ADVERTISEMENT

ಹಿರೋಡೆ ಕೆರೆ ಅಭಿವೃದ್ಧಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 9:05 IST
Last Updated 20 ಮಾರ್ಚ್ 2017, 9:05 IST

ಪಾಂಡವಪುರ: ತಾಲ್ಲೂಕಿನ ಎಲ್ಲ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು. ಪಟ್ಟಣದ ಐತಿಹಾಸಿಕ ಹಿರೋಡೆ ಕೆರೆಯ ಹೂಳು ತೆಗೆಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಮ್ಮ ಅನುದಾನದ ₹10 ಲಕ್ಷ ಅಂದಾಜು ವೆಚ್ಚದಲ್ಲಿ ಹಿರೋಡೆ ಕೆರೆಯ ಹೂಳು ತೆಗೆಸಲಾಗುತ್ತಿದೆ. ಕೆರೆಯಲ್ಲಿನ ಹೂಳು ತೆಗೆಸುವ ಜತೆಗೆ ಗಿಡಗಂಟಿಗಳನ್ನು ತೆಗೆಸಲಾಗುವುದು. ಈ ಕೆರೆಯ ಹೂಳು ಫಲವತ್ತತೆಯಿಂದ ಕೂಡಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೂಳನ್ನು ಪಡೆಯಬಹುದಾಗಿದೆ.

ಕಂದಾಯ ಇಲಾಖೆ, ಕಾವೇರಿ ನೀರಾವರಿ ನಿಗಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳು ಜತೆಗೂಡಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆ ಮತ್ತು ಇತರ ಮೂಲಗಳ ನೀರನ್ನು ಶೇಖರಿಸಲು ಸಾಧ್ಯವಾಗುತ್ತದೆ. ಐತಿಹಾಸಿಕ ಹಿರೋಡೆ ಕೆರೆಯನ್ನು ಅಭಿವೃದ್ದಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.

27 ಕೆರೆ ಅಭಿವೃದ್ಧಿ:  ತಾಲ್ಲೂಕಿನಲ್ಲಿರುವ ಪ್ರಮುಖ 27 ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿಗೊಳಿಸಲು ಸಹ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆಕಟ್ಟೆಗಳನ್ನು ಉಳಿಸಿ ಅಭಿವೃದ್ಧಿಗೊಳಿಸುವುದರಿಂದ ನೀರಿನ ಸಂಗ್ರಹಣೆಯ ಜತೆಗೆ ಅಂತರ್ಜಲವನ್ನು ವೃದ್ದಿಗೊಳಿಸಬಹುದಾಗಿದೆ ಎಂದು ಹೇಳಿದರು.

ಕೆರೆಗಳ ರಕ್ಷಣೆ: ತಾಲ್ಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ಸರ್ವೆ ಮಾಡುವ ಕಾರ್ಯ ಪ್ರಾರಂಭವಾಗಿದೆ. ಕೆರೆಗಳನ್ನು ಸರ್ವೇ ಮಾಡಿಸಿ  ಕೆರೆಗಳ ವಿಸ್ತೀರ್ಣ ಗುರುತು ಕಲ್ಲು ಹಾಕಿಸಿ ರಕ್ಷಣೆ ಮಾಡಲಾಗುವುದು. ಕೆರೆಗಳ ಒತ್ತುವರಿ ಕೂಡ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. 

ಹಿರೋಡೆಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಪಿ.ಎಸ್‌.ಉಮಾಶಂಕರ್, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಕಾವೇರಿ ನೀರಾವರಿ ನಿಗಮದ ಎಇಇ ಉಮೇಶ್‌, ಮುಖಂಡರಾದ ರೈತ ಸಂಘದ ಮುಖಂಡರಾದ ಎಚ್.ಎನ್.ವಿಜಯಕುಮಾರ್, ಹಿರೇಮರಳಿ ಕೃಷ್ಣಮೂರ್ತಿ, ಭಾಸ್ಕರ್, ಹೇಮಂತ್‌ಕುಮಾರ್‌, ಚನ್ನಕೇಶವ, ಸತ್ಯನಾರಾಯಣ, ನಾಗರಾಜು, ಉಮೇಶ್, ಸ್ವಾಮಿಗೌಡ, ನಿಂಗೇಗೌಡ, ಪೆಟ್ರೋಲ್‌ಬಂಕ್‌ ಉಮಾಶಂಕರ್, ಹಾರೋಹಳ್ಳಿ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.