ADVERTISEMENT

ಗಡಿಪಾರಾದ ಭಾರತೀಯರ ವಿಚಾರಣೆ

ಸಿರಿಯಾಕ್ಕೆ ಅತಿಕ್ರಮ ಪ್ರವೇಶ ಯತ್ನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 20:01 IST
Last Updated 31 ಜನವರಿ 2015, 20:01 IST

ಬೆಂಗಳೂರು: ಟರ್ಕಿ ಮೂಲಕ ಸಿರಿಯಾಕ್ಕೆ ಅತಿಕ್ರಮ ಪ್ರವೇಶ ಮಾಡುವ ಯತ್ನದಲ್ಲಿ ಸಿಕ್ಕಿಬಿದ್ದು, ಗಡಿಪಾರಾಗಿರುವ ದೇಶದ ಒಂಬತ್ತು ಮಂದಿಯನ್ನು ನಗರ ಪೊಲೀಸರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡಿನ ಚೆನ್ನೈ ಮೂಲದ ಮೊಹಮ್ಮದ್‌ ಅಬ್ದುಲ್‌ ಅಹದ್‌ (46), ಅವರ ಪತ್ನಿ ಮತ್ತು ಐದು ಮಕ್ಕಳು, ತೆಲಂಗಾಣದ ಜಾವೇದ್‌ ಬಾಬಾ (24) ಹಾಗೂ ರಾಜ್ಯದ ಹಾಸನ ಜಿಲ್ಲೆಯ ಇಬ್ರಾಹಿಂ ನೌಫಾಲ್‌ (24) ಎಂಬುವರು ಪ್ರವಾಸಿ ವೀಸಾದಲ್ಲಿ 2014ರ ಡಿ.24ರಂದು ಕೆಐಎಎಲ್‌ನಿಂದ ಟರ್ಕಿಯ ಇಸ್ತಾನ್‌ಬುಲ್‌ಗೆ ಹೋಗಿದ್ದರು.

ನಂತರ ಅಲ್ಲಿಂದ ಅಕ್ರಮವಾಗಿ ಸಿರಿಯಾಕ್ಕೆ ಹೊರಟಿದ್ದ ಅವರನ್ನು ಟರ್ಕಿ ಪೊಲೀಸರು ಗಡಿ ಭಾಗದಲ್ಲಿ ಬಂಧಿಸಿ, ಗಡಿಪಾರು ಮಾಡಿದ್ದರು. ಅಲ್ಲದೇ, ಅವರ ಬಗ್ಗೆ ದೇಶದ ಗುಪ್ತಚರ ದಳಕ್ಕೆ ಮಾಹಿತಿ ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಶುಕ್ರವಾರ (ಜ.30) ವಿಮಾನದಲ್ಲಿ ಕೆಐಎಎಲ್‌ಗೆ ಬಂದಿಳಿದ ಆ ಒಂಬತ್ತು ಮಂದಿಯನ್ನು ವಶಕ್ಕೆ ತೆಗೆದು­ಕೊಳ್ಳಲಾಯಿತು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಹೇಳಿದ್ದಾರೆ.

‘ಅಮೆರಿಕದ ಕೆನಡಿ ವೆಸ್ಟರ್ನ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಹದ್‌ ಅವರು ಅಲ್ಲಿಯೇ ಸುಮಾರು 10 ವರ್ಷಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಜಾವೇದ್‌ ಮತ್ತು ನೌಫಾಲ್‌ ಅವರು ಬಿ.ಇ ಪದವೀಧರರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಅವರು ಯಾವ ಕಾರಣಕ್ಕಾಗಿ ಟರ್ಕಿಗೆ ಹೋಗಿದ್ದರು ಮತ್ತು ಸಿರಿಯಾಕ್ಕೆ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿದರು ಎಂಬ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಅವರ ಪೂರ್ವಾಪರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ಸಹ ಅವರ ವಿಚಾರಣೆ ನಡೆಸುತ್ತಿದ್ದಾರೆ’ ಎಂದು ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.