ADVERTISEMENT

ಮುಖ್ಯ ಕಾಲುವೆ: ಕಾಮಗಾರಿ ಕಳಪೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 7:07 IST
Last Updated 24 ಡಿಸೆಂಬರ್ 2017, 7:07 IST

ಇಳಕಲ್‌ : ‘ಕೊಪ್ಪಳ ಏತ ನೀರಾವರಿ ಯೋಜನೆಯ ಮೊದಲನೇ ರೈಸಿಂಗ್‌ ಮೇನ್‌ ನಂತರ ಇಳಕಲ್‌ ಸಮೀಪ ಆರಂಭವಾಗುವ 12.260 ಕಿ.ಮೀ ಉದ್ದದ ಕಾಲುವೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಗುತ್ತಿಗೆದಾರರೊಂದಿಗೆ ಕೊಪ್ಪಳ ಏತನೀರಾವರಿ ಯೋಜನೆಯ ಉಪವಿಭಾಗದ ಆಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಹೆರೂರ ಗ್ರಾಮದ ರೈತ ರಾಜಶೇಖರ ಹುಡೇದಮನಿ ಆರೋಪಿಸಿದ್ದಾರೆ.

ಕಾಲುವೆಯ ವಿನ್ಯಾಸ ಸೇರಿದಂತೆ ಕಾಮಗಾರಿಯ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ವಾಸ್ತವವಾಗಿ ಆಗಿರುವ ಕಾಲುವೆ ಕಾಮಗಾರಿಯೊಂದಿಗೆ ಹೋಲಿಕೆ ಮಾಡಿರುವುದಾಗಿ ತಿಳಿಸಿರುವ ರಾಜಶೇಖರ್‌ ‘ಕಾಲುವೆಯ ಲೈನಿಂಗ್‌ನ ಕಾಂಕ್ರೀಟ್‌ ದಪ್ಪ 10 ಸೆಂಟಿ ಮೀಟರ್‌ ಇರಬೇಕಾದಲ್ಲಿ ಕೇವಲ 4ರಿಂದ 5 ಸೆಂ.ಮೀ ಇದೆ. ಕಳಪೆ ಕಾಮಗಾರಿಯ ಪರಿಣಾಮ ಸಾಕಷ್ಟು ಕಡೆಯಲ್ಲಿ ಈಗಲೇ ಕಾಲುವೆ ಬಿರುಕು ಬಿಟ್ಟಿದ್ದು, ನೀರು ಹರಿಸಿದೊಡನೇ ಕಾಲುವೆ ನೀರು ಹೊಲಕ್ಕೆ ನುಗ್ಗಿ ರೈತರ ಹೊಲಗಳು ಹಾಳಾಗುತ್ತವೆ’ ಎಂದು ರಾಜಶೇಖರ್‌ ‘ಪ್ರಜಾವಾಣಿ’ ಜೊತೆ ಆತಂಕ ತೋಡಿಕೊಂಡರು.

‘ಕಾಲುವೆಯ ಎರಡೂ ಬದಿಯ ರಸ್ತೆಗಳಿಗೆ 0.60 ಮೀಟರ್‌ ದಪ್ಪ ಮುರ್ರಂ ಹಾಕಬೇಕಿತ್ತು ಹಾಗೂ ರಸ್ತೆಗಳು ಕಾಲುವೆಯಿಂದ ಕನಿಷ್ಠ 0.60 ಮೀಟರ್‌ ಏತ್ತರದಲ್ಲಿರಬೇಕಿತ್ತು. ಆದರೆ ನಿಗದಿಯಂತೆ ರಸ್ತೆ ಮಾಡದೇ ಕಾಲುವೆಯ ಮಣ್ಣನ್ನು ಹಾಕಿ ಕೈತೊಳೆದು ಕೊಂಡಿದ್ದಾರೆ. ಈ ಮಣ್ಣು ಮಳೆ ಸುರಿ ದಾಗ ಕಾಲುವೆ ಸೇರುತ್ತಿದೆ’ ಎಂದಿದ್ದಾರೆ.

ADVERTISEMENT

‘₹ 1302ಕೋಟಿ ಅಂದಾಜು ವೆಚ್ಚದ ಈ ಯೋಜನೆಯಲ್ಲಿ 12.815 ಟಿಎಂಸಿ ಅಡಿ ನೀರನ್ನು ಈ ಮುಖ್ಯ ಕಾಲು ವೆ12.260 ಕಿ.ಮೀ ದೂರ ಸಾಗಿಸುತ್ತದೆ. ಈ ಮುಖ್ಯ ಕಾಲುವೆಯು ಹುನಗುಂದ, ಹೂಲಗೇರಿ, ಯಲಬುರ್ಗಾ, ತಾವರ ಗೇರಾ, ಕನಕಗಿರಿ ಹಾಗೂ ಕೊಪ್ಪಳ ಶಾಖಾ ಕಾಲುವೆಗಳ ಮೂಲಕ ಒಟ್ಟು 2 ಲಕ್ಷ 80 ಸಾವಿರ ಏಕರೆ ಜಮೀನಿಗೆ ನೀರುಣಿಸಲಿದೆ.

‘ಕಾಲುವೆ ನಿರ್ಮಾಣಕ್ಕಾಗಿ ಯಥೇಚ್ಛವಾಗಿ ಹಣ ಹರಿದಿದೆ, ಆದರೆ ನೀರು ಹರಿಯುವುದು ಕಷ್ಟ. ಈ ಕಾಲುವೆಯನ್ನು ನೋಡಿದರೇ ಕಾಮಗಾರಿಯಲ್ಲಿ ಆಗಿರಬಹುದಾದ ಲೋಪಗಳು ಹಾಗೂ ಭ್ರಷ್ಟಾಚಾರ ಕಣ್ಣಿಗೆ ರಾಚುತ್ತದೆ. ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಕಾಲುವೆ ನಿರ್ಮಾಣ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದೇ ಕಾಮಗಾರಿ ಆರಂಭಿಸಿದಾಗ ತಡೆಯಲು ಮುಂದಾದ ರೈತರಿಗೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಪೊಲೀಸರ ಮೂಲಕ ಒತ್ತಡ ಹಾಕಿಸಿದ್ದರು’ ಎಂದು ರಾಜಶೇಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪದಲ್ಲಿ ಹುರುಳಿಲ್ಲ’

ಈ ಬಗ್ಗೆ ಕೊಪ್ಪಳ ಏತನೀರಾವರಿ ಯೋಜನೆ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಂತಪ್ಪ ಕನ್ನೂರ ‘ಕಾಲುವೆ ಕಾಮಗಾರಿಯು ನಿಗದಿತ ತಾಂತ್ರಿಕ ಅಂಶಗಳಂತೆ ನಡೆದಿದೆ. ಕಾಮಗಾರಿ ಕಳಪೆಯಾಗಿಲ್ಲ. ಕಾಲುವೆಗೆ ಅಗತ್ಯವಿದ್ದ ಜಮೀನನ್ನು ಸರ್ಕಾರ ನಿಯಮಾನುಸಾರ ಪರಿಹಾರ ನೀಡಿ ಭೂಸ್ವಾಧೀನಪಡಿಸಿಕೊಂಡಿದೆ. ರಾಜಶೇಖರ್‌ ಹುಡೇದಮನಿ ಅವರ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.