾಂಕ್‌ (ಆರ್‌ಬಿಐ) ಹಣಕಾಸು ನೀತಿ ಪರಾ­ಮರ್ಶೆ ಸೆ. 30ರಂದು ಪ್ರಕಟವಾಗ­ಲಿರುವುದು ಸಹ ಷೇರುಪೇಟೆ ವಹಿವಾಟಿನ ಮೇಲೆ ಈ ವಾರ ಪ್ರಭಾವ ಬೀರಲಿದೆ. ಆರ್‌ಬಿಐ ಈ ಹಿಂದಿ­ನಂತೆಯೇ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದು­ಕೊಳ್ಳುವ ನಿರೀಕ್ಷೆ ಇದೆ ಎಂದು ಗ್ಲೋಬಲ್‌ ರಿಸರ್ಚ್‌ ಲಿ,. ನಿರ್ದೇಶಕ  ವಿವೇಕ್‌ ಗುಪ್ತಾ ಹೇಳಿದ್ದಾರೆ.

ಕಳೆದ ಬುಧವಾರ ನಡೆದ ಅಮೆರಿಕ ಫೆಡರಲ್‌ ರಿಸರ್ವ್ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರವನ್ನು ಶೂನ್ಯಕ್ಕೆ ಹತ್ತಿರದಲ್ಲಿ ಇರುವಂತೆ ನೋಡಿಕೊಳ್ಳುವುದಾಗಿ ಅಧ್ಯಕ್ಷೆ ಜನೆಟ್‌ ಎಲೆನ್‌ ಅವರು ಭರವಸೆ ನೀಡಿದ್ದಾರೆ. ಇದರಿಂದ ತಕ್ಷಣದ ಬಂಡವಾಳ ಹರಿವಿನ ಭಯದಲ್ಲಿದ್ದ ಹೂಡಿಕೆದಾರರು ನಿರಾಳ­ರಾಗಿದ್ದಾರೆ. ಚೇತರಿಕೆ ಕಂಡು­ಕೊಳ್ಳುತ್ತಿರುವ ಭಾರತ ಸೇರಿದಂತೆ ಬೇರೆ ದೇಶಗಳ ಷೇರುಪೇಟೆಗಳಿಗೆ ಅನುಕೂಲ­ವಾಗಿದೆ.

ನರೇಂದ್ರ ಮೋದಿ ಅವರ ಈ ವಾರದ ಅಮೆರಿಕ ಪ್ರವಾಸದ ಬಗ್ಗೆಯೂ ಹೂಡಿಕೆ­ದಾರರು ಕುತೂಹಲ ತಳೆದಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಕಳೆದ ವಾರ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ) 29.38 ಅಂಶಗಳಷ್ಟು ಏರಿಕೆ ಕಂಡು, 27,090.42 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿತ್ತು.

ವಿದೇಶಿ ಹೂಡಿಕೆ
ಮುಂಬೈ (ಐಎಎನ್‌ಎಸ್‌): ಕೇಂದ್ರ ಸರ್ಕಾರದ ಸ್ಥಿರ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಹೂಡಿಕೆ ಒಳಹರಿವು ನಿರಂತರವಾಗಿ ಹೆಚ್ಚುತ್ತಿದೆ ಮಾರುಕಟ್ಟೆ ಪರಿಣಿತರು ವಿಶ್ಲೇಷಣೆ ಮಾಡಿದ್ದಾರೆ.
ವಿದೇಶಿ ಹೂಡಿಕೆದಾರರು ಶುಕ್ರವಾರದವರೆಗೆ (ಸೆ.19) ₨2,159.67 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಶುಕ್ರ­ವಾರ ಒಂದೇ ದಿನ ₨154.53 ಕೋಟಿ ಮೌಲ್ಯದ ಷೇರುಗಳ ಖರೀದಿ ಮಾಡಿದ್ದಾರೆ. ಎಂದು ನ್ಯಾಷನಲ್‌ ಸೆಕ್ಯುರಿಟಿ ಡೆಪಾಸಿಟರಿ ಲಿ., (ಎನ್‌್ಎಸ್‌ಡಿಎಲ್‌) ಮಾಹಿತಿ ನೀಡಿದೆ.

ವಿದೇಶಿ ಹೂಡಿಕೆದಾರರು ಷೇರುಪೇಟೆಯ ಸೆ.12ರ ವಾರದ ವಹಿ-­ವಾಟಿನ ಅಂತ್ಯಕ್ಕೆ ₨2,693.02 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಇದರಿಂದಾಗಿ ಷೇರುಪೇಟೆ ವಹಿವಾಟು ಹೊಸ ಮಟ್ಟ ತಲುಪಲು ಸಾಧ್ಯ­ವಾಗಿತ್ತು ಎಂದು ಎನ್‌ಎಸ್‌ಡಿಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.