ADVERTISEMENT

ದೇಗುಲ ಪ್ರವೇಶವೂ ಶುದ್ಧೀಕರಣ ‘ಶಾಸě’ವೂ

ಹೊನಕೆರೆ ನಂಜುಂಡೇಗೌಡ
Published 5 ಅಕ್ಟೋಬರ್ 2014, 19:30 IST
Last Updated 5 ಅಕ್ಟೋಬರ್ 2014, 19:30 IST
ದೇಗುಲ ಪ್ರವೇಶವೂ ಶುದ್ಧೀಕರಣ ‘ಶಾಸě’ವೂ
ದೇಗುಲ ಪ್ರವೇಶವೂ ಶುದ್ಧೀಕರಣ ‘ಶಾಸě’ವೂ   

ಅದೊಂದು ಗಂಭೀರ ಪ್ರಕರಣ. ಅದು     ನಡೆದಿರುವುದು ಬಿಹಾರದಲ್ಲಿ. ಅದೂ ವಿಧಾನಸಭೆ ಉಪಚುನಾವಣೆ ಸಮಯದಲ್ಲಿ. ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಆ ಪ್ರಕರಣ ಕುರಿತು ಪರ– ವಿರುದ್ಧದ ವಾಗ್ವಾದ­ಗಳು ನಡೆಯುತ್ತಿವೆ. ಬಿಹಾರ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರು ಚುನಾವಣೆ ಪ್ರಚಾರದ ಸಮಯದಲ್ಲಿ ಮಧುಬನಿ ಜಿಲ್ಲೆಯ ಪರಮೇಶ್ವರಿ ದೇವಾಲಯಕ್ಕೆ ಹೋಗಿದ್ದರು.

ಅವರೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವ ನಿತೀಶ್‌ ಮಿಶ್ರ ಹಾಗೂ ವಿಧಾನಪರಿಷತ್‌ ಸದಸ್ಯ ವಿನೋದ­ಕುಮಾರ್‌ ಸಿಂಗ್‌ ಅವರೂ ಇದ್ದರು. ಈ ಭೇಟಿ ಬಳಿಕ ದೇವಿ ವಿಗ್ರಹ ತೊಳೆದು ಶುದ್ಧೀಕರಿಸ­ಲಾ­ಗಿದೆ. ತಾವೊಬ್ಬ ಮಹಾದಲಿತ ಸಮಾಜಕ್ಕೆ ಸೇರಿ­ದವರಾದ್ದರಿಂದ ಹೀಗೆ ಮಾಡಲಾಗಿದೆ ಎಂದು ಮಾಂಝಿ ಅಸಮಾಧಾನ ಹೊರಹಾಕಿದ್ದಾರೆ. ಅವರ ಆರೋಪ ದೊಡ್ಡ ವಿವಾದ ಸೃಷ್ಟಿಸಿದೆ. ಆದರೆ ಮುಖ್ಯಮಂತ್ರಿ ಜತೆಗಿದ್ದ ಮಿಶ್ರ ಮತ್ತು ಸಿಂಗ್‌  ‘ಅಂಥದ್ದೇನೂ ನಡೆದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಹಾಗಿದ್ದರೆ ಮಾಂಝಿ ಸುಳ್ಳು ಹೇಳುತ್ತಿ­ದ್ದಾ­ರೆಯೇ? ಅವರು ಸುಳ್ಳು ಹೇಳಲು ಕಾರಣ­ವಾ­ದರೂ ಏನು?  ಬರುವ ವಿಧಾನಸಭೆ ಚುನಾವಣೆ­ಯನ್ನು ಗಮನದಲ್ಲಿಟ್ಟುಕೊಂಡು ದಲಿತ ವರ್ಗ­ಗಳನ್ನು ಧ್ರುವೀಕರಿಸಲು ಇಂಥದ್ದೊಂದು ಹೇಳಿಕೆ ನೀಡಿದ್ದಾರೆಯೇ? ಮುಖ್ಯಮಂತ್ರಿಗಳು ಪ್ರತಿನಿಧಿ­ಸು­ತ್ತಿರುವ ಜೆಡಿಯು ಯಾವುದೋ ಒಂದು ವರ್ಗ­ವನ್ನೇ ನೆಚ್ಚಿಕೊಂಡು ರಾಜಕಾರಣ ಮಾಡು­ತ್ತಿದೆಯೇ? ಜೆಡಿಯುನಲ್ಲಿ ಮಾಂಝಿ ಹೇಳಿದ್ದೇ ಅಂತಿಮವೇ? ಹೀಗೆ ಹತ್ತಾರು ಪ್ರಶ್ನೆಗಳು ಏಳುತ್ತವೆ.

