ADVERTISEMENT

ಕೊಠಡಿಯಲ್ಲಿ ಹರಡಿದ ಕ್ರಿಮಿನಾಶಕ ಸಹಾಯಕ ಲೆಕ್ಕಿಗ ಸಾವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:39 IST
Last Updated 3 ಡಿಸೆಂಬರ್ 2016, 19:39 IST

ಬೆಂಗಳೂರು: ಪ್ರಕಾಶನಗರದ ಮನೆಯೊಂದರ ಕೊಠಡಿಯಲ್ಲಿ ಹರಡಿದ ಕ್ರಿಮಿನಾಶಕದ ವಾಸನೆ ಕುಡಿದು ರಾಜೇಶ್ (27) ಎಂಬುವರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

‘ಹಲಸೂರಿನ ಖಾಸಗಿ ಕಂಪೆನಿಯಲ್ಲಿ ಸಹಾಯಕ ಲೆಕ್ಕಿಗರಾಗಿದ್ದ ರಾಜೇಶ್‌,  ಪ್ರಕಾಶನಗರದಲ್ಲಿ ವಾಸವಿದ್ದರು. ಪೋಷಕರು ಬೇರೆ ಊರಿಗೆ ಹೋಗಿದ್ದಾಗ  ಈ ಘಟನೆ ನಡೆದಿದೆ’ ಎಂದು ರಾಜಾಜಿನಗರ ಪೊಲೀಸರು ತಿಳಿಸಿದರು.

‘ಕೆಲಸ ಮುಗಿಸಿ ಶುಕ್ರವಾರ ರಾತ್ರಿ ಮನೆಗೆ ಬಂದಿದ್ದ ರಾಜೇಶ್‌, ತಮ್ಮ ಕೊಠಡಿಯಲ್ಲಿ ತಿಗಣೆ ಕಾಟ ಹೆಚ್ಚಿದ್ದರಿಂದ ಕ್ರಿಮಿನಾಶಕ ಸಿಂಪಡಿಸಿದ್ದರು. ಬಳಿಕ ಆ ಬಾಟಲಿಯನ್ನು ತಲೆ ಪಕ್ಕದಲ್ಲೇ ಇಟ್ಟುಕೊಂಡು ಮಲಗಿದ್ದರು. ಈ ವೇಳೆ ಬಾಗಿಲು, ಕಿಟಕಿಗಳನ್ನು ಬಂದ್‌ ಮಾಡಿದ್ದರು.’

ADVERTISEMENT


‘ಬೆಳಿಗ್ಗೆ 6ರ ಸುಮಾರಿಗೆ ಎಚ್ಚರಗೊಂಡ ರಾಜೇಶ್‌ ಅವರಿಗೆ ಮೈ, ಕೈ ನೋವು ಶುರುವಾಗಿ ತಲೆ ಸುತ್ತುತ್ತಿತ್ತು.  ಭಯಗೊಂಡ ಅವರು ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದರು. ವೆಸ್ಟ್‌್ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಸಂಬಂಧಿಕರು, ಮನೆಗೆ ಬಂದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.’

‘ಚಿಕಿತ್ಸೆಗೆ ಸ್ಪಂದಿಸದೆ ರಾಜೇಶ್‌  ಅಸುನೀಗಿದ್ದಾರೆ. ಕ್ರಿಮಿನಾಶಕದ ವಾಸನೆ ಕುಡಿದು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ’.
‘ಸದ್ಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಹಸ್ತಾಂತರಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.