ADVERTISEMENT

ಸೊಳ್ಳೆಗಳ ಔಷಧಿ ಸಿಂಪಡನೆ ವೇಳೆ ಕಾರ್ಮಿಕನ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2017, 7:33 IST
Last Updated 21 ಮೇ 2017, 7:33 IST

ನಿಪ್ಪಾಣಿ: ಔಷಧ ಸಿಂಪಡಿಸುವ ಸಂದರ್ಭದಲ್ಲಿ ಅಸ್ವಸ್ಥಗೊಂಡ ನಗರಸಭೆ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ. ಸಾವನ್ನಪ್ಪಿದ ಕಾರ್ಮಿಕನನ್ನು ಇಲ್ಲಿನ ಜತ್ರಾಟ ವೇಸ್‌ನ ರಣಜೀತ ಸದಾನಂದ ಕಾಂಬಳೆ(30) ಎಂದು ಗುರುತಿಸಲಾಗಿದೆ.

ನಗರಸಭೆಯ ಆರೋಗ್ಯ ವಿಭಾಗದಲ್ಲಿ ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದ ರಣಜೀತ ಇಲ್ಲಿನ ಶಿಂತ್ರೆ ಕಾಲೊನಿಯಲ್ಲಿ ಇತರ ಕಾರ್ಮಿಕರೊಂದಿಗೆ ಸೊಳ್ಳೆಗಳ ಔಷಧಿ ಹ್ಯಾಂಡಪಂಪ್‌ದಿಂದ ಸಿಂಪಡಿ­ಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥಗೊಂಡರು.

ಇತರರು ಅವರನ್ನು ತಕ್ಷಣ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರ ಅಸ್ವಸ್ಥತೆ ಮತ್ತಷ್ಟು ಹೆಚ್ಚಾದ ಪರಿಣಾಮ ಅಲ್ಲಿಂದ ಮತ್ತೆ ಕೊಲ್ಲಾಪೂರದ ಆಸ್ಪತ್ರೆಗೆ ಸ್ಥಳಾಂತರಿಸುತ್ತಿರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಅವರು ಮೃತಪಟ್ಟರು ಎಂದು ನಗರಸಭೆ ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ನಗರಸಭೆ ಪದಾಧಿಕಾರಿಗಳು, ಅಧಿಕಾರಿಗಳು, ಸದಸ್ಯರು ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ವಿಲಾಸ್‌ ಗಾಡಿವಡ್ಡರ ‘ಘಟನೆ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

ಇದೆ ಸಂದರ್ಭದಲ್ಲಿ ನಾಗರಿಕರು ‘ಔಷಧಿ ಸಿಂಪಡಿಸುವಾಗ ಉಪಯೋಗಿಸುವ ಅವಶ್ಯಕ ಸಾಮಗ್ರಿಗಳನ್ನು ಕಾರ್ಮಿಕರಿಗೆ ನಗರಸಭೆಯಿಂದ ಪೂರೈಸದೆ ಇದ್ದ ಪರಿಣಾಮ ರಣಜೀತ ಸಾವನ್ನಪ್ಪಿದ್ದಾನೆ.

ಈ ಕುರಿತು ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕಠೋರ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸ್ಥಳೀಯ ಶಹರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಕಾರ್ಯ ತಡರಾತ್ರಿಯವರೆಗೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.