ADVERTISEMENT

ಒಣ – ಹಸಿ ವಿಂಗಡಿಸಿ ಕೊಡದಿದ್ದರೆ ಕಸ ಸಂಗ್ರಹ ಇಲ್ಲ

ಜನವರಿ 1ರಿಂದ ಹೊಸ ನಿಯಮ ಜಾರಿ: ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:03 IST
Last Updated 4 ಡಿಸೆಂಬರ್ 2016, 20:03 IST
ಆ್ಯಕ್ಟ್‌ ಫೈಬರ್‌ನೆಟ್‌ ವ್ಯವಸ್ಥಾಪಕ ನಿರ್ದೇಶಕ ಸುಂದರ್‌ರಾಜು ಮತ್ತು ಸಿಇಒ ಬಾಲಮಲ್ಲಾಡಿ ಅವರು ಜಿಮ್‌ ಉಪಕರಣದ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ವಿವರಿಸಿದರು. ಬಿಬಿಎಂಪಿ ಸದಸ್ಯೆ ಸುಮಂಗಳಾ ಕೇಶವ್‌, ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಸದಸ್ಯ ಜಯಪ್ರಕಾಶ್‌, ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಇದ್ದರು – ಪ್ರಜಾವಾಣಿ ಚಿತ್ರ
ಆ್ಯಕ್ಟ್‌ ಫೈಬರ್‌ನೆಟ್‌ ವ್ಯವಸ್ಥಾಪಕ ನಿರ್ದೇಶಕ ಸುಂದರ್‌ರಾಜು ಮತ್ತು ಸಿಇಒ ಬಾಲಮಲ್ಲಾಡಿ ಅವರು ಜಿಮ್‌ ಉಪಕರಣದ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ವಿವರಿಸಿದರು. ಬಿಬಿಎಂಪಿ ಸದಸ್ಯೆ ಸುಮಂಗಳಾ ಕೇಶವ್‌, ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಸದಸ್ಯ ಜಯಪ್ರಕಾಶ್‌, ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಸತಿ ಬಡಾವಣೆ ಒಳಗಡೆ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯಬಾರದೆಂದು ನಿಯಮವಿದೆ ಅದನ್ನು ಮೀರಿ ತಲೆಯತ್ತಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೇಳಿದರು.

ಅಶ್ವತ್ಥನಗರದಲ್ಲಿ ಭಾನುವಾರ ಉದ್ಯಾನ, ಅಂಗನವಾಡಿ, ಆರೋಗ್ಯ ಉಪಕೇಂದ್ರ ಮತ್ತು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನೆ ಕಟ್ಟಲು ಅನುಮತಿ ಪಡೆದಿರುತ್ತಾರೆ. ಆದರೆ, ಅಲ್ಲಿ ಹಠಾತ್‌ ಆಗಿ ಮಸಾಜ್‌ ಪಾರ್ಲರ್‌, ಶಾಲೆ, ಬ್ಯಾಂಕ್‌ ಹೀಗೆ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ವಸತಿ ಬಡಾವಣೆಯಲ್ಲಿ ವಾಹನ ನಿಲುಗಡೆ ಹೆಚ್ಚಾಗುತ್ತದೆ. ನಿವಾಸಿಗಳಿಗೆ ತೊಂದರೆ ಆಗುತ್ತದೆ. ಪಾಲಿಕೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಕಂಡು ಬಂದರೆ ಜೈಲು ಶಿಕ್ಷೆ ಖಂಡಿತ’ ಎಂದು ಎಚ್ಚರಿಸಿದರು.

ADVERTISEMENT

‘ನಗರದಲ್ಲಿ ಶೇ 30ರಿಂದ 40ರಷ್ಟು ಕಸ ಮಾತ್ರ ವಿಂಗಡಣೆ ಆಗುತ್ತದೆ. ಅದಕ್ಕಾಗಿ ಕಸ ವಿಂಗಡಣೆ ಮಾಡದ ಮನೆಗಳಿಂದ ಜನವರಿ 1ರಿಂದ ಕಸ ತೆಗೆದುಕೊಳ್ಳುವುದನ್ನು  ನಿಲ್ಲಿಸಲಾಗುವುದು’ ಎಂದು ಹೇಳಿದರು. ವಿವಿಧ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ‘ಯಾವುದೇ ಜನಪರ ಯೋಜನೆಗಳು ಕೇವಲ ಸರ್ಕಾರ, ಪಾಲಿಕೆ, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಅದಕ್ಕೆ ಕೈಜೋಡಿಸಬೇಕು. ಆಗಲೇ ಅದು ಪರಿಪೂರ್ಣಗೊಳ್ಳುತ್ತದೆ’ ಎಂದರು.

‘ಬೆಂಗಳೂರಿನ ಪರಿವರ್ತನೆಗೆ ಜನರು ಸಹಕರಿಸಬೇಕು. ಇಲ್ಲದಿದ್ದರೆ ಒಂದು ಮಾದರಿ ನಗರವನ್ನಾಗಿ ಮಾಡಲು ಸಾಧ್ಯವಿಲ್ಲ. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರವನ್ನು ‘ಬ್ಲ್ಯಾಕ್‌ ಸ್ಪಾಟ್‌’ ಮುಕ್ತವಾಗಿಸಿದ್ದಾರೆ’ ಎಂದು ಅಭಿನಂದಿಸಿದರು.

ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಬಿಬಿಎಂಪಿಯಿಂದ ನಿರ್ಮಾಣವಾಗಿರುವ ಉದ್ಯಾನಕ್ಕೆ ತೆರಿಗೆ ಮತ್ತು ಹಣಕಾಸು ಸಮಿತಿ ಮುಖ್ಯಸ್ಥರಾಗಿದ್ದ ಡಾ.ಎ.ಎಸ್‌. ಶಿವಪ್ರಸಾದ್‌ ಅವರ ಹೆಸರಿಡಬೇಕು ಎಂದು ಅರಮನೆ ವಾರ್ಡ್‌ನ ಎಲ್ಲಾ ಜನ ಒಮ್ಮತದಿಂದ ಸೂಚಿಸಿದ್ದಾರೆ. ಇದು ಖುಷಿಯ ವಿಚಾರ’ ಎಂದು ತಿಳಿಸಿದರು.

‘ಬಿಬಿಎಂಪಿ ನಿರ್ಮಾಣ ಮಾಡಿರುವ ಈ ಉದ್ಯಾನದ ನಿರ್ವಹಣೆಯನ್ನು ಆ್ಯಕ್ಟ್‌ ಫೈಬರ್‌ನೆಟ್‌ ಕನೆಕ್ಷನ್‌ ಕಂಪೆನಿ ವಹಿಸಿಕೊಂಡಿದೆ. ಅಲ್ಲದೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿನ 7 ವಾರ್ಡ್‌ಗಳಲ್ಲಿ ಹೊಸದಾಗಿ ಹಾಕಲಾಗಿರುವ ಒಟ್ಟು 350 ಸಿ.ಸಿ.ಟಿವಿ ಕ್ಯಾಮೆರಾಗಳಿಗೆ ಉಚಿತ ಇಂಟರ್‌ನೆಟ್‌ ಸಂಪರ್ಕ ನೀಡುತ್ತಿದೆ’ ಎಂದು ಹೇಳಿದರು.

ಮನೆಗಳಲ್ಲೇ ಕಸ ಸಂಸ್ಕರಣೆ
‘ತ್ಯಾಜ್ಯ ಸಂಸ್ಕರಣಾ ಘಟಕಗಳಿರುವ ಸ್ಥಳಗಳಲ್ಲಿ ಕಸ ಹಾಕದಂತೆ ಜನ ಪ್ರತಿಭಟಿಸುತ್ತಿದ್ದಾರೆ. ಒಣಕಸವನ್ನು ಮರುಬಳಕೆ ಮಾಡಲು ಕೆಲವು ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಸಿ ಕಸ ವಿಲೇವಾರಿಯೇ ದೊಡ್ಡ ತಲೆನೋವಾಗಿದೆ. ಅದಕ್ಕಾಗಿ ಹಸಿ ಕಸವನ್ನು ಮನೆಗಳಲ್ಲಿಯೇ ಗೊಬ್ಬರವನ್ನಾಗಿಸಿ ಅದನ್ನು  ಬಡಾವಣೆ ಉದ್ಯಾನಗಳಿಗೆ ನೀಡಲು ಯೋಜನೆ ರೂಪಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವು
‘ಸರ್ವೇ ಅಧಿಕಾರಿಗಳು ವರ್ಗಾವಣೆಗೊಂಡಿದ್ದರಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಈಗ ಅವರನ್ನು ವಾಪಸ್‌ ಕರೆಸಿಕೊಳ್ಳಲಾಗಿದ್ದು, ಮುಂದಿನ ವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾಗಿಲಿದೆ’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.