ADVERTISEMENT

ದ್ರಾಕ್ಷಿ ತೋಟಕ್ಕೆ ರೋಗ: ರೈತರು ಕಂಗಾಲು

ಹವಾಮಾನ ವೈಪರೀತ್ಯದಿಂದ ‘ಡೋನಿ’ ರೋಗ: ಮುರುಟಿಕೊಳ್ಳುವ ಗೊಂಚಲು: ಬೆಳೆ ನಾಶದ ಆತಂಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 11:33 IST
Last Updated 27 ನವೆಂಬರ್ 2015, 11:33 IST

ವಿಜಯಪುರ: ಸತತ ಮಳೆ, ಮೋಡ ಮುಸುಕಿದ ಹಾಗೂ ಶೀತ ವಾತಾವರಣದಿಂದಾಗಿ ದ್ರಾಕ್ಷಿ ಬೆಳೆಗೆ ಡೋನಿ ರೋಗ ಅಥವಾ ದಾವನಿ ರೋಗ ತಗುಲಿದೆ. ಇದರಿಂದ ದ್ರಾಕ್ಷಿ ಬೆಳೆಗಾರರು  ಆತಂಕಕ್ಕೆ ಒಳಗಾಗಿದ್ದಾರೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಗಾರರಿರುವ ವಿಜಯಪುರ ಹೋಬಳಿಯ ಬಹುತೇಕ ಎಲ್ಲಾ ದ್ರಾಕ್ಷಿ ಬೆಳೆಗಾರರು ಡೋನಿ ರೋಗ ನಿಯಂತ್ರಿಸಲು ದುಬಾರಿ ಔಷಧ ಸಿಂಪಡಿಸುವ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ.

ಶೀತ ವಾತಾವರಣದಲ್ಲಿ ಉತ್ಪತ್ತಿಯಾಗುವ ಶಿಲೀಂದ್ರದಿಂದ ಉಂಟಾಗುವ ಈ ರೋಗದಿಂದಾಗಿ ದ್ರಾಕ್ಷಿ ಬಳ್ಳಿಯ ಉಪಕಾಂಡವು ರೋಗಗ್ರಸ್ಥವಾಗುತ್ತದೆ. ದ್ರಾಕ್ಷಿ ಗೊಂಚಲು ಮುರುಟಿಕೊಳ್ಳುತ್ತವೆ ಹಾಗೂ ಈ ರೋಗ ಬಳ್ಳಿಯಿಂದ ಬಳ್ಳಿಗೆ ಬಹುಬೇಗ ಕ್ಯಾನ್ಸರ್‌ನಂತೆ ವ್ಯಾಪಿಸಿ ಇಡಿ ತೋಟವನ್ನೇ ನಾಶ ಮಾಡುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಆರು ತಿಂಗಳ ಹಿಂದೆಯಷ್ಟೇ ಆಲಿಕಲ್ಲು ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ದ್ರಾಕ್ಷಿ ಬೆಳೆಗಾರರು ಈಗ ಹವಾಮಾನ ವೈಪರಿತ್ಯದಿಂದಾಗಿ ಫಸಲು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಪಟ್ಟಣದ ದ್ರಾಕ್ಷಿ ಬೆಳೆಗಾರ ಗೋವಿಂದರಾವ್‌ ಮಾತನಾಡಿ, ನೀರಿನ ಕೊರತೆಯಿಂದ ಖಾಸಗಿ ಟ್ಯಾಂಕರುಗಳನ್ನು ಖರೀದಿಸಿ ನೀರು ಹಾಯಿಸಿ ದ್ರಾಕ್ಷಿ ಬೆಳೆಯುತ್ತಿರುವ ದೇವನಹಳ್ಳಿ ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರಿಗೆ ಹವಾಮಾನ ಪದೇ ಪದೇ ತೊಂದರೆ ನೀಡುತ್ತಿದೆ. ಆಲಿಕಲ್ಲು ಮಳೆಯಿಂದಾಗಿ ಈಗಾಗಲೇ ನಷ್ಟ ಅನುಭವಿಸಿರುವ ರೈತರು, ಹೊಸ ಬೆಳೆಯ ಆಸೆಯಲ್ಲಿದ್ದಾಗಲೇ ಪ್ರತಿಕೂಲ ಹವಾಮಾನದಿಂದಾಗಿ ದ್ರಾಕ್ಷಿ ತೋಟಗಳಿಗೆ ಆವರಿಸಿರುವ ಡೋನಿ ರೋಗ ದ್ರಾಕ್ಷಿ ಬೆಳೆಗಾರರ ನೆಮ್ಮದಿ ಕೆಡಿಸಿದೆ ಎಂದು ಹೇಳಿದರು.

ದ್ರಾಕ್ಷಿ ಬಳ್ಳಿಯ ಉಪಕಾಂಡ ಒಣಗುವುದು ಹಾಗೂ ಹಾಗೆ ಮುಂದುವರಿದು ಪೂರ್ಣ ಬಳ್ಳಿಯೆ ಒಣಗಿ ಹೋಗುವುದು, ಪ್ರಾರಂಭದ ಹಂತದಲ್ಲಿರುವ ದ್ರಾಕ್ಷಿ ಗೊಂಚಲು ಸುಟ್ಟಂತೆ ಮುರುಟಿಕೊಳ್ಳುವುದು,ಇವು ಡೋನಿ ರೋಗದ ಮುಖ್ಯ ಲಕ್ಷಣಗಳಾಗಿವೆ, ಡೋನಿ ರೋಗ ಬಂದ ತೋಟವನ್ನು ಉಳಿಸಿಕೊಳ್ಳುವುದು ರೈತರಿಗೆ ಹರಸಾಹಸದ ಕೆಲಸ, ನಾನೇ ಸ್ವತಃ ಒಂದು ವಾರಕ್ಕೆ ಸುಮಾರು ₹30ಸಾವಿರಕ್ಕೂ ಹೆಚ್ಚು ಮೌಲ್ಯದ ಔಷಧವನ್ನು ತೋಟಕ್ಕೆ ಬಳಸಿದ್ದೇನೆ. ಆದರೂ ರೋಗ ಸಂಪೂರ್ಣ ದೂರವಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.