ಮುಖ್ಯಮಂತ್ರಿ ಬಿಹಾರದ ಶ್ರೇಣಿಕೃತ ವ್ಯವಸ್ಥೆ­ಯಲ್ಲಿ ಅತೀ ಕೆಳಸ್ತರದಲ್ಲಿರುವ ‘ಮುಸಾಹರಿ’ ಜಾತಿಯವರು. ಅರೆ ಹೊಟ್ಟೆಬಟ್ಟೆ­ಯಲ್ಲಿ ಬದು­ಕುವ ‘ದರಿದ್ರ ನಾರಾಯಣ­’ರಿಂದ ತುಂಬಿರುವ ಜಾತಿ ಅದು. ಹೊಲಗದ್ದೆ­ಗಳಲ್ಲಿ­ರುವ ಇಲಿಗಳೇ ಅವರಿಗೆ ಮೃಷ್ಟಾನ್ನ ಭೋಜನ. ಶಂಖದುಳು ಸಿಕ್ಕರಂತೂ ಅವರಿಗೆ ಹಬ್ಬ. ಎಷ್ಟೋ ಸಲ ಇಲಿ, ಹೆಗ್ಗಣಗಳು ಹೊತ್ತುಕೊಂಡು ಹೋಗಿರುವ ಭತ್ತ, ಮತ್ತಿತರ ಆಹಾರ ಧಾನ್ಯವೇ ಅವರ ಹಸಿದ ಹೊಟ್ಟೆಗಳನ್ನು ತುಂಬಿಸುತ್ತದೆ.

ಸಾಮಾಜಿಕವಾಗಿ ಅಯೋಮಯ ಸ್ಥಿತಿಯಲ್ಲಿ­ರುವ ಮುಸಾಹರಿ ಸಮಾಜದಲ್ಲಿ ಶೇ 3ರಷ್ಟು ಮಂದಿ ಅಕ್ಷರಸ್ಥರಿದ್ದಾರೆ. ಅನಕ್ಷರಸ್ಥ ಮಹಿಳೆ­ಯರ ಪ್ರಮಾಣ ಶೇ 99.  ಬಹುತೇಕರು ಹಳ್ಳಿ­ಗಳಲ್ಲಿ ಜೀತದಾಳುಗಳಾಗಿದ್ದಾರೆ.  ಪಟ್ಟಣ­ಗಳಲ್ಲೂ ಅನೇಕರು ಹೆಗಲ ಮೇಲೆ ಚೀಲ ಹಾಕಿ­ಕೊಂಡು ಚಿಂದಿ ಆಯುತ್ತಾರೆ. ಮಕ್ಕಳು ಆಟ, ಪಾಠದ ಕನಸನ್ನು ಕೊಂದುಕೊಂಡು ಅಪ್ಪ, ಅವ್ವಂದಿರ ಜತೆ ಕುಟುಂಬದ ನೊಗಕ್ಕೆ ಹೆಗಲು ಕೊಡುತ್ತಿದ್ದಾರೆ. ಈ ಸಮಾಜದ ಸ್ಥಿತಿಗತಿ ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಮತ್ಯಾವ ಅಂಕಿ– ಅಂಶವೂ ಬೇಕಿಲ್ಲ.

ಇಂಥ ತಳ ಸಮುದಾ­ಯ­ದಿಂದ ಬಂದಿರುವ ಮಾಂಝಿ ಸುಳ್ಳು ಹೇಳಿ ಅರಗಿಸಿಕೊಳ್ಳಲು ಸಾಧ್ಯ­ವಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ
ಪ್ರಬಲ­ವಾಗಿ­ರುವವ ಮೇಲ್ವರ್ಗ­ಗಳನ್ನು ಎದುರು ಹಾಕಿ­ಕೊಂಡು ರಾಜಕಾರಣ ಮಾಡುವ ಎದೆಗಾರಿಕೆ ಅವರಿಗೆ ಇರಲಾರದು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಅದು ಆಗದ ಕೆಲಸ. ಇತಿಹಾಸದ ಉದ್ದಕ್ಕೂ ಜಾತಿ ಸಂಘರ್ಷದ ನೆತ್ತರ ರುಚಿ ಕಂಡಿರುವ ಬಿಹಾರದ ಮಣ್ಣಿ­ನಲ್ಲಂತೂ ಕಲ್ಪಿಸಿ­ಕೊಳ್ಳಲಾಗದ ವಿಚಾರ.

