ADVERTISEMENT

ಆಕ್ಷೇಪಣೆ, ಸಲಹೆಗೂ ಅವಕಾಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ:ಮಾಸ್ಟರ್‌ ಪ್ಲಾನ್‌ ಕರಡು ಪ್ರತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 20:10 IST
Last Updated 27 ಏಪ್ರಿಲ್ 2015, 20:10 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಸ್ಟರ್‌ ಪ್ಲಾನ್‌ನ  ಕರಡು ಪ್ರತಿ ತಯಾರಾದ ಮೇಲೆ ಮತ್ತೆ ಸಾರ್ವಜನಿಕ ಸಭೆ ಕರೆದು ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಕೇಳಲಾಗುವುದು ಎಂದು ಪ್ರಾಧಿಕಾರದ ನಗರ ಯೋಜನೆ ವಿಭಾಗದ ಸದಸ್ಯ ಚೌಡೇಗೌಡ ಅವರು ಹೇಳಿದರು.

ಪ್ರಾಧಿಕಾರವು ಮಾಸ್ಟರ್‌ ಪ್ಲಾನ್‌ ತಯಾರಿ ಜವಾಬ್ದಾರಿಯನ್ನು ನೆದರ್‌ಲ್ಯಾಂಡ್‌ ಮೂಲದ ‘ರಾಯಲ್‌ ಹಾಸ್ಕೊನಿಂಗ್‌ ಡಿಎಚ್‌ವಿ’ ಎಂಬ ಸಂಸ್ಥೆಗೆ ಗುತ್ತಿಗೆಗೆ ನೀಡಿದೆ. ಈ ಸಂಸ್ಥೆಯು ಒಂದು ವರ್ಷದಿಂದ  ಕಾರ್ಯನಿರತವಾಗಿದೆ. ಮಾಸ್ಟರ್‌ ಪ್ಲಾನ್‌ ತಯಾರಿಗಾಗಿ ನಗರದ ಮೂಲ ನಕ್ಷೆಯನ್ನು (ಬೇಸ್‌ ಮ್ಯಾಪ್‌) ಸಿದ್ಧಪಡಿಸಿದೆ. ಜನಸಂಖ್ಯಾ ಬೆಳವಣಿಗೆಯನ್ನೂ ಲೆಕ್ಕ ಹಾಕಿದೆ.

ಹಿಂದಿನ ಒಂದು ಸಭೆ ರದ್ದು: ಕಳೆದ ನವೆಂಬರ್‌ನಲ್ಲಿ ಕರೆದಿದ್ದ ಸಾರ್ವಜನಿಕ ಸಭೆಯನ್ನು ಪ್ರಾಧಿಕಾರವು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಸಿರು ವಲಯ: ಮುಕ್ತ ಮನಸು ‘ಹಸಿರು ವಲಯವನ್ನು ಕಡಿಮೆ ಮಾಡದೇ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆಂಬ ಬಗ್ಗೆ ಯಾರೂ ಬೇಕಾದರೂ ಸಲಹೆ ನೀಡಲಿ. ಅದು ಕಾರ್ಯಸಾಧುವಾಗಿದ್ದರೆ ಮುಕ್ತ ಮನಸ್ಸಿನಿಂದ ಮಾಸ್ಟರ್‌ ಪ್ಲಾನ್‌ನಲ್ಲಿ ಅಳವಡಿಸಿಕೊಳ್ಳುತ್ತೇವೆ’ ಎಂದು ಚೌಡೇಗೌಡ ಹೇಳಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘2011ರ ಜನ ಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1.1 ಕೋಟಿ. 2031ರ ಹೊತ್ತಿಗೆ ಇದು 2 ಕೋಟಿಯಾಗುವ ಅಂದಾಜಿದೆ’ ಎಂದರು.

‘ಈಗ ಜಾರಿಯಲ್ಲಿರುವ 2015ರ ಸಮಗ್ರ ಅಭಿವೃದ್ಧಿ ಯೋಜನೆಯು (ಸಿಡಿಪಿ) 1213 ಚದರ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ. ಅದರಲ್ಲಿ  ಸುಮಾರು 250 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ’ ಎಂದರು. ಹೆಚ್ಚಾಗುವ ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನ ಅಭಿವೃದ್ಧಿಯನ್ನು ಹೇಗೆ ಮಾಡಬೇಕೆಂಬುದನ್ನು ಜನರೇ ಹೇಳಲಿ. ಕೇಳಲು ನಾವು ಸಿದ್ಧರಿದ್ದೇವೆ’ ಎಂದರು.
*
ಸಮಗ್ರ ಸಂಚಾರ ವ್ಯವಸ್ಥೆಗೆ ಆದ್ಯತೆ
ಸಂಚಾರ ದಟ್ಟಣೆಯ ಸಮಸ್ಯೆಯ ತೀವ್ರತೆಯನ್ನು ಮನಗಂಡಿರುವ ಬಿಡಿಎ, 2031ರ ಮಾಸ್ಟರ್‌ ಪ್ಲಾನ್‌ನಲ್ಲಿ ಸಮಗ್ರ ಮತ್ತು ಸಮೂಹ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಮೆಟ್ರೊ ಸಾರಿಗೆ ವ್ಯವಸ್ಥೆಯ ಗರಿಷ್ಠ ಬಳಕೆ ಮಾಡಲು, ಮೆಟ್ರೊ ಇಲ್ಲದ ಪ್ರದೇಶಗಳಲ್ಲಿ ಬಸ್‌ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್‌) ನಿರ್ಮಿಸಲು ಒತ್ತು ನೀಡಲಾಗುವುದು. ಸಂಚಾರ ವ್ಯವಸ್ಥೆಯ ಸುಧಾರಣಾ ಕ್ರಮಗಳನ್ನು ರೂಪಿಸಲು ಸಾರಿಗೆ ಮತ್ತು ಪೊಲೀಸ್‌ ಇಲಾಖೆಗಳ ಜತೆ ಸಮನ್ವಯ ಸಾಧಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.