ADVERTISEMENT

ಐವರು ಗ್ರಾ.ಪಂ. ಅಧಿಕಾರಿಗಳ ಅಮಾನತು

ಕರ್ತವ್ಯ ಲೋಪ, ಬೇಜವಾಬ್ದಾರಿ, ಅವ್ಯವಹಾರ ಆರೋಪ; ಸಿಇಓ ವಿಕಾಸ ಸುರಳಕರ್‌ ಕ್ರಮ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:46 IST
Last Updated 5 ಜನವರಿ 2017, 10:46 IST

ಬಾಗಲಕೋಟೆ: ಅವ್ಯವಹಾರ, ಕರ್ತವ್ಯ ಲೋಪ, ನಿರ್ಲಕ್ಷ್ಯ, ನಿಯಮಾವಳಿ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳಡಿ ಜಿಲ್ಲೆಯ ಐದು ಗ್ರಾಮ ಪಂಚಾಯ್ತಿಗಳ ಇಬ್ಬರು ಕಾರ್ಯ ದರ್ಶಿಗಳು ಹಾಗೂ ಮೂವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಸುರಳಕರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಗ್ರಾಮ ವಿಕಾಸ ಯೋಜನೆಯ ಅನುಷ್ಠಾನದ ಕುರಿತು ಇದೇ 2ರಂದು ಪ್ರಗತಿ ಪರಿಶೀಲನೆ ನಡೆಸಿದ ಸಿಇಓ ಮೇಲ್ನೋಟಕ್ಕೆ ಲೋಪಗಳು ಕಂಡು ಬಂದ ಕಾರಣ ಇಲಾಖೆ ವಿಚಾರಣೆ ಕಾಯ್ದಿರಿಸಿ ಈ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯ್ತಿಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದ ಪಿಡಿಓ ಐ.ಎಸ್.ಕಾಳಗಿ, ಬೀಳಗಿ ತಾಲ್ಲೂಕು ಜಾನಮಟ್ಟಿಯ ಪಿಡಿಒ ಎಸ್.ಎ.ಕ್ಯಾದಿಗ್ಗೇರಿ, ಹುನಗುಂದ ತಾಲ್ಲೂಕು ಬಿಸಲದಿನ್ನಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ವೈ.ಬಲವಂತನವರ, ಬೆಳಗಲ್ಲ ಗ್ರಾಮ ಪಂಚಾಯ್ತಿ ಗ್ರೇಡ್ 2 ಕಾರ್ಯದರ್ಶಿ ವೈ.ಎನ್.ಗೌಡರ ಹಾಗೂ ಬಾದಾಮಿ ತಾಲ್ಲೂಕು ನೀಲಗುಂದ ಪಂಚಾಯ್ತಿಯ ಗ್ರೇಡ್ 1 ಕಾರ್ಯದರ್ಶಿ ರಂಗಪ್ಪ ಬಾ.ಮುಗಳೊಳ್ಳಿ ಅಮಾನತುಗೊಂಡವರು.

ಗ್ರಾಮ ವಿಕಾಸ ಯೋಜನೆಯ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗೆ ಸರಿಯಾದ ಮಾಹಿತಿ ಒದಗಿಸದೇ ಕರ್ತವ್ಯದಲ್ಲಿ ನಿರ್ಲಕ್ಷತೆ ತೋರಿಸಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಐ.ಎಸ್.ಕಾಳಗಿ ಹಾಗೂ ವೈ.ಎನ್‌.ಗೌಡರ ಶಿಕ್ಷೆಗೆ ಗುರಿಯಾಗಿದ್ದಾರೆ. ಸಭೆಗೆ ಅನಧಿಕೃತವಾಗಿ ಗೈರು ಹಾಜರಾದ ಕಾರಣ ಎಸ್.ವೈ. ಬಲವಂತನವರ ಅಮಾನತುಗೊಂಡಿದ್ದಾರೆ.