ಜೀತನ್‌ ರಾಂ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಹುದ್ದೆಗೇರಿದವರು. ಲೋಕಸಭೆ ಚುನಾವಣೆಗೆ ಸ್ವಲ್ಪ ಮೊದಲು. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ‘ಮಧುಚಂದ್ರ’ ಮುಗಿದ ಬಳಿಕ ನಿತೀಶ್‌­ಕುಮಾರ್ ಸರ್ಕಾರ ಉರುಳಿಸುವ ದೊಡ್ಡ­­ದೊಂದು ಪ್ರಯತ್ನ ನಡೆಯಿತು. ಸರ್ಕಾರ ಉಳಿಸಲು ನಿತೀಶ್‌ ರಾಜೀನಾಮೆ ನೀಡಿ, ಮಾಂಝಿ ಅವರಿಗೆ ಪಟ್ಟ ಕಟ್ಟಿದರು. ಮಾಂಝಿ ನೆಪಮಾತ್ರದ ಮುಖ್ಯಮಂತ್ರಿ. ನಿತೀಶ್‌ ಅವರೇ ನಿಜವಾದ ಮುಖ್ಯಮಂತ್ರಿ. ವಿಧಾನಸಭೆ ಚುನಾ­ವಣೆ ಸೋಲು– ಗೆಲುವು ಎಲ್ಲವೂ ಮಾಜಿ ಮುಖ್ಯಮಂತ್ರಿಯ  ಮೇಲೇ ನಿಂತಿವೆ. ಆ ಮಾತೇ ಬೇರೆ. ಈಗಿನ ವಿವಾದವೇ ಬೇರೆ.

ಹಿಂದೂ ಧರ್ಮ ಮತ್ತು ಅದರ ಅಂತರಂಗ ಗೊತ್ತಿದ್ದವರಿಗೆ ಬಿಹಾರದ ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆಂದು ಅನಿಸುವುದಿಲ್ಲ. ಕೆಳ ಜಾತಿ­ಯವರನ್ನು ಪ್ರಾಣಿಗಿಂತಲೂ ಕಡೆಯಾಗಿ ಕಾಣು­ವುದು ಈ ‘ಸನಾತನ ಧರ್ಮ’ದಲ್ಲಿ ನಡೆದು­ಬಂದ ಪರಂಪರೆ. ದೇವಾಲಯಗಳ ಪ್ರವೇಶ ನಿರಾಕರಣೆ, ಮೇಲಿನ ಕುಲದವರ ಬಾವಿಗಳಿಗೆ ಬರದಂತೆ ನಿಷೇಧ ಹೇರುವುದು ಪ್ರತಿನಿತ್ಯ ನಡೆಯುತ್ತಿವೆ.

ಅದೇ ರಾಜ್ಯದಲ್ಲಿ ಈಚೆಗಷ್ಟೇ ಮೇಸ್ಟ್ರು ಕುಡಿಕೆಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ದಲಿತ ವಿದ್ಯಾರ್ಥಿಗಳಿಬ್ಬರನ್ನು ಥಳಿಸಿ, ಶಾಲೆಯಿಂದ ಹೊರ ಹಾಕಲಾಗಿದೆ. ಶೋಷಣೆ– ಅವಮಾನಗಳಿಂದ ವಿಮೋಚನೆ ಯಾಗಲು ಮತಾಂತರಗೊಂಡ ಜನರ ಮೇಲೂ ದಬ್ಬಾಳಿಕೆ ನಡೆದಿದೆ.
ಬಿಹಾರ ಮುಖ್ಯಮಂತ್ರಿ ಅವರನ್ನು ಅವಮಾನಿ­ಸಿ­ದ್ದಾರೆನ್ನಲಾದ ಪ್ರಕರಣ ನಡೆದಿರುವುದು ಈಚೆಗೆ. 25 ವರ್ಷದ ಹಿಂದೆ ಆಗಿನ ಉಪ­ಪ್ರಧಾನಿ ಬಾಬು ಜಗಜೀವನರಾಂ ಇಂತಹುದೇ ಅಪಮಾನಕ್ಕೆ ಒಳಗಾಗಿದ್ದರು.

