ADVERTISEMENT

Eid Ul Adha 2023| ತ್ಯಾಗದ ಸಂದೇಶ ಸಾರುವ ‘ಬಕ್ರೀದ್‌‘

ಮಹಮ್ಮದ್ ನೂಮಾನ್
Published 28 ಜೂನ್ 2023, 23:30 IST
Last Updated 28 ಜೂನ್ 2023, 23:30 IST
   

ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್‌ ಅದ್‌ಹಾ’. ದೇಶದಾದ್ಯಂತ ಮುಸ್ಲಿಮರು ಇಂದು (ಜೂನ್‌ 29) ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತದಲ್ಲಿ ಈ ಹಬ್ಬ ‘ಬಕ್ರೀದ್‌’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. 

ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಅನ್ನು ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು, ಕೊನೆಯ ಪ್ರವಾದಿ ಮುಹಮ್ಮದ್‌ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು. ಇಬ್ರಾಹಿಂ ಮತ್ತು ಅವರ ಪುತ್ರ ಇಸ್ಮಾಯಿಲ್ ಅವರ ಜೀವನ, ತತ್ವಗಳು, ದೈವನಿಷ್ಠೆ ಮತ್ತು ತ್ಯಾಗದ ಗುಣಗಳೊಂದಿಗೆ ಈ ಹಬ್ಬ ಬೆಸೆದುಕೊಂಡಿದೆ.

ಜಾನುವಾರು ಬಲಿ: ಜಾನುವಾರುಗಳನ್ನು ಬಲಿ ನೀಡುವುದು ‘ಬಕ್ರೀದ್‌’ನ ಪ್ರಮುಖ ಆಚರಣೆಯಾಗಿದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಜಾನುವಾರು ಬಲಿ ನೀಡಲಾಗುತ್ತದೆ. 

ADVERTISEMENT

ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುವರು. ತಮ್ಮ ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸುತ್ತಾರೆ ಎಂದು ಮುಸ್ಲಿಮರ ಧರ್ಮಗ್ರಂಥದಲ್ಲಿ ತಿಳಿಸಲಾಗಿದೆ.

ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಪ್ರಾಣಿಬಲಿ ನೀಡಬೇಕು. ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

‘ಕುರ್ಬಾನಿ’(ಪ್ರಾಣಿಬಲಿ)ಯನ್ನು ನೀಡುವ ಸಾಮರ್ಥ್ಯವಿದ್ದೂ, ನೀಡದವನು ಹಬ್ಬದ ಪ್ರಾರ್ಥನೆಗಾಗಿ ಈದ್ಗಾಗೆ ಬರುವ ಅಗತ್ಯವಿಲ್ಲ’ ಎಂದು ಪ್ರವಾದಿ ಮುಹಮ್ಮದ್‌ ಅವರು ಹೇಳಿದ್ಧಾರೆ. ಆರೋಗ್ಯವಂತ ಪ್ರಾಣಿಗಳನ್ನು ಮಾತ್ರ ಬಲಿ ನೀಡಬೇಕು. ದೃಷ್ಟಿಯನ್ನು ಕಳೆದುಕೊಂಡಿರುವ, ರೋಗದಿಂದ ಬಳಲುತ್ತಿರುವ, ಅಂಗವೈಕಲ್ಯವನ್ನು ಹೊಂದಿರುವ, ಕೃಶಕಾಯದ ಪ್ರಾಣಿಗಳನ್ನು ಬಲಿ ನೀಡುವಂತಿಲ್ಲ.

ಬಕ್ರೀದ್‌ನ ದಿನ ಬೆಳಿಗ್ಗೆ ಈದ್ಗಾಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್‌ ಇರುತ್ತದೆ. ನಮಾಜ್‌ ಬಳಿಕ ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವರು. ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಬಡವರಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.