ADVERTISEMENT

ಬಾರಿಗೆ ಕಟ್ಟಿ, ಬುಟ್ಟಿ ಹೆಣೆಯುವ ಕೊರವರ ಬದುಕು ಬವಣೆ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 17 ಡಿಸೆಂಬರ್ 2017, 7:09 IST
Last Updated 17 ಡಿಸೆಂಬರ್ 2017, 7:09 IST
ಬುಟ್ಟಿಗಾಗಿ ಈಚಲು ಕಡ್ಡಿಯನ್ನು ಸೀಳುತ್ತಿರುವ ಕೊರವರ ಹುಲಿಗೆಮ್ಮ
ಬುಟ್ಟಿಗಾಗಿ ಈಚಲು ಕಡ್ಡಿಯನ್ನು ಸೀಳುತ್ತಿರುವ ಕೊರವರ ಹುಲಿಗೆಮ್ಮ   

ಕಂಪ್ಲಿ: ಅಂದವಾಗಿ ಬಾರಿಗೆ ಕಟ್ಟುವ, ಬುಟ್ಟಿ ಹೆಣೆಯುವ ಕೊರವ ಕುಟುಂಬದವರ ಬದುಕು ಅಂದಗೆಟ್ಟಿದೆ. ಆಧುನಿಕತೆ ಸೋಂಕು ಈ ಕುಟುಂಬಗಳನ್ನು ಬೆಂಬಿಡದೆ ಕಾಡುತ್ತಿದೆ. ಕೆಲವರು ಮೂಲ ಕಾಯಕವನ್ನೇ ಬಿಟ್ಟು ಬದಲಾವಣೆಗೆ ಒಡ್ಡಿಕೊಂಡಿದ್ದರೆ, ಬೆರಳೆಣಿಕೆ ಕುಟುಂಬಗಳು ನವೀನತೆಯನ್ನ ಸವಾಲಾಗಿ ಸವಾಲಾಗಿ ಸ್ವೀಕರಿಸಿ ಸಮರ್ಪಣಾಭಾವದಿಂದ ಮೂಲ ಕಸುಬು ಮುಂದುವರಿಸಿದ್ದಾರೆ.

ಇಂಥ ಕೊರವರ(ಕೊರಮ) ಸಮಾಜದ ಕೆಲ ಕುಟುಂಬಗಳು ಕಂಪ್ಲಿಯಲ್ಲಿ ನೆಲೆಸಿದ್ದು, ಕೊರವರ ಹನುಮಕ್ಕ, ಸಣ್ಣ ಹನುಮಕ್ಕ ಮತ್ತು ವೃದ್ಧೆ ಕೊರವರ ಹುಲಿಗೆಮ್ಮ ಸೇರಿ ಇತರೆ ಕುಟುಂಬಗಳು ಇಂದಿಗೂ ಈಚಲು ಗರಿಯಿಂದ ಬಾರಿಗೆ(ಕಸ ಪೊರಕೆ) ಕಟ್ಟುವುದು ಮತ್ತು ಬುಟ್ಟಿಗಳನ್ನು ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡು ಬಾಳಬಂಡಿ ದೂಡುತ್ತಿದ್ದಾರ.

‘ಮೊದಲೆಲ್ಲ ಕಂಪ್ಲಿ ಭಾಗದ ಹಳ್ಳಕೊಳ್ಳಗಳಲ್ಲಿ ದೊರೆಯುತ್ತಿದ್ದ ಈಚಲ ಗಿಡಗಳು ಈಗ ಕಣ್ಮರೆಯಾಗಿವೆ. ಮಳೆ ಕೊರತೆ, ಭೂ ಪ್ರದೇಶ ಒತ್ತುವರಿಯ ಕಾರಣ ಈಚಲ ಗಿಡಗಳ ಪ್ರಭೇದವೇ ಇಲ್ಲದಂತಾಗಿದೆ. ಹಾಗಾಗಿ ಆಂಧ್ರಪ್ರದೇಶದ ಆದೋನಿ, ಪೆದ್ದ ತುಂಬಳ, ಚಿನ್ನ ತುಂಬಳ, ಮಂತ್ರಾಲಯ ವ್ಯಾಪ್ತಿಯಲ್ಲಿ ಹೇರಳವಾಗಿ ಸಿಗುವ ಈಚಲ ಗಿಡಗಳನ್ನು ಹಣ ಕೊಟ್ಟು ಖರೀದಿಸಿ ತಂದು ಕಾಯಕ ಮುಂದುವರಿಸಿದ್ದೇವೆ. ಈಚಲು ಗಿಡದ ಗರಿ ಕಟಾವು ಮಾಡಕ್ಕ ಜೀವ ಕೈಯಾಗ ಹಿಡಿದು ಹೋಗಬೇಕು. ಹಾವು, ಚೇಳು, ಗಿಡದ ಮುಳ್ಳನ್ನು ಲೆಕ್ಕಿಸದೇ ಗರಿಗಳನ್ನು ಕಟಾವು ಮಾಡ್ತೇವೆ. ಕುಡ­ಗೋಲಿಂದ ಕೆಲ್ಸ ಮಾಡ್ವಾಗ ಆಕಸ್ಮಿಕ ಕೈಗೆ ಗಾಯವಾಗುತ್ತದೆ’ ಎಂದು ಈ ಮಹಿಳೆಯರು ಮನದಾಳದ ನೋವು ತೋಡಿಕೊಂಡರು.

