ADVERTISEMENT

ಕ್ಯಾರೆಟ್, ಬೀನ್ಸ್, ಬೀಟ್‌ರೂಟ್‌ ದುಬಾರಿ

ಬೇಡಿಕೆಯಲ್ಲಿ ಏರಿಕೆ; ಗುಣಮಟ್ಟದ ಚಿಂತೆ– ಮದುವೆ ಸಮಾರಂಭಗಳಿಗೆ ಬೆಲೆ ಏರಿಕೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 9 ಮೇ 2017, 7:47 IST
Last Updated 9 ಮೇ 2017, 7:47 IST
ಚಾಮರಾಜನಗರ: ಮದುವೆಯ ಸಮಾರಂಭಗಳ ಋತುವಾಗಿರುವ ತಿಂಗಳಿನಲ್ಲಿ ಅಧಿಕ ಬೇಡಿಕೆ ಇರುವ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಮದುವೆ ಸಂಭ್ರಮಗಳಿಗೆ ಬೆಲೆ ಏರಿಕೆ ತಣ್ಣೀರು ಎರಚಿದೆ. 
 
ಕಳೆದ ವಾರಕ್ಕೆ ಹೋಲಿಸಿದರೆ ಬಹುತೇಕ ತರಕಾರಿಗಳು ತುಟ್ಟಿಯಾಗಿವೆ. ಬೇಡಿಕೆ ಹೆಚ್ಚಳದ ಜತೆಗೆ ನೀರಿನ ಕೊರತೆ ಕಾರಣ ಉಂಟಾದ ದರ ಹೆಚ್ಚಳದ ಹೊಡೆತಕ್ಕೆ ಗ್ರಾಹಕರು ತತ್ತರಿಸಿದ್ದಾರೆ.
 
ಅತಿ ಅಗತ್ಯದ ತರಕಾರಿಗಳಾದ ಈರುಳ್ಳಿ, ಟೊಮೆಟೊ, ಬದನೆ, ಆಲೂಗಡ್ಡೆ ಮುಂತಾದವುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿರುವುದು ತುಸು ನೆಮ್ಮದಿ ತಂದಿದೆ. ಆದರೆ, ಮದುವೆ ಸಮಾರಂಭಗಳಿಗೆ ಹೆಚ್ಚು ಬೇಡಿಕೆ ಹೊಂದಿರುವ ಕ್ಯಾರೆಟ್‌, ಬೀನ್ಸ್‌, ಹಸಿಮೆಣಸಿನಕಾಯಿ, ಬೀಟ್‌ರೂಟ್‌, ಮಂಗಳೂರು ಸೌತೆ, ಬೂದುಗುಂಬಳಗಳ ಬೆಲೆ ಗ್ರಾಹಕರಲ್ಲಿ ದಿಗಿಲು ಹುಟ್ಟಿಸುತ್ತಿದೆ. ಆದರೆ, ಬೆಲೆ ಹೆಚ್ಚಾದರೂ ಉತ್ಪಾದನೆ ಕುಸಿತದಿಂದಾಗಿ ರೈತರಿಗೆ ಲಾಭವೇನೂ ದೊರಕುತ್ತಿಲ್ಲ. 
 
ಬಿಸಿಲಿನ ಝಳ ವಿಪರೀತವಾಗಿರುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ತಂಪು ನೀಡಬೇಕಾದ ಎಳನೀರು ಬೆಲೆಯ ಕಾರಣದಿಂದ ಮತ್ತಷ್ಟು ಬೆವರಿಳಿಸುತ್ತದೆ. ₹ 30 ತೆತ್ತು ದಾಹ ಇಂಗಿಸಿಕೊಳ್ಳುವುದು ಅನಿವಾರ್ಯ.
 
