ADVERTISEMENT

ಕದ್ದ ಚಿನ್ನ–ಬೆಳ್ಳಿ ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದರು!

ಹೊಂಗಸಂದ್ರದ ‘ಪವನ್‌ ಜ್ಯುವೆಲರ್ಸ್‌್’ ಮಳಿಗೆಗೆ ಕನ್ನ ಕೊರೆದು ಆಭರಣ ಹೊತ್ತೊಯ್ದಿದ್ದ ಗ್ಯಾಂಗ್ ಸೆರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 19:54 IST
Last Updated 28 ಜುಲೈ 2017, 19:54 IST
ಕದ್ದ ಚಿನ್ನ–ಬೆಳ್ಳಿ ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದರು!
ಕದ್ದ ಚಿನ್ನ–ಬೆಳ್ಳಿ ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದರು!   

ಬೆಂಗಳೂರು: ಹೊಂಗಸಂದ್ರ ಮುಖ್ಯರಸ್ತೆಯಲ್ಲಿರುವ ‘ಪವನ್ ಜ್ಯುವೆಲರ್ಸ್‌’ ಆಭರಣ ಮಳಿಗೆಗೆ ಕನ್ನ ಕೊರೆದು ಎರಡು ಕೆ.ಜಿ.ಚಿನ್ನ ಹಾಗೂ 20 ಕೆ.ಜಿ ಬೆಳ್ಳಿ ವಸ್ತುಗಳನ್ನು ಹೊತ್ತೊಯ್ದಿದ್ದ ಮೂವರು ಆರೋಪಿಗಳು ಬೊಮ್ಮನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಾರಾಷ್ಟ್ರದ ಪ್ರದೀಪ್ ದಿಲೀಪ್ ಮೋಲೆ (27), ಪ್ರಫುಲ್ ಚಂದ್ರಕಾಂತ್ ಶಿಂಧೆ (35) ಹಾಗೂ ಜಾರ್ಖಂಡ್‌ನ ಗೌರಂಗ್ ಮಂಡಲ್ ಅಲಿಯಾಸ್ ಗೋಪಿ (37) ಎಂಬುವರನ್ನು ಬಂಧಿಸಿ, ₹ 70 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಲ ಮಾಡಿ ಫ್ಲ್ಯಾಟ್ ಖರೀದಿ: ಮುಂಬೈನಲ್ಲಿ ಆಟೊ ಚಾಲಕನಾಗಿದ್ದ ಪ್ರಫುಲ್, ಅಲ್ಲಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನರ್ತಕಿಯರನ್ನು ಪೂರೈಸುವ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತಿದ್ದ. ಸ್ನೇಹಿತರು, ಸಂಬಂಧಿಗಳ ಬಳಿ ಸಾಲ ಪಡೆದು ಇತ್ತೀಚೆಗೆ ಫ್ಲ್ಯಾಟ್ ಖರೀದಿಸಿದ್ದ ಆತ, ಸಾಲ ತೀರಿಸಲು ಬ್ಯಾಂಕ್ ಅಥವಾ ಆಭರಣ ಮಳಿಗೆಗೆ ಕನ್ನ ಹಾಕಲು ತೀರ್ಮಾನಿಸಿದ್ದ.

ADVERTISEMENT

ಎರಡು ತಿಂಗಳ ಹಿಂದೆ ನಗರಕ್ಕೆ ಬಂದು ಬಿಳೇಕಹಳ್ಳಿಯ ಸನಾ ಮಾರ್ಕೆಟ್ ಬಳಿ ವಾಸವಾಗಿದ್ದ ಪ್ರಫುಲ್, 15 ದಿನಗಳ ಬಳಿಕ ಪ್ರದೀಪ್ ಹಾಗೂ  ಪಶ್ಚಿಮ ಬಂಗಾಳದ ಸ್ನೇಹಿತ ಮನ್ಸೂರ್ ಶೇಖ್ ಎಂಬುವರನ್ನೂ ನಗರಕ್ಕೆ ಕರೆಸಿಕೊಂಡಿದ್ದ. ಒಂದೆರಡು ದಿನ ರಾತ್ರಿ ಸಮಯದಲ್ಲಿ ಮಡಿವಾಳ, ಕೋರಮಂಗಲ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಪ್ರದೇಶಗಳಲ್ಲಿ ಸುತ್ತಾಡಿದ್ದ ಆರೋಪಿಗಳು,  ಸುಲಭವಾಗಿ ಕಳವು ಮಾಡಲು ಸಾಧ್ಯವಿರುವ ಆಭರಣ ಮಳಿಗೆಗಳನ್ನು ಗುರುತಿಸಿದ್ದರು.

