ADVERTISEMENT

ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ

ನದಿ ಪಾತ್ರದ ನೀರು ಕಲುಷಿತವಾಗಿ ಹಿರೇತಡಸಿ ಗ್ರಾಮದಲ್ಲಿ ಹೆಚ್ಚಿದ ರೋಗ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:58 IST
Last Updated 13 ಜುಲೈ 2017, 11:58 IST

ರಾಮದುರ್ಗ: ತಾಲ್ಲೂಕಿನ ಹಿರೇತಡಸಿ ಗ್ರಾಮಕ್ಕೆ ಸರಬರಾಜಾಗುತ್ತಿರುವ ನದಿ ಪಾತ್ರದ ಕಲುಷಿತ ನೀರು ಕುಡಿದು ಮಕ್ಕಳು ಹಾಗೂ ಜನತೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಖಾಲಿ ಕೊಡಗಳ ಪ್ರದರ್ಶನ ಮಾಡಿ ಪ್ರತಿಭಟಿಸಿದರು.

ತಾಲ್ಲೂಕಿನ ಬೆನ್ನೂರ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಕೊರೆಯ ಲಾದ ತೆರೆದ ಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ ನದಿಯಲ್ಲಿ ನೀರು ಕಲುಷಿತಗೊಳ್ಳುತ್ತಿದೆ. ಕಲುಷಿತ ನೀರು ಕುಡಿದ ಗ್ರಾಮಸ್ಥರು ಹೊಟ್ಟೆ ನೋವು, ವಾಂತಿ-ಭೇದಿ, ಕಾಲರಾ, ಸಂದಿನೋವುಗಳಿಂದ ಬಳಲುತ್ತಿದ್ದಾರೆ.

ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಅಲ್ಲಿ ಎರಡು ಕೊಳವೆ ಬಾವಿ ಗಳನ್ನು ಕೊರೆಯಿಸಲಾಗಿದೆ. ಎರಡು ಕೊಳವೆ ಬಾವಿಗಳಲ್ಲೂ ನೀರಿಲ್ಲ. ಕಳೆದ ಆರು ತಿಂಗಳಿಂದ ಶುದ್ಧ ನೀರು ಪೂರೈಕೆಗೆ ಅಧಿಕಾರಿಗಳ ಬೆನ್ನತ್ತಿದರೂ ಪ್ರಯೋಜನ ವಾಗಿಲ್ಲ ಎಂದು ದೂರಿದರು.

ಹೊಸಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಿರೇತಡಸಿ ಗ್ರಾಮವು ತಾಲ್ಲೂಕಿನ ಕೊನೆಯ ಹಳ್ಳಿಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾ ಗಲೀ, ಜನಪ್ರತಿನಿಧಿಗಳಾಗಲೀ ಗ್ರಾಮದ ಅಭಿವೃದ್ಧಿಯ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ದೂರವಾಣಿ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕೊಳವೆ ಬಾವಿ ಕೊರೆಸುವ ತನಕ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸೂಚಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ಇನ್ನೆರಡು ದಿನಗಳಲ್ಲಿ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಗ್ರಾಮಸ್ಥ ರೊಂದಿಗೆ ಸೇರಿ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಐ.ಎಸ್. ಹರನಟ್ಟಿ, ಗೂಳಪ್ಪ ಹರನಟ್ಟಿ, ಕಲ್ಲನಗೌಡ ಪಾಟೀಲ, ಸುಭಾಸ ಹಳ್ಳಿ, ರಾಮಣ್ಣ ಜಾಧವ, ವಿಠ್ಠಪ್ಪ ಜಾಧವ, ಮಹಾಂತಗೌಡ ಪಾಟೀಲ, ತಿಪ್ಪನಗೌಡ ಪಾಟೀಲ, ಬಸನಗೌಡ ಪಾಟೀಲ ಸೇರಿದಂತೆ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.