ಮತ್ತೊಬ್ಬ ದ್ರಾಕ್ಷಿ ಬೆಳೆಗಾರ ರಘು ಮಾತನಾಡಿ, ದ್ರಾಕ್ಷಿ ಬೆಳೆಗಾರರ ಬದುಕು ಕಹಿಯಾಗುತ್ತಿದೆ. ದ್ರಾಕ್ಷಿ ಮಾರುಕಟ್ಟೆ ಕುಸಿಯುತ್ತಿದ್ದು, ದಲ್ಲಾಳಿಗಳ ಹಾವಳಿಯಂತೂ ಹೇಳ ತೀರದಾಗಿದೆ, ಈಗ ರೋಗ ಬಂದಿರುವುದು ದ್ರಾಕ್ಷಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ,  ರೋಗ ನಿಯಂತ್ರಣಕ್ಕಾಗಿ ತೋಟಕ್ಕೆ ದುಬಾರಿ ಔಷಧಗಳ ಪ್ರಯೋಗ ಮಾಡಲೇಬೇಕಾದ ಪರಿಸ್ಥಿತಿ ಬಂದಿದ್ದು, ಅತಿಯಾದ ಔಷಧಗಳ ಪ್ರಯೋಗದಿಂದಾಗಿ ಎಲೆಗಳು ಉದುರಿ ಹೊಸ ಸಮಸ್ಯೆ ನಿರ್ಮಾಣವಾಗುತ್ತಿದೆ ಎಂದರು.

ದ್ರಾಕ್ಷಿ ಬೆಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಆದರೆ ಔಷಧಿಗಳ ಬೆಲೆಗಳು ಮಾತ್ರ ಏರುತ್ತಿವೆ. ಈಗಾಗಲೇ ನಷ್ಟ ಹೊಂದಿರುವ ದ್ರಾಕ್ಷಿ ಬೆಳೆಗಾರರನ್ನು ಔಷಧ ಕಂಪೆನಿಗಳು ದಿವಾಳಿಯೆಬ್ಬಿಸುತ್ತಿವೆ.  ಪ್ರತಿ ವರ್ಷ ಶೇಕಡ10 ರಷ್ಟು ತಮ್ಮ ಬೆಲೆಗಳಲ್ಲಿ ಹೆಚ್ಚಳ ಮಾಡಿಕೊಳ್ಳುವ ಔಷಧಿ ಕಂಪೆನಿಗಳು, ರೈತರ ಸಮಸ್ಯೆಗಳನ್ನು ಪರಿಗಣಿಸುವುದೆ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ದ್ರಾಕ್ಷಿ ಬೆಳೆಗಾರರಿಗೆ ತೋಟಗಾರಿಕಾ ಇಲಾಖೆ ವತಿಯಿಂದ ಹೆಚ್ಚಿನ ಬೆಂಬಲ ಇಲ್ಲ, ಅವರು ನೀಡುವ ಸಬ್ಸಿಡಿಗಳು ಅತ್ಯಂತ ಕಡಿಮೆಯಾಗಿದ್ದು, ಸಬ್ಸಿಡಿ ವಿತರಣೆಯಲ್ಲಿ ಇಲಾಖೆಯು ಹಳೆಯ ಮಾನದಂಡಗಳನ್ನೇ ಅನುಸರಿಸುತ್ತಿದೆ, ದ್ರಾಕ್ಷಿ ಬೆಳೆಗಾರರ ಬಹು ವರ್ಷಗಳ ಬೇಡಿಕೆಯಾದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಇಲಾಖೆಯು ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಆಲಿಕಲ್ಲು ಮಳೆಯಿಂದಾಗಿ ಈಗಾಗಲೆ ನಷ್ಟ ಅನುಭವಿಸಿರುವ ದ್ರಾಕ್ಷಿ ಬೆಳೆಗಾರರು ಸಾಲ ಸೋಲ ಮಾಡಿ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ, ಈಗ ಜಡಿ ಮಳೆಯಿಂದಾಗಿ ಮತ್ತೆ ನಷ್ಟ ಅನುಭವಿಸುತ್ತಿದ್ದಾರೆ ಹಾಗಾಗಿ ಸರ್ಕಾರವು ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕೂಲ ಹವಾಮಾನದಿಂದಾಗಿ ದ್ರಾಕ್ಷಿ ತೋಟಗಳಿಗೆ ಆವರಿಸಿರುವ ಡೋನಿ ರೋಗ ದ್ರಾಕ್ಷಿ ಬೆಳೆಗಾರರ ನೆಮ್ಮದಿ ಕೆಡಿಸಿದೆ.
ಗೋವಿಂದರಾವ್‌,
ದ್ರಾಕ್ಷಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.