ಜಿಲ್ಲೆಯ ಮಾರುಕಟ್ಟೆ ಕ್ಯಾರೆಟ್‌ಗೆ ಊಟಿಯನ್ನು ಅವಲಂಬಿಸಿದೆ. ಇಲ್ಲಿ ಉತ್ತಮ ಗುಣಮಟ್ಟದ ಕ್ಯಾರೆಟ್‌ ಹೆಚ್ಚು ದೊರಕುತ್ತಿಲ್ಲ. ದ್ವಿತೀಯ ದರ್ಜೆಯ ಕ್ಯಾರೆಟ್‌ಗಳ ಬೆಲೆ ಪ್ರತಿ ಕೆ.ಜಿ.ಗೆ ₹60 ದಾಟಿದ್ದರೆ, ಉತ್ತಮ ಗುಣಮಟ್ಟದ್ದಕ್ಕೆ ₹80 ತೆರಬೇಕಾಗಿದೆ. ಬೀನ್ಸ್‌ ಬೆಲೆ ₹60 ರಿಂದ 70ರಷ್ಟಿದೆ.

ಸಣ್ಣ ಈರುಳ್ಳಿ ₹70, ದೊಡ್ಡ ಮೆಣಸು ₹40, ಗಡ್ಡೆಕೋಸು ₹50, ಎಲೆ ಕೋಸು ₹25–₹30, ಬೂದುಗುಂಬಳ ₹40, ಬದನೆ ಕಾಯಿ ₹25, ನುಗ್ಗೇಕಾಯಿ ₹40–₹50ಕ್ಕೆ ತಲುಪಿವೆ. ₹1ಕ್ಕೆ ಸಿಗುತ್ತಿದ್ದ ಬಾಳೆ ಎಲೆಗೆ ಈಗ ₹2 ತೆರಬೇಕಾಗಿದೆ. ತೆಂಗಿನಕಾಯಿಗೆ ₹25 ರಿಂದ ₹30ಕ್ಕೆ ಮಾರಾಟವಾಗುತ್ತಿದ್ದು, ಬೆಳೆಗಾರರಲ್ಲಿ ತುಸು ನೆಮ್ಮದಿ ನೀಡಿದೆ.  ಟೊಮೆಟೊ ₹5 ರಿಂದ ₹10ರ ಬೆಲೆಗೆ ಸಿಗುತ್ತಿದೆ. ಹಸಿಮೆಣಸಿನ ಕಾಯಿ ₹30ಕ್ಕೆ ತಲುಪಿದೆ. 
 
ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಬಿದ್ದಿಲ್ಲ. ಇದು ತರಕಾರಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ನೀರಿನ ಕೊರತೆಯಿಂದ ತತ್ತರಿಸಿರುವ ರೈತರು, ಈ ಬಾರಿಯೂ ವರುಣನ ಕೃಪೆ ಕಾಣದಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಭೂಮಿಯನ್ನು ಹದಗೊಳಿಸುವಷ್ಟು ಮಳೆ ಬಂದರೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ.  
 
‘ಮೈಸೂರು, ಮಂಡ್ಯ, ಊಟಿ, ಕೇರಳಗಳಿಂದ ತರಕಾರಿಗಳು ಬರುತ್ತಿವೆ. ಆದರೆ ಗುಣಮಟ್ಟ ಇಲ್ಲ. ಬೇಸಿಗೆಯ ಬೇಗೆಗೆ ತರಕಾರಿಗಳು ಬೇಗನೆ ಹಾಳಾಗುತ್ತವೆ. ಮದುವೆಗಳ ಕಾರಣ ಮಾರಾಟಕ್ಕೆ ತೊಂದರೆಯಾಗುತ್ತಿಲ್ಲ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಭಾಗ್ಯಾ.
 
‘ಬೆಲೆ ವಿಪರೀತ ಏರಿಕೆಯಾಗಿದೆ. ಹಾಗೆಂದು, ಮದುವೆ ಸಮಾರಂಭಗಳಲ್ಲಿ ತಯಾರಿಸುವ ತಿನಿಸುಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲವಲ್ಲ. ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗಿ ಹೊಂದಿಕೊಳ್ಳಲೇಬೇಕು. ವೆಚ್ಚ ಹೆಚ್ಚಾದರೂ ಖರೀದಿಸದೆ ಇರುವಂತಿಲ್ಲ’ ಎನ್ನುತ್ತಾರೆ ಗ್ರಾಹಕ ಪ್ರದೀಪ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.