ADVERTISEMENT

ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಅಧ್ಯಕ್ಷೆ ದಿಢೀರ್ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:38 IST
Last Updated 22 ಮಾರ್ಚ್ 2017, 9:38 IST

ದೊಡ್ಡಬಳ್ಳಾಪುರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಅವ್ಯವಸ್ಥೆ ಸರಿಪಡಿಸುವ ಸಲುವಾಗಿ ಮಂಗಳವಾರ ಎಪಿಎಂಸಿ ಅಧ್ಯಕ್ಷೆ ಅಮರಾವತಿ ಹಾಗೂ ನಿರ್ದೇಶಕರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿ ರಸ್ತೆ ಬದಿಯಲ್ಲಿ ಎಲ್ಲೆಂದಲ್ಲಿ ಇಟ್ಟಿರುವುದರಿಂದ ಮಾರುಕಟ್ಟೆಯಲ್ಲಿ ಓಡಾಡಲು ಸಹ ರಸ್ತೆ ಇಲ್ಲದೆ ಗ್ರಾಹಕರು ವ್ಯಾಪಾರಸ್ಥರ ಮಧ್ಯೆ ಸದಾ ಜಗಳಗಳು ನಡೆಯುತ್ತಿವೆ.

ಇದರಿಂದ ರಸ್ತೆ ಬದಿಯಲ್ಲಿನ ಅಂಗಡಿಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡುವ ಮೂಲಕ ತರಕಾರಿ ಮಾರುಕಟ್ಟೆ ವಿಶಾಲಗೊಳಿಸಲಾಗುವುದು ಎಂದು ಮಾಹಿತಿ ನೀಡಿದ ಎಪಿಎಂಸಿ ಅಧ್ಯಕ್ಷೆ ಅಮರಾವತಿ, ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆಯದ್ದೇ ದೊಡ್ಡ ಸಮಸ್ಯೆಯಾಗಿದೆ ಎಂದರು.

ಕಸ ವಿಲೇವಾರಿಗೆ ನೀಡಲಾಗಿರುವ ಗುತ್ತಿಗೆಯವರನ್ನು ಬದಲಾವಣೆ ಮಾಡುವ ಮೂಲಕ ಹೊಸದಾಗಿ ಗುತ್ತಿಗೆ ನೀಡಲಾಗುವುದು. ಇಡೀ ಎಪಿಎಂಸಿ ಹಸಿರೀಕರಣ ಮಾಡುವ ಮೂಲಕ ಮಾದರಿ ಮಾರುಕಟ್ಟೆಯನ್ನಾಗಿ ರೂಪಿಸಲು ಎಲ್ಲ ನೂತನ ನಿರ್ದೇಶಕರು ಹಲವಾರು ಸಲಹೆ, ಸೂಚನೆ  ನೀಡಿದ್ದಾರೆ.

ಇವುಗಳನ್ನು ಒಂದೊಂದಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು. ತರಕಾರಿ ಮಾರುಕಟ್ಟೆ ಒಳಗೆ ಬೆಳಿಗ್ಗೆ ಯಾವುದೇ ವಾಹನಗಳು ಬಾರದಂತೆ ನಿಗದಿ ಸ್ಥಳದಲ್ಲಿಯೇ ನಿಲುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸದ್ಯಕ್ಕೆ 180 ಜನ ಮಾತ್ರ ಅಧಿಕೃತವಾಗಿ ಅಂಗಡಿಗಳನ್ನು ನಡೆಸಲು ಪರವಾನಗಿ ಹೊಂದಿದ್ದಾರೆ. ಉಳಿದವರು ಅನಧಿಕೃತವಾಗಿ ಎಲ್ಲೆಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಹೊಸದಾಗಿ ಪರವಾನಗಿಯನ್ನು ಮಾಡುವ ಮೂಲಕ ಎಲ್ಲರನ್ನು ಅಧಿಕೃತಗೊಳಿಸಲಾಗುವುದು ಇದರಿಂದ ಸಂಸ್ಥೆಗೆ ಲಾಭಬರುವುದಲ್ಲದೆ. ಮಾರುಕಟ್ಟೆಯುನ್ನು ಶಿಸ್ತಿಗೆ ತರಲಾಗುವುದು ಎಂದರು.

ಎಪಿಎಂಸಿ ಉಪಾಧ್ಯಕ್ಷ ಟಿ.ಮಂಜುನಾಥ್‌, ನಿರ್ದೇಶಕರಾದ ಬಿ.ವಿ. ಲೋಕೇಶ್‌, ಎಂ. ಗೋವಿಂದರಾಜು, ಸೋಮಣ್ಣ, ವಿ. ಗೋವಿಂದರಾಜು, ಕೆ.ಸಿ. ಲಕ್ಷ್ಮೀನಾರಾಯಣ್‌, ಗಂಗಯ್ಯ, ಕೆ. ನಾರಾಯಣಸ್ವಾಮಿ, ಕೆ.ವಿ. ಮಂಜು ನಾಥ್‌, ಸುಧಾಕರ್‌, ಎಸ್‌.ಜಿ. ಸೋಮರುದ್ರ ಶರ್ಮ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.