ಹೊಂಗಸಂದ್ರ ಮುಖ್ಯರಸ್ತೆಯ ‘ಪವನ್ ಜ್ಯುವೆಲರ್ಸ್‌’ ಮಳಿಗೆಗೆ ಹೊಂದಿಕೊಂಡಿದ್ದ ಮನೆಯೊಂದು ಬಾಡಿಗೆಗೆ ಇರುವ ವಿಚಾರ ತಿಳಿದುಕೊಂಡ ಅವರು, ತಾವು ಆ ಮನೆ ಸೇರಿಕೊಂಡರೆ ಕೆಲಸ ಸುಲಭವಾಗುತ್ತದೆಂದು ನಿರ್ಧರಿಸಿದ್ದರು. ಜೂನ್ 24ರಂದು ವ್ಯಾಪಾರಿಗಳ ಸೋಗಿನಲ್ಲಿ ಮನೆ ಮಾಲೀಕ ಓಬೇಶ್ ಅವರನ್ನು ಭೇಟಿಯಾದ ಆ ಮೂವರು, ‘ನಾವು ಉತ್ತರಪ್ರದೇಶದವರು. ಮಡಿವಾಳ ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತೇವೆ. ಸದ್ಯ ಆರ್‌.ಟಿ.ನಗರದಲ್ಲಿ ನೆಲೆಸಿದ್ದೇವೆ. ಪ್ರತಿದಿನ ಅಲ್ಲಿಂದ ಮಾರ್ಕೆಟ್‌ಗೆ ಬರುವುದು ಕಷ್ಟವಾಗುತ್ತಿದೆ. ಹೀಗಾಗಿ, ಈ ಪ್ರದೇಶದಲ್ಲಿ ಮನೆ ಹುಡುಕುತ್ತಿದ್ದೇವೆ’ ಎಂದು ಹೇಳಿದ್ದರು.

ಅವರ ಮಾತನ್ನು ನಂಬಿದ್ದ ಓಬೇಶ್, ₹ 25 ಸಾವಿರ ಮುಂಗಡ ಪಡೆದು ಮನೆ ಬಾಡಿಗೆ ಕೊಟ್ಟಿದ್ದರು. ಹೀಗೆ, ಆ ಮನೆ  ಸೇರಿಕೊಂಡ ಆರೋಪಿಗಳು, ಗೌರಂಗ್ ಮಂಡಲ್ ಹಾಗೂ ಇನ್ನಿಬ್ಬರು ಸಹಚರರನ್ನೂ ಜಾರ್ಖಂಡ್‌ನಿಂದ ಕರೆಸಿಕೊಂಡಿದ್ದರು. ಅವರು ಗ್ಯಾಸ್ ಕಟರ್ ಹಾಗೂ  ಸಿಲಿಂಡರ್‌  ಸಮೇತ ಮನೆಗೆ ಬಂದಿದ್ದರು. ಅವರ ಬಗ್ಗೆ ಮಾಲೀಕರು ಪ್ರಫುಲ್ ಬಳಿ ವಿಚಾರಿಸಿದಾಗ, ‘ನಮ್ಮ ಬಾಲ್ಯ ಸ್ನೇಹಿತರು. ಒಂದೆರಡು ದಿನ ಇದ್ದು ಹೋಗುತ್ತಾರೆ’ ಎಂದು ಆತ ಸುಳ್ಳು ಹೇಳಿದ್ದ.

ಕಾರ್ಯಾಚರಣೆ ಶುರು: ಈ ರೀತಿಯಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡ ಗ್ಯಾಂಗ್, ಮೂರ್ನಾಲ್ಕು ದಿನ ರಾತ್ರಿ ಮನೆ–ಮಳಿಗೆ ನಡುವಿನ ಗೋಡೆಯನ್ನು ಸ್ವಲ್ಪ ಸ್ವಲ್ಪವೇ ಕೊರೆಯುತ್ತ ಬಂದಿತ್ತು. ಜುಲೈ 29ರ ರಾತ್ರಿ ಮಳಿಗೆ ಮಾಲೀಕ ವಿನೋದ್ ಅಂಗಡಿಯ ಷಟರ್ ಎಳೆದು ಹೋಗುತ್ತಿದ್ದಂತೆಯೇ, ಗೋಡೆಯನ್ನು ಪೂರ್ಣವಾಗಿ ಕೊರೆದು ಒಳಗೆ ನುಗ್ಗಿದ್ದರು.

ಶೋಕೇಸ್, ಡ್ರಾಯರ್‌ಗಳಲ್ಲಿದ್ದ ಬೆಳ್ಳಿ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡ ಆರೋಪಿಗಳು, ನಂತರ ಗ್ಯಾಸ್ ಕಟರ್‌ನಿಂದ ಅಲ್ಮೆರಾವನ್ನೂ ಕತ್ತರಿಸಿ ಚಿನ್ನಾಭರಣ ತೆಗೆದುಕೊಂಡಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದೆಂದು ಮಳಿಗೆಯ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಡಿವಿಆರ್ ಪೆಟ್ಟಿಗೆಯನ್ನೂ ಜಖಂಗೊಳಿಸಿದ್ದರು. ನಂತರ ತಾವು ಗೋಡೆ ಕೊರೆದಿದ್ದ ಜಾಗದಿಂದಲೇ ಮತ್ತೆ ಮನೆಗೆ ವಾಪಸ್ ಹೋಗಿ,  ರಾತ್ರೋರಾತ್ರಿ ಊರು ಬಿಟ್ಟಿದ್ದರು. ಮರುದಿನ ಬೆಳಿಗ್ಗೆ ವಿನೋದ್ ಅವರು ಮಳಿಗೆಗೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿತ್ತು.

ಕೊಟ್ಟಿಗೆಯಲ್ಲಿ ಹೂತಿಟ್ಟರು!: ಕದ್ದ ಆಭರಣಗಳೊಂದಿಗೆ ರೈಲಿನಲ್ಲಿ ಮಹಾರಾಷ್ಟ್ರಕ್ಕೆ ತೆರಳಿದ್ದ ಆರೋಪಿಗಳು, ಮೊದಲು ಕೊಲ್ಲಾಪುರ ಜಿಲ್ಲೆಯ ಜುನಾ–ಬುದುವಾರ್ ಪೇಟ್ ಧೋರಸ್ಕ್‌ ಚೌಕ್‌ನಲ್ಲಿರುವ (ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ) ಪ್ರದೀಪ್‌ ಮನೆಗೆ ಹೋಗಿದ್ದರು. ಅಲ್ಲಿ ದನದ ಕೊಟ್ಟಿಗೆಯಲ್ಲಿ ಗುಂಡಿ ತೆಗೆದು ಒಡವೆಗಳನ್ನು ಹೂತಿಟ್ಟು ಅವರು, 4  ದಿನಗಳ ಬಳಿಕ ಅವುಗಳನ್ನು ಹಂಚಿಕೊಂಡು ತಮ್ಮ ತಮ್ಮ ರಾಜ್ಯಗಳಿಗೆ ಮರಳಿದ್ದರು.

ಮುಂಬೈ ಸ್ನೇಹಿತನಿಂದ ಸುಳಿವು
ಆರೋಪಿಗಳೆಲ್ಲ ಬೇರೆ ಬೇರೆ ರಾಜ್ಯದವರೇ ಆಗಿದ್ದರೂ, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಿತರಾಗಿದ್ದರು. ಅಂತೆಯೇ ಪ್ರಫುಲ್‌ಗೆ ಅಲ್ಲಿ ರಾಜು ಎಂಬುವರೊಂದಿಗೂ ಸ್ನೇಹ ಬೆಳೆದಿತ್ತು. ಈಗ ಪೊಲೀಸರಿಗೆ ಅವರು  ನೀಡಿದ ಸುಳಿವೇ, ಆರೋಪಿಗಳಿಗೆ ಜೈಲಿನ ದಾರಿ ತೋರಿಸಿದೆ.
ರಾಜು ಅವರು 4 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹೊಂಗಸಂದ್ರದಲ್ಲಿ ನೆಲೆಸಿದ್ದರು.  ಕಳ್ಳತನ ಮಾಡುವ ಉದ್ದೇಶವನ್ನು ಇಟ್ಟುಕೊಂಡು ನಗರಕ್ಕೆ ಬಂದಿದ್ದ ಪ್ರಫುಲ್‌ಗೆ, ಅವರೇ ಬಿಳೇಕಹಳ್ಳಿಯಲ್ಲಿ ಮನೆ ಬಾಡಿಗೆ ಕೊಡಿಸಿದ್ದರು. ಆದರೆ, ಗೆಳೆಯ ನಗರಕ್ಕೆ ಬಂದಿರುವ ಉದ್ದೇಶದ ಬಗ್ಗೆ ಅವರಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