ADVERTISEMENT

‘ಒಂದು ಈಚಲು ಕಡ್ಡಿಯಲ್ಲಿ 5–6 ಗರಿಗಳು ದೊರೆಯುತ್ತವೆ. ಬೇರ್ಪಡಿಸಿದ ಈಚಲು ಗರಿಯನ್ನು ಒಂದು ವಾರ ಬಿಸಿಲಿನಲ್ಲಿ ಒಣಗಿಸಿ ನಂತರ ಸೂಡು ಕಟ್ಟಿ ಹಾಗೆ ಮನೆಯಲ್ಲಿ ಇಟ್ಟು ರಕ್ಷಿಸುತ್ತೇವೆ. ಗರಿಯನ್ನು ಬಳಸಿ ಬಾರಿಗೆ ಕಟ್ಟಿದರೆ, ಈಚಲು ಕಡ್ಡಿ ಬಳಸಿ ಬುಟ್ಟಿ ಹೆಣೆಯುತ್ತೇವೆ. ಇಷ್ಟೆಲ್ಲಾ ಶ್ರಮದ ಬೆವರು ಬಸಿದು ತಯಾರಿಸಿದ ಬಾರಿಗೆ, ಬುಟ್ಟಿ ಮಾರಾಟ ಮಾಡುವುದೇ ಒಂದು ದೊಡ್ಡ ಸವಾಲಿನ ಕೆಲಸ. ಗಿರಾಕಿ ಬಂದಾಗ ಬಾರಿಗೆಗೆ ₹ 15 ಹೇಳಿದರೆ, ₹10ಕ್ಕೆ ಚೌಕಸಿ ಮಾಡುತ್ತಾರೆ. ಬುಟ್ಟಿ ₹ 75 ಹೇಳಿದರೆ ₹ 50ಕ್ಕೆ ಕೇಳುತ್ತಾರೆ. ಹೇಗೋ ಸಂಸಾರದ ಮ್ಯಾಲಿನ ಖರ್ಚು ಹೊಂಟೋಗ್ತದೆ ಅಂಥ ಮಾರಿಬಿಡ್ತಿವಿ. ಸರ್ಕಾರದವ್ರು ಲೋನ್‌ ಕೊಡ್ತಿವಿ ಅಂಥ ಅಂದಿದ್ರು. ಆದ್ರ ಲೋನ್‌ ಕೊಟ್ಟಿಲ್ಲ. ಲೋನ್‌ ಕೊಟ್ರ ಪುಣ್ಯಾ ಬರ್‍ತದೆ’ ಎಂದು ಮನವಿ ಮಾಡಿದರು.

‘ಮಾರ್ಕೆಟ್‌ನ್ಯಾಗ ನಾನಾ ನಮೂನಿ ಬಾರಿಗೆ ಮತ್ತು ಪ್ಲಾಸ್ಟಿಕ್‌, ಫೈಬರ್‌ ಬುಟ್ಟಿ ಬಂದಾವ. ಇಂಥ ಪರಿಸ್ಥಿತ್ಯಾಗ ಈಚಲ ಗಿಡದಿಂದ ಮಾಡಿದ ಬಾರಿಗೆ, ಬುಟ್ಟಿ ವ್ಯಾಪಾರ ಮೊದಲಿನಷ್ಟು ಇಲ್ಲ. ಹಿಂಗಾಗಿ ನಮ್‌ ಹುಡ್ಗುರು, ಹೆಣ್ಮಕ್ಳು ಕಸಬರಿಗೆ ಕಟ್ಟುವ, ಬುಟ್ಟಿ ಹೆಣೆಯುವ ಕಸುಬಿಗೆ ಮುಂದಾಗ್ತಿಲ್ಲ. ರಸ್ತೆ ಪಕ್ಕದಲ್ಲಿ ಹಣ್ಣು ಹಂಪಲ ಮಾರಾಟ ಮಾಡ್ತರ. ಇನ್ನು ಕೆಲವರು ಊರೂರಿಗೆ ಹೋಗಿ ಅವಲಕ್ಕಿ, ಕಾಳು ಕಡಿ ಮಾರಾಟ ಮಾಡಿ ಹೊಟ್ಟೆ ತುಂಬ್ಸಿಕಂತಾರ. ಇನ್ನು ಮನೆ ಹಿರಿಯರು ಮದುವೆ -ಮುಂಜಿ, ಒಳ್ಳೆ(ಶುಭ)ಕಾರ್ಯಗಳಿಗೆ ಬ್ಯಾಂಡ್‌ ಬಾರಿಸಲು ಹೋಗ್ತಾರೆ’ ಎಂದು ಕೊರವರ ಹನುಮಕ್ಕ ದೊಡ್ಡ ಸೋಮಪ್ಪ ಮುಗ್ದತೆಯಿಂದ ತಿಳಿಸಿದರು.

* * 

ಈಚಲ ಕಸಬು ಅನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ ಅವರಿಗೆ ಸಾಲ ಸೌಲಭ್ಯ ನೀಡುವ ಮೂಲಕ ವ್ಯವಸ್ಥಿತ ಮಾರುಕಟ್ಟೆ ಒದಗಿಸಿದಲ್ಲಿ ಈ ಕುಟುಂಬಗಳಿಗೆ ತುಂಬಾ ಅನುಕೂಲ
ಕೊರವರ ತಿಮ್ಮಯ್ಯ, ನಿರ್ದೇಶಕರು, ಕಂಪ್ಲಿ ತಾಲ್ಲೂಕು ಕೊರಚ, ಕೊರಮ ಸಂಘ, ಕಂಪ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.