ADVERTISEMENT

‘ಸಮಾಜಸೇವಕರು ಇಂದಿನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:29 IST
Last Updated 17 ಜುಲೈ 2017, 6:29 IST

ಬೆಳಗಾವಿ: ನಿಸ್ವಾರ್ಥ ಮನೋಭಾವ ಹೊಂದಿದ್ದರೆ ಮಾತ್ರ ಸಮಾಜಸೇವೆ ಮಾಡಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಹೊಸಮನಿ ಹೇಳಿದರು. ಇಲ್ಲಿನ ಸನ್ಮಾನ್‌ ಹೋಟೆಲ್‌ನಲ್ಲಿ ಭಾನುವಾರ ಗೋಪಾಲ ಜಿನಗೌಡ ಪ್ರತಿಷ್ಠಾನದಿಂದ ನಾಲ್ವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚಿಕ್‌ ವಿತರಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಬಡವರ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳು ಬಹಳ ವಿರಳವಾಗುತ್ತಿದ್ದಾರೆ. ಗೋಪಾಲ ಜಿನಗೌಡ ಅವರು 8 ವರ್ಷಗಳಿಂದ ನಿಸ್ವಾರ್ಥ ಭಾವನೆಯಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾದುದು. ಇಂಥವರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ’ ಎಂದು ತಿಳಿಸಿದರು.

‘ಎಂಟು ವರ್ಷಗಳಲ್ಲಿ 44 ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿದ್ದಾರೆ. ಸಹಾಯ ಪಡೆದವರು ದಾನಿಗಳನ್ನು ನೆನೆಯಬೇಕು. ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಅಧ್ಯಯನದತ್ತ ಗಮನಹರಿಸಬೇಕು. ಉನ್ನತ ಸ್ಥಾನಕ್ಕೆ ಏರಿದಾಗ ಬಡವರಿಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಉನ್ನತ ಶಿಕ್ಷಣ ಅಗತ್ಯ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳೂ ಕಾರ್ಯೋನ್ಮುಖರಾಗಬೇಕು. ಬಡತನ ಶಾಪವಲ್ಲ. ಬಡತನ ಜೀವನದ ಪಾಠ ಕಲಿಸುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಬೇಕು. ವಿದ್ಯೆ ಯಾರ ಸ್ವತ್ತೂಅಲ್ಲ. ಉನ್ನತ ಶಿಕ್ಷಣದ ಮೂಲಕ ಜೀವನದಲ್ಲಿ ಮುಂದೆ ಬರಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲ ಜಿನಗೌಡ, ‘ವಿದ್ಯಾರ್ಥಿಗಳು ನಿರಂತರ ಉನ್ನತ ಶಿಕ್ಷಣ ಪಡೆಯುವಲ್ಲಿ ಆಸಕ್ತಿ ವಹಿಸಬೇಕು. ಕಠಿಣ ಶ್ರಮ ವಹಿಸಿ ಹಾಗೂ ಪ್ರಾಮಾಣಿಕವಾಗಿ ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಪ್ರತಿಷ್ಠಾನದಿಂದ ಈ ವರ್ಷ 4 ವಿದ್ಯಾರ್ಥಿಗಳನ್ನು ಆಯ್ಕೆ  ಮಾಡಿ ಅವರಿಗೆ ಧನಸಹಾಯ ನೀಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ಎಲ್ಲ ಶಿಕ್ಷಣಕ್ಕೆ ಅಗತ್ಯವಾಗಿರುವ ನೆರವು ನೀಡಲಾಗುವುದು, ತಲಾ ₹ 2 ಲಕ್ಷದವರೆಗೆ ಧನಸಹಾಯ ಮಾಡಲಾಗುವುದು’ ಎಂದು ತಿಳಿಸಿದರು.

ಹಿಂದಿನ ವರ್ಷಗಳಲ್ಲಿ ಧನಸಹಾಯ ಪಡೆದ ವಿದ್ಯಾರ್ಥಿಗಳು ಹಾಗೂ 2017ರಲ್ಲಿ ಆಯ್ಕೆಯಾದ ಸುನೀಲ ಕರೇಗಾರ, ಚೈತ್ರಾ ನನಮುತ್ತಿ, ಸ್ನೇಹಲ್‌ ಕಣಬರಗಿ ಹಾಗೂ ನಿಖಿತಾ ಬಾನೆ ಅನಿಸಿಕೆ ಹಂಚಿಕೊಂಡರು.

ಪ್ರತಿಷ್ಠಾನದ ಸದಸ್ಯರಾದ ಅಜಿತ್‌ ದೊಡ್ಡಣವರ, ಬಿ.ಪಿ. ಜಿನಗೌಡ, ರವೀಂದ್ರ ಹಿರೇದೇಸಾಯಿ, ಕಾರ್ಯದರ್ಶಿ ಸಂದೀಪ ಚಿಪ್ರೆ, ಹುಕುಮಚಂದ ರತ್ತು ಇದ್ದರು. ಅಕ್ಷತಾ ಠಕನ್ನವರ ಪ್ರಾರ್ಥಿಸಿದರು. ಪ್ರತಿಷ್ಠಾನದ ಸದಸ್ಯ ಬಿ.ಆರ್. ಶಂಕರಗೌಡ ಸ್ವಾಗತಿಸಿದರು. ಸದಸ್ಯ ಪರಮೇಶ್ವರ ಹೆಗಡೆ ಪರಿಚಯಿಸಿದರು. ರವೀಂದ್ರ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ಮ್ಯಾಗೋಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.