1979ರಲ್ಲಿ ವಾರಾಣಸಿಯಲ್ಲಿ ಬಾಬು ‘ಸಂಪೂರ್ಣಾನಂದ ಪ್ರತಿಮೆ’ ಅನಾವರಣ ಮಾಡಿದರು. ಮರುದಿನ ಗಂಗಾ ಜಲದಿಂದ ಆ ಪ್ರತಿಮೆಯನ್ನು ಶುದ್ಧೀಕರಿಸ­ಲಾಯಿತು. ದಲಿತರಾಗಿ ಹುಟ್ಟಿದ ತಪ್ಪಿಗಾಗಿ ಅಸಹಾಯಕ ಜನ ಇನ್ನೆಷ್ಟು ವರ್ಷ ನೋವು– ಸಂಕಟ, ಅವ­ಮಾನವನ್ನು ಸಹಿಸಿಕೊಳ್ಳಬೇಕು? ಅದಕ್ಕೆ ಕೊನೆ ಇಲ್ಲವೆ? ಹಿಂದುತ್ವದ ಮಂತ್ರ ಜಪಿಸುವ ಹಿಂದೂ ಧರ್ಮದ ವಾರಸುದಾರರು ಏಕೆ ಇದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಹಿಂದೂ ಏಕತೆ ಬಗ್ಗೆ ಬೊಬ್ಬೆ ಹಾಕುವ ಜನರು ಅನಿಷ್ಟ ಅಸ್ಪೃಶ್ಯತೆ, ಅಸಮಾ­ನತೆಗಳನ್ನು ನೋಡಿಕೊಂಡು ಏಕೆ ಸುಮ್ಮನಿದ್ದಾರೆ.

ದೇವಾಲಯಗಳು  ದಲಿತರಿಗಷ್ಟೇ ಪ್ರವೇಶ ನಿರಾ­ಕರಿಸುತ್ತಿಲ್ಲ. ಕ್ರೈಸ್ತರು, ಮುಸ್ಲಿಮರು ಮತ್ತಿ­ತರ ಅನ್ಯ ಧರ್ಮೀಯರನ್ನೂ ಹೊರಗಿಟ್ಟಿವೆ. ಏಳು ವರ್ಷದ ಹಿಂದೆ ಖ್ಯಾತ ಗಾಯಕ ಯೇಸು­ದಾಸ್‌ ಅವರಿಗೆ ಕೇರಳದ ಗುರುವಾಯೂರು ದೇವಸ್ಥಾನ­ದಲ್ಲಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ನಿರಾಕರಿಸ­ಲಾಯಿತು. ಅದೂ ಎಡಪಂಥೀಯ ಸಿದ್ಧಾಂತದ ಸರ್ಕಾರ ಅಧಿಕಾರದಲ್ಲಿದ್ದಾಗ. ‘ಕೇರಳ­ದಲ್ಲಿ ಹೀಗೂ ನಡೆಯಿತೇ?’ ಎಂದು ಆಶ್ಚರ್ಯ ಪಟ್ಟವರೂ ಇದ್ದಾರೆ. ಯೇಸುದಾಸ್‌ ಮಹಾನ್‌ ದೈವಭಕ್ತ. ಅದೆಷ್ಟು ಭಕ್ತಿ ಗೀತೆಗಳನ್ನು ಅವರು ಹಾಡಿಲ್ಲ. ಅವರ ಕಂಠಸಿರಿ ದೇವರ ಸನ್ನಿಧಿಯಲ್ಲಿ ವಿಜೃಂಭಿಸುತ್ತಿದೆ. ನಮ್ಮ ದೇವರಿಗೆ ಅವರ ಸಂಗೀತ ಬೇಕು. ಅವರು ಬೇಡವೆಂದರೆ ಅದೆಂಥ ನ್ಯಾಯ? ಶಾರೀರಕ್ಕೆ ಇಲ್ಲದ ಮೈಲಿಗೆ ಶರೀರಕ್ಕೆ ಏಕೆ?

