ADVERTISEMENT

ಎಲ್ಲೆಡೆ ಅಲಂಕಾರ, ಕಡಲೆಕಾಯಿ ಪರಿಷೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:02 IST
Last Updated 14 ನವೆಂಬರ್ 2017, 5:02 IST
ಆನೇಕಲ್‌ನಲ್ಲಿ ನಡೆದ ಕಡಲೆಕಾಯಿ ಪರಿಷೆ
ಆನೇಕಲ್‌ನಲ್ಲಿ ನಡೆದ ಕಡಲೆಕಾಯಿ ಪರಿಷೆ   

ಆನೇಕಲ್‌: ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕಗಳನ್ನು ಆಯೋಜಿಸಲಾಗಿತ್ತು. ಜನರು ಶ್ರದ್ಧಾ ಭಕ್ತಿಗಳಿಂದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಪಟ್ಟಣದ ಬನ್ನೇರುಘಟ್ಟ ರಸ್ತೆಯ ಚಿನ್ನಪ್ಪ ಸ್ವಾಮಿ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮದಿಂದ ನಡೆಯಿತು.

ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ಕಡಲೆಕಾಯಿ ಮಾರಾಟಗಾರರು ಬಂದಿದ್ದರು. ಭಕ್ತರು ಕಡಲೆಕಾಯಿಯನ್ನು ಕೊಂಡು ಚಿನ್ನಪ್ಪ ಸ್ವಾಮಿ ದೇವಾಲಯದತ್ತ ಎಸೆಯುತ್ತಿದ್ದ ದೃಶ್ಯ ಕಂಡು ಬಂದಿತು. ಕಡಲೆಕಾಯಿ ಎಸೆಯುತ್ತಿದ್ದಂತೆ ಭಕ್ತರು ಕಡಲೆಕಾಯಿಯನ್ನು ಆಯ್ದುಕೊಂಡು ಪ್ರಸಾದವೆಂಬಂತೆ ಸ್ವೀಕರಿಸಿದರು.

ಚಿನ್ನಪ್ಪಸ್ವಾಮಿ ದೇವಾಲಯವು ಅವಧೂತ ಚಿನ್ನಪ್ಪನ ಸಮಾಧಿ ಸ್ಥಳವಾಗಿದ್ದು ಹಲವು ಪವಾಡಗಳನ್ನು ನಡೆಸಿದ್ದರು ಎನ್ನಲಾಗಿದೆ. ಚಿನ್ನಪ್ಪನಿಗೆ ಕಡಲೆಕಾಯಿ ಅತ್ಯಂತ ಪ್ರಿಯವಾಗಿತ್ತು. ಪಟ್ಟಣದ ಅಮೃತ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಥಳೀ ರಸ್ತೆಯ ಬಸವೇಶ್ವರ ದೇವಾಲಯಗಳಲ್ಲಿ ಸಹ ವಿಶೇಷ ಪೂಜಾ ಕಾರ್ಯಕ್ರಮ ಆಯೋಜನೆಗೊಂಡಿದ್ದವು.

ADVERTISEMENT

ಅತ್ತಿಬೆಲೆ ಬಳಿಯ ಯಡವನಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಅನ್ನದಾನ ಆಯೋಜಿಸಲಾಗಿತ್ತು. ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯ, ಹಾಲ್ದೇನಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.

ಹಳೇಹಳ್ಳಿಯ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು. ನಾಗಸಂದ್ರ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ, ಧರ್ಮಸೇನಾ ಸಂಸ್ಥೆಯ ಮಿಡಿಗರಹಳ್ಳಿ ಉಮಾಪತಿ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.