ADVERTISEMENT

ಯುವತಿಯರಿಗೆ ಡಿಕ್ಕಿಯಾಗಿದ್ದಕ್ಕೆ ಆಕ್ರೋಶ: ಬಿಎಂಡಬ್ಲ್ಯು ಕಾರಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 16:06 IST
Last Updated 8 ಅಕ್ಟೋಬರ್ 2018, 16:06 IST
ಕಾರ್‌ನ ಗಾಜು ಒಡೆದಿರುವುದು, ಬೆಂಕಿ ಹಚ್ಚಿರುವುದು
ಕಾರ್‌ನ ಗಾಜು ಒಡೆದಿರುವುದು, ಬೆಂಕಿ ಹಚ್ಚಿರುವುದು   

ಬೆಳಗಾವಿ: ಇಲ್ಲಿನ ಗಾಂಧಿನಗರ ಹಣ್ಣಿನ ಮಾರುಕಟ್ಟೆ ಎದುರಿನಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಯುವತಿಯರಿಗೆ ಸೋಮವಾರ ಸಂಜೆ ಡಿಕ್ಕಿಯಾದ ಬಿಎಂಡಬ್ಲ್ಯು ಕಾರನ್ನು ರೊಚ್ಚಿಗೆದ್ದ ಸ್ಥಳೀಯರು ಜಖಂಗೊಳಿಸಿ, ಗಾಜುಗಳನ್ನು ಒಡೆದು ಹಾಕಿ ಹಾಗೂ ಬೆಂಕಿ ಹಚ್ಚಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಾರೆ. ಮೃತರನ್ನು ತೆಹನಿಯತ್‌ ವಾಹೀದ್ ಬಿಸ್ತಿ (18) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆ ಉಸಿರೆಳೆದಿದ್ದಾರೆ. ಗಾಯಗೊಂಡಿರುವ ಸಮ್ರಿನ್ ಬಿಸ್ತಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾ ನೋಂದಣಿಯ ಕಾರನ್ನು ಸ್ಥಳೀಯರು ಕಲ್ಲಿನಿಂದ ಒಡೆದು ಜಖಂಗೊಳಿಸಿದ್ದಾರೆ. ಚಾಲಕ ಗೋವಾದ ಕಲಂಗೂಟ್‌ನ ಕಾಯಿಲ್‌ ಟಿಕ್ಲೊ ಮೇಲೂ ಕೆಲವರು ಹಲ್ಲೆ ನಡೆಸಿದರು. ಪೊಲೀಸರು ತಕ್ಷಣ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಕಾರಿನಲ್ಲಿ ಚಾಲಕನೊಂದಿಗೆ ಮಹಿಳೆ ಇದ್ದರು ಎಂದು ಗೊತ್ತಾಗಿದೆ. ಈ ಕಾರು ಗೋವಾದ ಶಾಸಕರೊಬ್ಬರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.

ADVERTISEMENT

ಕಾರು ಜಖಂಗೊಳಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.