ಪಾರ್ಸಿ ಸಮಾಜದ ಫಿರೋಜ್‌ ಗಾಂಧಿ ಅವರನ್ನು ಮದುವೆಯಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ 1984ರಲ್ಲಿ ಪುರಿ ಜಗನ್ನಾಥ ದೇವಾಲಯ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ. ಇತಿಹಾಸ ಕೆದಕುತ್ತಾ ಹೋದರೆ ಹಿಂದೂ ಧರ್ಮದ ಮನುಷ್ಯ ವಿರೋಧಿ ನಿಲುವಿಗೆ ಇಂತಹ ಬೇಕಾದಷ್ಟು ಪ್ರಕರಣಗಳು ಸಿಗುತ್ತವೆ.

ಜಾತಿ, ಧರ್ಮ ಮತ್ತು ಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ, ನಮ್ಮ ಹಿರಿಯರ
ಸದಾ­ಶಯಗಳು ಇನ್ನೂ ಸಂವಿಧಾನ ಬಿಟ್ಟು ಹೊರ­ಬಂದಿಲ್ಲ. ಅದು ಪರಿಣಾಮಕಾರಿಯಾಗಿ ಅನು­ಷ್ಠಾನವಾಗಿದ್ದರೆ ದಲಿತರು ಮತಾಂತರ ಗೊಳ್ಳುವ ಪ್ರಮೇಯ ಇರುತ್ತಿರಲಿಲ್ಲ. ವಿಪರ್ಯಾಸ­ವೆಂದರೆ ದೇಶದ ಸಂವಿಧಾನಕ್ಕೆ ಜೀವ ತುಂಬಿದ ಪ್ರಮುಖರಲ್ಲಿ ಒಬ್ಬರಾಗಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಮತಾಂತರಗೊಂಡಿದ್ದರು.

‘ನಾನು ಹಿಂದುವಾಗಿ ಹುಟ್ಟಿದ್ದೇನೆ ನಿಜ. ಆದರೆ, ಹಿಂದುವಾಗಿ ಸಾಯಲಾರೆ’ ಎಂದು ನೋವಿ­ನಿಂದ ಹೇಳಿದ್ದರು. ಹಿಂದೂ ಧರ್ಮದ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಅವರು ಹೋರಾ­ಡಿದರು. ಹೋರಾಟ ನಿರರ್ಥಕ ಎಂದು ಮನವರಿಕೆಯಾದ ಬಳಿಕ ಮತಾಂತರಗೊಂಡರು. ಮತಾಂತರಕ್ಕೆ ಮನಸು ಮಾಡಲು ಅವರಿಗೆ  ಬಹಳ ವರ್ಷ ಬೇಕಾಯಿತು. ಯಾವ ಧರ್ಮಕ್ಕೆ ಹೋಗಬೇಕೆಂದು ಆಲೋಚಿಸಲು ಇನ್ನಷ್ಟು ವರ್ಷ ಹಿಡಿಯಿತು. ಎಲ್ಲ ಧರ್ಮಗಳನ್ನು ಸಮಗ್ರ­ವಾಗಿ ಅಭ್ಯಾಸ ಮಾಡಿದ ಬಳಿಕ ಅವರ ಹೃದಯ ಮಿಡಿದಿದ್ದು ಬೌದ್ಧ ಧರ್ಮದ ಕಡೆಗೆ.

‘ಬೌದ್ಧ ಧರ್ಮವು ಪ್ರಜ್ಞೆ, ಪ್ರೀತಿ ಮತ್ತು ಸಮಾನತೆ ಮೇಲೆ ನಿಂತಿದೆ. ಹಿಂದೂ ಧರ್ಮ ಅಸ್ಪೃಶ್ಯತೆ, ಅಸಮಾನತೆ ಪ್ರತಿಪಾದಿಸುವ ಚಾರ್ತು­ವರ್ಣ ವ್ಯವಸ್ಥೆ ಬೆಂಬಲಿಸುತ್ತದೆ. ದೇವರು ಮತ್ತು ಆತ್ಮವನ್ನು ನಂಬುತ್ತದೆ. ಬೌದ್ಧ ಧರ್ಮ ಇವೆಲ್ಲವನ್ನೂ ನಿರಾಕರಿಸುತ್ತದೆ. ನಾನು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳಲು ಇದು ಪ್ರಮುಖ ಕಾರಣ’ ಎಂದು ಅಂಬೇಡ್ಕರ್‌ ಸಮರ್ಥನೆ ನೀಡಿದ್ದರು. ದಲಿತರ ಮತಾಂತರ ನಿರಂತರವಾಗಿ ಮುಂದು­ವರಿದಿದೆ. ಬೌದ್ಧ ಧರ್ಮಕ್ಕೆ ಹೋಗುವ­ವ­ರಿ­ಗಿಂತಲೂ ಕ್ರೈಸ್ತ, ಇಸ್ಲಾಂ ಧರ್ಮದ ಕಡೆ ನೋಡು­ವವರ ಸಂಖ್ಯೆ ಹೆಚ್ಚಿದೆ. ಆ ಧರ್ಮ­ಗಳನ್ನು ಅಪ್ಪಿ­ಕೊಂಡವರು ಅಲ್ಲೂ ಅನಾಥ­ರಾಗಿ­ದ್ದಾರೆ.

