ADVERTISEMENT

ಗಣಿ ಲಾರಿ ಸಂಚಾರ ನಿರ್ಬಂಧಕ್ಕೆ ಆಗ್ರಹ

ಜಂಬುನಾಥಹಳ್ಳಿ ಆಶ್ರಯ ಕಾಲೊನಿ ನಿವಾಸಿಗಳಿಂದ ಸಂಡೂರು ಬೈಪಾಸ್‌ನಲ್ಲಿ ದಿಢೀರ್‌ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:46 IST
Last Updated 11 ಮಾರ್ಚ್ 2017, 12:46 IST
ಹೊಸಪೇಟೆ: ಗಣಿ ಲಾರಿಗಳ ಸಂಚಾರದ ಮೇಲೆ ನಿರ್ಬಂಧ ಹೇರುವಂತೆ ಆಗ್ರಹಿಸಿ ನಗರ ಹೊರವಲಯದ ಜಂಬುನಾಥಹಳ್ಳಿ ಆಶ್ರಯ ಕಾಲೊನಿ ನಿವಾಸಿಗಳು ಶುಕ್ರವಾರ ಸಂಡೂರು ಬೈಪಾಸ್ ರಸ್ತೆಯಲ್ಲಿ ದಿಢೀರ್‌ ರಸ್ತೆತಡೆ ನಡೆಸಿದ್ದರಿಂದ ಸುಮಾರು ಮೂರು ಗಂಟೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.
 
ಕಾಲೊನಿಯ ಜನ ಮಧ್ಯಾಹ್ನ 3ರ ಸುಮಾರಿಗೆ ಏಕಾಏಕಿ ಬೈಪಾಸ್‌ ಮಧ್ಯದಲ್ಲಿ ಕುಳಿತು ರಸ್ತೆತಡೆ ಆರಂಭಿಸಿದರು. 
 
ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣ ಮಾರೆಪ್ಪ, ‘ಇದು ತಾತ್ಕಾಲಿಕವಾಗಿ ನಿರ್ಮಿಸಿರುವ ಬೈಪಾಸ್‌ ರಸ್ತೆ. ಇಲ್ಲಿ ಗಣಿ ಲಾರಿಗಳ ಓಡಾಟದ ಮೇಲೆ ನಿರ್ಬಂಧ ಹೇರಿ, ಅವುಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕು. ಈಗಿರುವ ರಸ್ತೆ ಸರಿಪಡಿಸಬೇಕು. ಒಂದು ವಾರದ ಒಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಮತ್ತೆ ರಸ್ತೆ ತಡೆ ನಡೆಸಲಾಗುವುದು’ ಎಂದು ಹೇಳಿದರು.
 
ಆಶ್ರಯ ಕಾಲೊನಿಯಲ್ಲಿ ಸುಮಾರು 1,500 ಜನ ವಾಸಿಸುತ್ತಾರೆ. ಇದರಲ್ಲಿ ಅಲೆಮಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಡುಗಾಡು ಸಿದ್ಧರು, ಬುಡ್ಗ ಜಂಗಮ, ಚೆನ್ನದಾಸರು, ಸಿಂದೋಳಿ, ಸಿಳ್ಳೆಕ್ಯಾತರು ಸೇರಿದ್ದಾರೆ. ಗಣಿ ಲಾರಿಗಳ ಓಡಾಟದಿಂದ ಈ ಭಾಗದಲ್ಲಿ ಸದಾ ಧೂಳು ಇರುತ್ತದೆ. ಇದರಿಂದಾಗಿ ಇಲ್ಲಿ ವಾಸಿಸುತ್ತಿರುವ ಬಹುತೇಕರು ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಣ್ಣ ಮಾರೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
 
ಸಂಜೆ ಆರರ ಸುಮಾರಿಗೆ ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌, ಪೌರಾಯುಕ್ತ ಎಂ.ಪಿ. ನಾಗಣ್ಣ ಹಾಗೂ ಪರಿಸರ ಎಂಜಿನಿಯರ್‌ ಶಿಲ್ಪಾಶ್ರೀ ಅವರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ರಸ್ತೆತಡೆ ಚಳವಳಿ ಕೈಬಿಟ್ಟರು.
 
‘ರಸ್ತೆಯಲ್ಲಿ ಧೂಳು ಏಳದಂತೆ ನಿತ್ಯ ನೀರು ಸಿಂಪಡಿಸಲಾಗುವುದು. ಕಾಲೊನಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ, ಧೂಳಿನಿಂದ ಯಾರ್‍ಯಾರು ತೊಂದರೆಗೆ ಒಳಗಾಗಿದ್ದಾರೆ ಅವರೆಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದು ಪೌರಾಯುಕ್ತ ಎಂ.ಪಿ. ನಾಗಣ್ಣ ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.