ADVERTISEMENT

ಒಣಗಿದ ಸಪೋಟ ಮರಗಳು

ನೀರಿನ ಕೊರತೆ, ಹಗರಿ ನದಿ ನೀರಿನ ಅಲಭ್ಯತೆ: ಇಳುವರಿ ಕುಸಿತ, ನಷ್ಟದ ಭೀತಿ 

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 11:39 IST
Last Updated 6 ಮಾರ್ಚ್ 2017, 11:39 IST
ಬಳ್ಳಾರಿ: ತಾಲ್ಲೂಕಿನ ಡಿ.ನಾಗೇನ ಹಳ್ಳಿಯಲ್ಲಿ ನೀರಿನ ಕೊರತೆಯಿಂದಾಗಿ ಸಪೋಟ ಮರಗಳು ಒಣಗುತ್ತಿವೆ. ಮಳೆ ಕೊರತೆ ಮತ್ತು ಹಗರಿ ನದಿ ನೀರಿನ ಅಲಭ್ಯತೆಯಿಂದಾಗಿ ಇಳುವರಿಯೂ ಕುಸಿದಿದೆ. ಇದರಿಂದ ಗ್ರಾಮದ ನೂರಾರು ರೈತರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ ಎಂದು ಗ್ರಾಮದ ರೈತ ಜಂಬನಗೌಡ ತಿಳಿಸಿದ್ದಾರೆ.
 
ಜನವರಿಯಿಂದ ಜುಲೈವರೆಗೆ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಎರಡು ಬಾರಿ ಬೆಳೆ ಕಟಾವು ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷವೂ ಕುಸಿದಿದ್ದ ಇಳುವರಿ ಈ ಬಾರಿಯೂ ನಿರಾಶಾದಾಯಕವಾಗಿದೆ. ಮಾರ್ಚ್‌ ತಿಂಗಳು ಆರಂಭವಾದರೂ ಕಾಯಿಗಳು ಬಲಿತಿಲ್ಲ. ಹೀಗಾಗಿ ತೋಟವನ್ನು ಗುತ್ತಿಗೆ ಪಡೆಯುವವರೂ ಹಿಂಜರಿದಿದ್ದಾರೆ ಎಂದು ತಿಳಿಸಿದ್ದಾರೆ.
 
ಮಳೆ ಕೊರತೆಯಿಂದಾಗಿ, ಸಮೀಪದ ಹಗರಿ ನದಿಯಿಂದ ಪೈಪ್‌ಲೈನ್‌ ಮೂಲಕ ತೋಟಗಳಿಗೆ ನೀರು ಪಡೆಯಲಾಗುತ್ತಿತ್ತು. ಆದರೆ ನದಿಯಲ್ಲಿ ನೀರು ಬತ್ತಿದೆ. ಪರಿಣಾಮವಾಗಿ ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಹೀಗಾಗಿ ಬೆಳೆ ಕೈಗೆ ಎಟುಕದಂತಾಗಿದೆ ಎಂದು ವಿಷಾದಿಸಿದ್ದಾರೆ.
 
ಒಣ ಹವೆ: ಬೆಳೆಗೆ ತೊಂದರೆ
ಸತತ ಒಣ ಹವೆ ಇರುವುದರಿಂದ ಸಪೋಟ ಬೆಳೆಗೆ ತೊಂದರೆ ಆಗಿದೆ. ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್‌ನಲ್ಲಿ ಸಪೋಟ ಬೆಳೆಯಲಾಗುತ್ತಿದ್ದು, ನಾಗೇನಹಳ್ಳಿ ಒಂದರಲ್ಲೇ 2 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಅಧಿಕಾರಿಗಳನ್ನು ಗ್ರಾಮಕ್ಕೆ ಕಳಿಸಿ ಪರಿಶೀಲನೆ ನಡೆಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.