ADVERTISEMENT

1 ತಿಂಗಳಲ್ಲಿ 21 ಲಕ್ಷ ಗ್ರಾಹಕರ ನಷ್ಟ

ಬಿಎಸ್‌ಎನ್‌ಎಲ್‌ ಬಳಕೆದಾರರ ಸಂಖ್ಯೆ 8.94 ಕೋಟಿಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ ಒಡೆತನದ ದೂರಸಂಪರ್ಕ ಸಂಸ್ಥೆ ಭಾರತೀಯ ಸಂಚಾರ್‌ ನಿಗಮ್‌ ಲಿ. (ಬಿಎಸ್‌ಎನ್‌ಎಲ್‌), ಜೂನ್‌ ಒಂದೇ ತಿಂಗಳಲ್ಲಿ ಒಟ್ಟು 21 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಇನ್ನೊಂದೆಡೆ, ದೇಶದಲ್ಲಿನ  ದೂರವಾಣಿ ಸೇವಾ ವಲಯಕ್ಕೆ ಹೊಸದಾಗಿ 46.1 ಲಕ್ಷ ಬಳಕೆದಾರರು ಜೂನ್‌ನಲ್ಲಿ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ದೇಶದಲ್ಲಿನ ಒಟ್ಟಾರೆ ದೂರವಾಣಿ ಬಳಕೆದಾರರ ಸಂಖ್ಯೆ 94.29 ಕೋಟಿಗೆ ಏರಿಕೆಯಾಗಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿ ಕಾರ (ಟಿಆರ್‌ಎಐ) ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಈ ಮಾಹಿತಿ ಅಡಕವಾಗಿದೆ. ಅದಾಗಲೇ ದೂರಸಂಪರ್ಕ ಸೇವೆಯ ಬಳಕೆಯನ್ನು ಸ್ಥಗಿತಗೊಳಿಸಿದ್ದ ವೈರ್‌ಲೆಸ್‌ ಸೇವಾ ವಿಭಾಗದ 21 ಲಕ್ಷ ಗ್ರಾಹಕರ ಹೆಸರುಗಳನ್ನು ಬಿಎಸ್‌ಎನ್‌ಎಲ್‌ ಕೈಬಿಟ್ಟಿದೆ. ಆ ಮೂಲಕ ಜೂನ್‌ 30ರ ವೇಳೆಗೆ ಬಿಎಸ್‌ಎನ್‌ಎಲ್‌ನ ನಿಸ್ತಂತು ಸೇವೆಗಳ ವಿಭಾಗದ ಬಳಕೆದಾರರ ಸಂಖ್ಯೆ ದಿಢೀರ್‌ ಎಂಬಂತೆ 8.94 ಕೋಟಿಗೆ ಇಳಿಕೆಯಾಗಿದೆ.

ಸೇವೆ ಬಳಸಿಕೊಳ್ಳುವುದನ್ನು ಈಗಾಗಲೇ ಸ್ಥಗಿತಗೊಳಿ ಸಿರುವ ಗ್ರಾಹಕರನ್ನು ಪ್ರತ್ಯೇಕಿಸಿ ನೈಜ ಬಳಕೆದಾರರನ್ನಷ್ಟೇ ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು (ಕ್ಲೀನ್್ ಅಪ್‌) ಇತ್ತೀಚೆಗೆ ಕೈಗೊಳ್ಳಲಾಯಿತು. ಕಳೆದ 10 ವರ್ಷಗಳಿಂದ ಸೇವಾ ಬಳಕೆ ಸ್ಥಗಿತಗೊಳಿಸಿದವರ ಸಂಖ್ಯೆ 21 ಲಕ್ಷದ ಷ್ಟಿತ್ತು. ಅವರೆಲ್ಲ ಸಂಖ್ಯೆಗಳನ್ನೂ ಬಳಕೆದಾರರ ಪಟ್ಟಿ ಯಿಂದ ಕೈಬಿಡಲಾಗಿದೆ ಎಂದು ಬಿಎಸ್‌ಎನ್‌ಎಲ್‌ ನಿರ್ದೇಶಕ ಅನುಪಮ್‌ ಶ್ರೀವಾಸ್ತವ ಬುಧವಾರ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದೆಡೆ, ಕೇಂದ್ರ ಸರ್ಕಾರದ ಒಡೆತನದ ಮತ್ತೊಂದು ದೂರಸಂಪರ್ಕ ಸಂಸ್ಥೆ ಮಹಾನಗರ್‌ ಟೆಲಿಕಾಂ ನಿಗಮ್‌ ಲಿ(ಎಂಟಿಎನ್‌ಎಲ್‌) ಸಹ ಜೂನ್‌ ನಲ್ಲಿ 30,304 ಬಳಕೆದಾರರನ್ನು ಕಳೆದುಕೊಂಡಿದೆ. ಅದರ ಗ್ರಾಹಕರ ಸಂಖ್ಯೆ 33.66 ಲಕ್ಷಕ್ಕಿಳಿದಿದೆ.

ದೇಶದ ದೂರಸಂಪರ್ಕ ಸೇವೆಗಳ ಮಾರುಕಟ್ಟೆ ಯಲ್ಲಿ ಬಿಎಸ್‌ಎನ್‌ಎಲ್‌ ಪಾಲು ಮೇ ಮಾಸಾಂತ್ಯ ವೇಳೆಗೆ ಶೇ 12.30ಕ್ಕೆ ಕುಸಿದಿದ್ದರೆ, ಎಂಟಿಎನ್‌ಎಲ್‌ ಮಾರುಕಟ್ಟೆ ಪಾಲು ಶೇ 4.83ಕ್ಕೆ ಇಳಿದಿದೆ. ಅಲ್ಲದೇ, 2012;13ರಲ್ಲಿಯೇ ಬಿಎಸ್‌ಎನ್‌ಎಲ್‌ ₨8,198 ಕೋಟಿ ಮತ್ತು ಎಂಟಿಎನ್‌ಎಲ್‌ ₨5,321 ಕೋಟಿ ನಷ್ಟ ಅನುಭವಿಸಿದ್ದವು.
94.29 ಕೋಟಿ!

ಮೇ ಮಾಸಾಂತ್ಯಕ್ಕೆ 93.83 ಕೋಟಿಯಷ್ಟಿದ್ದ ದೂರ ವಾಣಿ ಬಳಕೆದಾರರ ಸಂಖ್ಯೆ, ಜೂನ್‌ ಅಂತ್ಯಕ್ಕೆ 94.29 ಕೋಟಿ ಮುಟ್ಟಿದೆ. ನಗರಗಳ ಗ್ರಾಹಕರ ಪ್ರಮಾಣ ಶೇ 59.28ರಿಂದ ಶೇ 59.36ಕ್ಕೇರಿದ್ದರೆ, ಗ್ರಾಮೀಣ ಭಾಗದ ಬಳಕೆದಾರರ ಪ್ರಮಾಣ ಶೇ 40.72ರಿಂದ ಶೇ 4.64ಕ್ಕೆ ಇಳಿಕೆಯಾಗಿದೆ ಎಂದು ಟ್ರಾಯ್‌ ವಿವರಿಸಿದೆ. ದೇಶದಲ್ಲಿನ ದೂರವಾಣಿ ಬಳಕೆದಾರರ ದಟ್ಟಣೆಯೂ ಶೇ 75.51 ರಿಂದ ಶೇ 75.80ಕ್ಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.