ADVERTISEMENT

ರಸ್ತೆಗಳಿಗೆ ಆಧುನಿಕ ಸ್ಪರ್ಶ: ಶಾಸಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 5:02 IST
Last Updated 13 ಏಪ್ರಿಲ್ 2017, 5:02 IST

ದೊಡ್ಡಬಳ್ಳಾಪುರ: ನಗರದ ಹಾಲಿನ ಡೈರಿ ವೃತ್ತದಿಂದ ನೆಲಮಂಗಲ ರಸ್ತೆಯ ಕನಕದಾಸ ವೃತ್ತದವರೆಗೂ ₹ 6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸ ಲಾಗುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ರಸ್ತೆ ವಿಸ್ತರಣೆಯ ನೀಲ ನಕ್ಷೆಯನ್ನು ಪರಿಶೀಲಿಸಿ  ಮಾಹಿತಿ ನೀಡಿ, ನಗರದಲ್ಲಿ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಹಾಲಿನ ಡೈರಿ ವೃತ್ತದಿಂದ ನೆಲಮಂಗಲ ರಸ್ತೆಯ ಕನಕದಾಸ ರಸ್ತೆಯು ಒಂದಾಗಿದೆ. ಇದರಿಂದಾಗಿ ಈಗಾಗಲೇ ಈ ರಸ್ತೆಯ ವಿಸ್ತರಣೆ ಕೆಲಸ ಅರ್ಧದಷ್ಟು ಆಗಿದೆ.

ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿಯನ್ನು ಆರು ತಿಂಗಳ ಒಳಗೆ ಮುಕ್ತಾಯಗೊಳಿಸಲು ನಗರಸಭೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಜಂಟಿಯಾಗಿ ಸರ್ವೇ ನಡೆಸಿ ಒತ್ತುವರಿಯಾಗಿರುವ ಅಂಗಡಿಗಳನ್ನು ತೆರವು ಗೊಳಿಸಲಾಗುವುದು ಎಂದರು. ರಸ್ತೆ ವಿಸ್ತರಣೆ ನಂತರ ರಸ್ತೆ ವಿಭಜಕ, ಪಾದಚಾರಿ ಮಾರ್ಗ ಹಾಗೂ ವಿದ್ಯುತ್‌ ದೀಪಗಳನ್ನು ಅಳವಡಿಸಿ ಹೈಟೆಕ್‌ ಗೊಳಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸಾ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌, ನಗರಸಭೆ ಪೌರಾಯುಕ್ತ ಡಾ. ಪಿ. ಬಿಳಿಕೆಂಚಪ್ಪ, ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್‌ ಷೇಕ್‌ಫಿರೋಜ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.