ADVERTISEMENT

147 ಗ್ರಾಮಗಳಿಗೆ ಬ್ಯಾಂಕ್ ಸೌಲಭ್ಯ

₹ 2,000 ಕೋಟಿಯ ಬೆಂ.ಗ್ರಾ ಜಿಲ್ಲಾ ಸಾಲ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:32 IST
Last Updated 24 ಮಾರ್ಚ್ 2017, 8:32 IST

ದೊಡ್ಡಬಳ್ಳಾಪುರ:  ಕೆನರಾ ಬ್ಯಾಂಕ್ 2017–18ನೇ ಸಾಲಿಗೆ ಜಿಲ್ಲೆಯ ಬ್ಯಾಂಕುಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ₹ 2,000 ಕೋಟಿಗಳ ಸಾಲ ಯೋಜನೆಯನ್ನು ಸಿದ್ದಪಡಿಸಿದೆ. 

ಬೆಂಗಳೂರು ಗ್ರಾಮಾಂತರ ಜಿಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಅವರು ಜಿಲ್ಲಾ ಸಾಲ ಯೋಜನೆ ವಿವರಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರದ ಎಲ್ಲ ಇಲಾಖೆಗಳ ಹಾಗೂ ಬ್ಯಾಂಕುಗಳ ಸಹಕಾರದಲ್ಲಿ ಸರ್ಕಾರದ ಯೋಜನೆಗಳಡಿ ನಿಗದಿ ಪಡಿಸಿದ ಗುರಿಗಳ ಅನ್ವಯ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕೆಂದರು.

ಕೃಷಿಕರ ಹಾಗೂ ಫಲಾನುಭವಿಗಳ ಖಾತೆಗೆ ನೇರವಾಗಿ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ಕಲ್ಪಿಸುವ ಕ್ರಾಂತಿಕಾರಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. 

ನೋಟು ಅಮಾನ್ಯದ ಸಂದರ್ಭದಲ್ಲಿ ಸಾರ್ವಜನಿಕರಿಂದ ಬರುವ  ಎಲ್ಲ ರೀತಿಯ ಒತ್ತಡಗಳನ್ನು ಬ್ಯಾಂಕ್ ಅಧಿಕಾರಿಗಳು ಸಮರ್ಥವಾಗಿ  ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕಾರ್ಯರ್ನಿಹಿಸಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳನ್ನು ಶ್ಲಾಘಿಸಿದರು. 

ಈ ಸಾಲ ಯೋಜನೆಯಡಿ ಜಿಲ್ಲೆಯಲ್ಲಿರುವ  1000 ದಿಂದ 2000 ಜನಸಂಖ್ಯೆ ಹೊಂದಿರುವ 147 ಗ್ರಾಮಗಳಿಗೆ ಬ್ಯಾಂಕ್ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಈ ಸಾಲ ಯೋಜನೆಯಡಿ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ₹ 582 ಕೋಟಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ₹ 433 ಕೋಟಿ, ಹೊಸಕೋಟೆ ತಾಲ್ಲೂಕಿನಲ್ಲಿ ₹ 437 ಕೋಟಿ ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ ₹ 395 ಕೋಟಿಗಳ ಸಾಲ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. 

ಪಾಲ್ಗೊಂಡಿದ್ದ ಜಿಪಂ ಯೋಜನಾ ನಿರ್ದೇಶಕ ಕಾಂತರಾಜ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮಗಳಡಿ ಆಯ್ಕೆಯಾಗುವ ಫಲಾನುಭವಿಗಳಿಗೆ ಬ್ಯಾಂಕ್ ಅಧಿಕಾರಿಗಳು ಸುಲಭವಾಗಿ ಸಾಲಸೌಲಭ್ಯ ಕಲ್ಪಿಸುವ ಮೂಲಕ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.  

ಕೆನರಾ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ಪ್ರಮೋದ ನಾಯಕ್, ರಿಸರ್ವ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಶಿಲ್ಪಿಕುಮಾರಿ, ಬೆಂಗ್ರಾ ಜಿಲ್ಲಾ ಉಪವ್ಯವಸ್ಥಾಪಕ ಪಿ.ರಾಜೇಂದ್ರನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಜಿ.ಎಸ್.ಶ್ರೀನಿವಾಸನ್, ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT