ADVERTISEMENT

ಕೆರೆಗಳಿಗೆ ಹರಿದ ನದಿ ನೀರು

ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ ಮೂಲಕ ಪೂರೈಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:25 IST
Last Updated 22 ಮೇ 2018, 10:25 IST
ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಲಾಗುತ್ತಿದೆ
ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಲಾಗುತ್ತಿದೆ   

ಹೂವಿನಹಡಗಲಿ: ತುಂಗಭದ್ರಾ ನದಿಯಿಂದ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರುಪೂರ್ವ ಮಳೆಯಿಂದಾಗಿ ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಳವಾಗುತ್ತಿದೆ. ಸಿಂಗಟಾಲೂರು ಏತನೀರಾವರಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಾಕ್‌ವೆಲ್‌ನಿಂದ ನೀರು ಎತ್ತಿ ಪೈಪ್‌ಲೈನ್ ಮೂಲಕ ತಾಲ್ಲೂಕಿನ ಹಿರೇಹಡಗಲಿ, ಅರಳಿಹಳ್ಳಿ, ಮಾನ್ಯರಮಸಲವಾಡ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಯೋಜನೆ ಡಿಸೆಂಬರ್‌ನಲ್ಲಿ ಲೋಕಾ ರ್ಪಣೆಗೊಂಡಿತ್ತು. ಆಗ ನದಿ ಬತ್ತಿದ್ದರಿಂದ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಷ್ಟೇ ಸಾಧ್ಯವಾಗಿತ್ತು. ಈಗ ನದಿಗೆ ನೀರು ಹರಿದು ಬರುತ್ತಿರುವುದರಿಂದ 3 ದಿನಗಳಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ADVERTISEMENT

ನೀರು ಪೈಪ್‌ಲೈನ್‌ ಮೂಲಕ ಕೆರೆಯ ಒಡಲು ಸೇರುವುದನ್ನು ಕಂಡ ಹಿರೇಹಡಗಲಿ ಗ್ರಾಮಸ್ಥರು ಪುಳಕಗೊಂಡಿದ್ದಾರೆ. ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿರುವ ಜನತೆ ಕೆರೆಗೆ ನೀರು ಹರಿಯುವುದನ್ನು ಕಂಡು ಸಂಭ್ರಮಿಸಿದರು. ಕೆರೆ ತುಂಬಿಸುವ ಯೋಜನೆ ಪೂರ್ಣ ಗೊಂಡಿರುವುದರಿಂದ ಈ ಮಳೆಗಾಲದಲ್ಲಾದರೂ ಕೆರೆಗಳು ಭರ್ತಿಯಾಗುವ ಆಶಾಭಾವ ಮೂಡಿದೆ.

‘ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ಸದ್ಯ 1.2 ಟಿಎಂಸಿ ನೀರು ಸಂಗ್ರಹ ಇದೆ. ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಕೆರೆಗಳಿಗೆ ನೀರು ಹರಿಸಲು ಪ್ರಾರಂಭಿಸಿದ್ದೇವೆ. ಮಳೆಗಾಲದಲ್ಲಿ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಲಾಗುವುದು’ ಎಂದು ಸಿಂಗಟಾಲೂರು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ವಿ.ಹನುಮಂತಪ್ಪ ತಿಳಿಸಿದರು.

**
ಸಿಂಗಟಾಲೂರು ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ 6.75 ಮೀಟರ್‌ಗೆ ಏರಿಕೆಯಾಗಿದೆ. ಅಲ್ಲಿ ನೀರಿನ ಸಂಗ್ರಹ ಇರುವವರೆಗೂ ಕೆರೆಗಳಿಗೆ ನೀರು ಹರಿಸಲಾಗುವುದು
–ವಿ.ಹನುಮಂತಪ್ಪ, ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.