ದಲಿತ­ರಲ್ಲಿ ಸ್ವಾಭಿಮಾನ ಉಕ್ಕಿಸಬೇಕಾದ ದಲಿತ ಸಂಘ­ಟನೆಗಳು ಹಣ ಮತ್ತು ಅಧಿಕಾರದ ಆಸೆಗಾಗಿ ಅಡ್ಡ ದಾರಿ ಹಿಡಿದಿವೆ. ರಾಜಕೀಯ ಪಕ್ಷಗಳು ದಲಿತ ನಾಯಕರು ಮತ್ತು ಸಂಘಟನೆ­ಗಳನ್ನು ದಾಳ­ವಾಗಿ ಬಳಸುತ್ತಿವೆ. ಅಂಬೇಡ್ಕರ್‌ ಸ್ಥಾಪಿ­ಸಿದ ಆರ್‌ಪಿಐ ಪಕ್ಷ ಹಿಂದುತ್ವ ಪ್ರತಿಪಾದಿ­ಸುವ ಬಿಜೆಪಿ ಮತ್ತು ಶಿವಸೇನೆ ಜತೆ ಕೈಜೋಡಿ­ಸಲು ಹಾತೊರೆಯುತ್ತಿದೆ! ಹಿಂದೂ ಧರ್ಮ ಕುರಿತು ಉದ್ದುದ್ದ ಭಾಷಣ ಬಿಗಿಯುವ ಮಠ–ಮಾನ್ಯಗಳು ಕಣ್ಣು ಮುಚ್ಚಿಕೊಂಡಿವೆ.

ರಾಜಕೀಯ ಚಿಂತಕ ಕಂಚ ಐಲಯ್ಯ ‘ವೈ ಐ ಆ್ಯಮ್‌ ನಾಟ್‌ ಎ ಹಿಂದೂ’ ಕೃತಿಯಲ್ಲಿ, ‘ಹಿಂದೂ ಧರ್ಮ ದಲಿತರನ್ನು ಹಿಂದುಗಳೆಂದು ಪ್ರತಿಪಾದಿಸುತ್ತಿದೆ. ಅದರ ದೇವರು ಅವರಿಗೆ ವಿರುದ್ಧವಾಗಿದ್ದಾರೆ. ಆರಂಭದಿಂದಲೂ ಈ ಧರ್ಮ ಫ್ಯಾಸಿಸ್ಟ್‌ ಆಗಿ ವರ್ತಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.  ಇದೇ ಕೃತಿಯಲ್ಲಿ ಐಲಯ್ಯ, ದಲಿತರನ್ನೂ ತರಾಟೆಗೆ ತೆಗೆದು­ಕೊಂಡಿ­ದ್ದಾರೆ. ‘ನಗರಗಳಲ್ಲಿ ದಲಿತರು ನವ ಬ್ರಾಹ್ಮಣ­ರಾಗಿ ಬದಲಾಗುತ್ತಿದ್ದಾರೆ. ಮುತ್ತಯ್ಯ ಮೂರ್ತಿ­ಗಳಾಗಿದ್ದಾರೆ.

