ADVERTISEMENT

ಅಂಗವಿಕಲ ಸೇರಿ ಆರು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:19 IST
Last Updated 26 ಮೇ 2017, 20:19 IST

ಬೆಂಗಳೂರು: ಗಂಗೊಂಡನಹಳ್ಳಿಯ ‘ರವಿ ಬಾರ್‌’ನಲ್ಲಿ ಮೇ 20ರಂದು ನಡೆದಿದ್ದ ರೌಡಿಶೀಟರ್ ಅರುಣ್ ಅಲಿಯಾಸ್ ವಾಲೆ ಅರುಣನ (28) ಕೊಲೆ ಪ್ರಕರಣ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ದೀಪಾಂಜಲಿನಗರದ ಬೆಟ್ಟಪ್ಪ, ಕಿರಣ್, ರಾಜರಾಜೇಶ್ವರಿನಗರ ಠಾಣೆಯ ರೌಡಿಶೀಟರ್ ಅರುಣ್ ಅಲಿಯಾಸ್ ತ್ಯಾಪೆ ಅರುಣ, ಚೋಳರ ಪಾಳ್ಯದ ಚೇತನ್, ಪ್ರದೀಪ್ ಹಾಗೂ ಮಾಗಡಿ ರಸ್ತೆಯ ಆಕಾಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ದಶಕದ ದ್ವೇಷ: ‘ಬ್ಯಾಟರಾಯನಪುರ ಠಾಣೆ ರೌಡಿಶೀಟರ್ ಆಗಿರುವ ಬೆಟ್ಟಪ್ಪನ ಮೇಲೆ 2007ರಲ್ಲಿ ದಾಳಿ ನಡೆಸಿದ್ದ ವಾಲೆ ಅರುಣ, ತಲೆ ಹಾಗೂ ಕಾಲಿಗೆ ಮಚ್ಚಿನಿಂದ ಹೊಡೆದಿದ್ದ. ಇದರಿಂದಾಗಿ ಆತ ಶಾಶ್ವತವಾಗಿ ಅಂಗವಿಕಲನಾಗಬೇಕಾಯಿತು. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಿ ಕೊಳ್ಳಲು ಬೆಟ್ಟಪ್ಪ ದಶಕದಿಂದಲೂ ನಾನಾ ರೀತಿಯಲ್ಲಿ ಯತ್ನಿಸಿದ್ದ’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

‘ಇನ್ನುಳಿದ ಆರೋಪಿಗಳಿಗೆ ಬೆಟ್ಟಪ್ಪನ ಮೇಲೆ ಅತಿಯಾದ ಅಭಿಮಾನ. ಆತನ ಮಾತಿನಂತೆಯೇ ಹಿಂದೆಯೂ 2–3 ಬಾರಿ ಅರುಣನ ಕೊಲೆಗೆ ಯತ್ನಿಸಿದ್ದರು. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಆತ ಗೆಳೆಯ ಭಾಸ್ಕರ್‌ ಜತೆ ಬಾರ್‌ಗೆ ಹೋಗಿದ್ದ. ಈ ವಿಚಾರ ತಿಳಿದ ಆರೋಪಿಗಳು, ಮೂರು ಬೈಕ್‌ಗಳಲ್ಲಿ ಬಂದು ಆತನ ಮೇಲೆ ದಾಳಿ ನಡೆಸಿದ್ದರು.’

‘ಅರುಣನಿಗೆ ಆರು ಸಲ ಚಾಕುವಿ ನಿಂದ ಇರಿದಿದ್ದ ಆರೋಪಿಗಳು, ನಂತರ ಬಾರ್‌ನ ಅಡುಗೆ ಕೋಣೆಯಲ್ಲಿದ್ದ ಖಾಲಿ ಸಿಲಿಂಡರ್ ತಂದು ತಲೆ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಹಂತಕರ ಚಲನವಲನಗಳು ಸೆರೆಯಾಗಿದ್ದವು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಅವರನ್ನು ಬಿಡದಿಯಲ್ಲಿ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

ಮೃತನೂ ರೌಡಿಯೇ: 2007ರಲ್ಲಿ ತೂಫಾನ್ ಎಂಬುವರನ್ನು ಹತ್ಯೆಗೈದಿದ್ದ ವಾಲೆ ಅರುಣನ ವಿರುದ್ಧ ಕೆಂಪಾಪುರ ಅಗ್ರಹಾರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಇತ್ತೀಚೆಗೆ ಅಪರಾಧ ಪ್ರಕರಣ ಗಳಿಂದ ದೂರ ಉಳಿದು, ಆಟೊ ಓಡಿಸಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.