‘ಕಳ್ಳತನ ನಡೆದ ಬಳಿಕ ಹೊಂಗಸಂದ್ರ ಮುಖ್ಯರಸ್ತೆಯ 22 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು, 15 ದಿನಗಳ ದೃಶ್ಯಗಳನ್ನು  ಪರಿಶೀಲಿಸಿದೆವು. ಅದರಲ್ಲಿ ಕಾಣಿಸಿಕೊಂಡ ಎಲ್ಲ ಅನುಮಾನಾಸ್ಪದ ವ್ಯಕ್ತಿಗಳ ಚಹರೆಯನ್ನು ಮುದ್ರಿಸಿಕೊಂಡು, ಮನೆ ಮಾಲೀಕರಿಗೆ ತೋರಿಸಿದಾಗ ಅವರು ಪ್ರಫುಲ್‌ನನ್ನು ಗುರುತಿಸಿದರು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಫುಲ್ ಹಾಗೂ ರಾಜು ಹೊಂಗಸಂದ್ರದ ಆಸ್ಪತ್ರೆಯೊಂದರ ಒಳಗೆ ಹೋಗುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರಿಬ್ಬರ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ರಾಜು  ಮನೆ ವಿಳಾಸ ಸಿಕ್ಕಿತು.’

‘ನಂತರ ಅವರನ್ನು ಠಾಣೆಗೆ ಕರೆಸಿವಿಚಾರಣೆ ಮಾಡಿದೆವು. ಆಗ, ‘ಪ್ರಫುಲ್ ನನ್ನ ಸ್ನೇಹಿತ. ಮುಂಬೈನಲ್ಲಿ ಆಟೊ ಓಡಿಸುತ್ತಾನೆ. ತಾಯಿಗೆ ಹುಷಾರಿಲ್ಲವೆಂದು ಹೇಳಿ ರಾಜ್ಯಕ್ಕೆ ಹೋಗಿದ್ದಾನೆ. ಆತ ಕಳ್ಳತನ ಮಾಡಿರುವ ಸಂಗತಿ ಗೊತ್ತಿಲ್ಲ’ ಎಂದು ಹೇಳಿಕೆ ಕೊಟ್ಟರು. ಅಲ್ಲದೆ, ಪ್ರಫುಲ್‌ನ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದರು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

ಆ ಸಂಖ್ಯೆ ಪಡೆದು ‘ಟವರ್ ಡಂಪ್’ ತನಿಖೆ ಪ್ರಾರಂಭಿಸಿದ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್ ನೇತೃತ್ವದ ತಂಡ, ನಂತರ  ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಹಾಗೂ ಪಂಡರಾಪುರದಲ್ಲಿ ಪ್ರಫುಲ್‌ಗಾಗಿ ಶೋಧ ನಡೆಸಿತ್ತು. ಆದರೆ, ಪದೇ ಪದೇ ಮೊಬೈಲ್ ಸಂಪರ್ಕ ಕಡಿತವಾಗುತ್ತಿದ್ದ ಕಾರಣ ಆರೋಪಿ ಇರುವ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. ಜುಲೈ 22 ರಂದು ಆತ ‘ಗುವಾಹಟಿ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ಬೆಳಗಾವಿಯಲ್ಲಿ ಆ ರೈಲನ್ನು ಹತ್ತಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಜಾರ್ಖಂಡ್‌ನ ರಾಧಾನಗರದಲ್ಲಿ ಗೌರಂಗ್‌ ಮಂಡಲ್‌ನನ್ನು ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರದೀಪ್‌ನನ್ನು ಬಂಧಿಸಿದ್ದಾರೆ.

ಮುಂಬೈ, ಕೇರಳದಲ್ಲೂ ಕಳ್ಳತನ
‘ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ ಗ್ಯಾಸ್ ಕಟರ್ ಕೆಲಸ ಮಾಡುವ ಗೌರಂಗ್ ಮಂಡಲ್, ಕೇರಳ ಹಾಗೂ ಮುಂಬೈನ ಆಭರಣ ಮಳಿಗೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಹೀಗಾಗಿ, ಆರೋಪಿಯ ಬಂಧನದ ಬಗ್ಗೆ ಆ ರಾಜ್ಯಗಳ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.