ಗೋಪಯ್ಯ ಗೋಪಾಲಕೃಷ್ಣ ಆಗಿದ್ದಾರೆ.  ಮಕ್ಕಳು ಅಜಯ್‌, ವಿಜಯ್‌­ಗಳಾ­ಗು­ತ್ತಿದ್ದಾರೆ. ಹೆಣ್ಣುಮಕ್ಕಳು ಸ್ವಪ್ನಾ, ಸಂಧ್ಯಾರಾಗಿ­ದ್ದಾರೆ’ ಎಂದು  ವ್ಯಂಗ್ಯವಾಡಿದ್ದಾರೆ. ‘ಕೆಳ ಜಾತಿ­ಗಳ ಜನ ಎಷ್ಟೇ ಬದಲಾದರೂ ಅವರ ಜಾತಿ, ಹಿನ್ನೆಲೆಯನ್ನು ಮೇಲ್ವರ್ಗಗಳು ಸುಲಭವಾಗಿ ಪತ್ತೆ ಹಚ್ಚುತ್ತವೆ’ ಎಂದಿದ್ದಾರೆ. ದಲಿತರು ಮತ್ತು ಶೂದ್ರರು ಮಾರಮ್ಮ, ಪಟಾಲಮ್ಮ, ದುರ್ಗಮ್ಮ, ಕಾಳಮ್ಮ, ಬೀರಪ್ಪ, ಹೊನ್ನಪ್ಪ ಅವರನ್ನು ತೊರೆದು ರಾಮ, ಕೃಷ್ಣ, ಸತ್ಯನಾರಾಯಣ ಅವರ ಹಿಂದೆ ಹೊರಟಿದ್ದಾರೆ.

ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಮಂತ್ರಿ­ಯಾಗಿದ್ದ ರಾಜ್ಯದ ದಲಿತ ಮುಖಂಡರೊಬ್ಬರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಅವರ ಮನೆಯಲ್ಲಿ ಪ್ರತಿನಿತ್ಯ ಪೂಜೆ, ಪುನಸ್ಕಾರ... ಎಲ್ಲೆಡೆ ಹತ್ತಾರು ದೇವರ ಫೋಟೊಗಳು! ಅವರು ಮಾಂಸ ಬಿಟ್ಟಿದ್ದಾರೆ. ಮೊಟ್ಟೆಯನ್ನೂ ಮುಟ್ಟು­ವುದಿಲ್ಲ. ಇದು ಮೇಲ್ವರ್ಗಗಳ ಅನುಕರಣೆ ಅಲ್ಲದೆ ಮತ್ತೇನು? ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಗಾಂಧೀಜಿ ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡ ಮತ್ತೊಬ್ಬ ಚಿಂತಕ ಸಿಗುವುದು ಕಷ್ಟ. ‘ಅಸ್ಪೃಶ್ಯತೆ ಧರ್ಮ ಅಪೇಕ್ಷಿತವಲ್ಲ’ ಎಂದು ಅವರು ಭಾವಿಸಿ­ದ್ದರು.

‘ನಾವು ಅವರನ್ನು ನಮ್ಮ ರಕ್ತ ಸಂಬಂಧಿ­ಗಳಂತೆ ಕಾಣಬೇಕು. ಏಕೆಂದರೆ ಅವರು ನಮ್ಮ ರಕ್ತ ಸಂಬಂಧಿಗಳು. ಅವರಿಂದ ನಾವು ದೋಚಿದ್ದೆ­ಲ್ಲವನ್ನೂ ಹಿಂತಿರುಗಿಸಬೇಕು. ಇಂಗ್ಲಿಷ್‌ ಬಲ್ಲ ಕೆಲವೇ ಕೆಲವು ಸುಧಾರಕರು ಮಾಡಬೇಕಾದ ಕೆಲಸ ಎಂದೆಣಿಸದೆ, ಇಡೀ ಸಮುದಾಯವೇ ಸ್ವಯಂ ಪ್ರೇರಣೆಯಿಂದ ಮಾಡಬೇಕು’ ಎಂದಿ­ದ್ದರು. ಗಾಂಧೀಜಿ ಅವರ ಚಿಂತನೆಯನ್ನು ಅರಗಿಸಿ­ಕೊಂಡಿದ್ದರೆ ಹಿಂದೂ ಧರ್ಮ ಯಾವಾಗಲೋ ಬದಲಾಗುತ್ತಿತ್ತು. ದಲಿತರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾಗು­ತ್ತಿತ್ತು. ಹಿಂದೂ ಧರ್ಮದ ವಾರಸುದಾರರು ಮತಾಂತರ ಎನ್ನುವ ‘ಗುಮ್ಮ’ನನ್ನು ಕಂಡು ಬೆಚ್ಚಿ ಬೀಳುತ್ತಿರಲಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.