ಪ್ರಗತಿ ಕುಂಠಿತ ಆರೋಪ: ಬೀಳಗಿ ತಾಲ್ಲೂಕು ಸುನಗ ಗ್ರಾಮ ಪಂಚಾಯ್ತಿ ಪಿಡಿಒ ಆಗಿರುವ ಎಸ್.ಎ.ಕ್ಯಾದಿಗ್ಗೇರಿ ಅವರು ಜಾನಮಟ್ಟಿ ಪಂಚಾಯ್ತಿಗೂ ನಿಯೋಜನೆಗೊಂಡಿದ್ದಾರೆ. ವಸತಿ ಯೋಜನೆಯಡಿಯಲ್ಲಿ ನಿಗದಿತ ಅವಧಿಯೊಳಗೆ ವಿವಿಧ ಹಂತಗಳ ಪ್ರಗತಿಯ ಬಗ್ಗೆ ಜಿ.ಪಿ.ಎಸ್ ಮಾಡದಿರುವುದು. ಪ್ರಗತಿ ಸಾಧಿಸದಿರುವುದು ಹಾಗೂ ಸ್ವಚ್ಛ ಭಾರತ ಮಿಷನ್ ಅಡಿ 200 ಅರ್ಜಿಗಳನ್ನು ಸ್ವೀಕರಿಸಿ ಕಾಮಗಾರಿಗೆ ಆದೇಶ ನೀಡದೇ ಪ್ರಗತಿ ಕುಂಠಿತ ವಾಗಲು ಕಾರಣರಾಗಿದ್ದಾರೆ ಎಂಬ ಆರೋಪ ಹೊಂದಿದ್ದಾರೆ.

ಜೊತೆಗೆ ಕರ ವಸೂಲಿಯಲ್ಲಿ ಅತ್ಯಂತ ಕಡಿಮೆ ಪ್ರಗತಿ ಸಾಧನೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಶೇ 25ರ ಅನುದಾನದಲ್ಲಿ ಪ್ರಗತಿ ಸಾಧಿಸದಿರುವುದು ಹಾಗೂ ಸ್ಯಾಟ್‌ಕಾಂ ತರಬೇತಿಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದ ಕಾರಣ ಅಲ್ಲಿನ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ವರದಿ ಆಧರಿಸಿ ಸಿಇಒ ಈ ಕ್ರಮ ಜರುಗಿಸಿದ್ದಾರೆ.

ಅವ್ಯವಹಾರದ ಆರೋಪ: 14ನೇ ಹಣಕಾಸು ಯೋಜನೆಯಡಿ ಹಿರಿಯೂರಿನ ಎ.ವಿ.ಎಂ ಅಕಾಡೆಮಿ ವೇದಗಣಿತ ತರಬೇತುದಾರರಿಗೆ ಗೌರವಧನ ₹ 99,975 ನಿಯಮಬಾಹಿರವಾಗಿ ಸಂದಾಯ ಮಾಡಿರುವುದು ಹಾಗೂ ಕರ್ನಾಟಕ ಪಾರದರ್ಶಕ ಅಧಿನಿಯಮದಡಿ ಟೆಂಡರ್ ಕರೆಯದೇ ಬಾದಾಮಿಯ ಕಾವೇರಿ ಇಲೆಕ್ಟ್ರಿಕಲ್ಸ್ ಹಾಗೂ ಗಜಾನಂದ ಇರಿಗೇಶನ್ ಅವರಿಗೆ ತಲಾ ₹1,02,160 ಹಾಗೂ ₹1,87,649 ಪಾವತಿಸಿರುವುದು.

ಸದರಿ ಯೋಜನೆಯ ಕಾಮಗಾರಿಗಳನ್ನು ಗಾಂಧಿ ಸಾಕ್ಷಿ ಕಾಯಕದಕ್ಕೆ ಅಳವಡಿಸದೇ ನಿಯಮಬಾಹಿರವಾಗಿ ಖರ್ಚು ಮಾಡಿರುವುದು ಹಾಗೂ ಗ್ರಾಮ ಪಂಚಾಯ್ತಿ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ರಂಗಪ್ಪ ಮುಗಳೊಳ್ಳಿ ಅವರನ್ನು ಅಮಾನತು ಮಾಡಲಾಗಿದೆ. ಬಾದಾಮಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಿಸೆಂಬರ್ 24ರಂದು ನೀಲಗುಂದಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀಡಿದ ವರದಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.