ADVERTISEMENT

ಟಿಟಿಯಲ್ಲಿ ಎರಡು ಗಂಟೆ ಸುತ್ತಾಡಿಸಿದ್ದ ಅರೋಪಿಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 20:04 IST
Last Updated 6 ಅಕ್ಟೋಬರ್ 2015, 20:04 IST

ಬೆಂಗಳೂರು: ಆರೋಪಿಗಳು ಯುವತಿಯನ್ನು ಟಿಟಿಗೆ ಹತ್ತಿಸಿಕೊಂಡ ನಂತರ ಸುಮಾರು ಎರಡು ಗಂಟೆಗಳ ಕಾಲ ಅವರನ್ನು ಸುತ್ತಾಡಿಸಿದ್ದರು ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ಅವರು ತಿಳಿಸಿದರು.

ಯುವತಿಯು ಟಿಟಿಗೆ ಹತ್ತಿದ ಕೂಡಲೇ ಪಿಜಿಗೆ ಹೋಗುತ್ತಿದ್ದೇನೆ ಎಂದು ಮೊಬೈಲ್‌ನಿಂದ ಮನೆಗೆ ಕರೆ ಮಾಡಿದ್ದರು ಎಂದು ಅವರು ಹೇಳಿದರು. 

ಯುವತಿಯು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ಅವರು ಉಳಿದುಕೊಂಡಿದ್ದ ಪಿಜಿಗೆ ಮೂರು ಕಿ.ಮೀ ಅಂತರ ಇದೆ.  ಮೂರು ತಿಂಗಳ ಹಿಂದೆ ಯುವತಿ ನಗರಕ್ಕೆ ಬಂದಿದ್ದರಿಂದ ಅವರಿಗೆ ಇಲ್ಲಿನ ಸ್ಥಳಗಳ ಪರಿಚಯ ಸರಿಯಾಗಿ ಇರಲಿಲ್ಲ. ಆರೋಪಿಗಳು ಬೊಮ್ಮನಹಳ್ಳಿ ಜಂಕ್ಷನ್ ಬಳಿ ಅವರನ್ನು ಹತ್ತಿಸಿಕೊಂಡು ನಂತರ ಮಾರ್ಗ ಬದಲಿಸಿದ್ದಾರೆ. ಇದು ಮೊದಲು ಯುವತಿಗೆ ಗೊತ್ತಾಗಿಲ್ಲ. ಮಾರ್ಗವನ್ನು ಬದಲಾಯಿಸಿರುವುದು ತಿಳಿಯುತ್ತಿದ್ದಂತೆ ಅವರು ಕೂಗಿಕೊಂಡಿದ್ದಾರೆ. ಆಗ ಆರೋಪಿಗಳು ಚೀರಾಡದಂತೆ ಬೆದರಿಕೆ ಹಾಕಿದ್ದಾರೆ.

ಅತ್ಯಾಚಾರ ಎಸಗುವ ವೇಳೆ ಯುವತಿ ಪ್ರತಿರೋಧ ತೋರಿದ್ದಾರೆ. ಅಗ ಆರೋಪಿಗಳು ಯುವತಿಯ ಮುಖದ ಮೇಲೆ ಕೈಯಿಂದ ಗುದ್ದಿದ್ದಾರೆ. ಹೀಗಾಗಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.

ಕಂಪೆನಿಗೆ ನೋಟಿಸ್‌: ಯುವತಿ ಕೆಲಸ ಮಾಡುತ್ತಿದ್ದ ಬಿಪಿಒ ಕಂಪೆನಿಯು ಉದ್ಯೋಗಿಗಳನ್ನು ರಾತ್ರಿ ಮನೆಗೆ ಬಿಡಲು ಕ್ಯಾಬ್‌ ವ್ಯವಸ್ಥೆ ಮಾಡಿರಲಿಲ್ಲ. ಮಹಿಳೆಯರ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಕಂಪೆನಿಗೆ ನೋಟಿಸ್‌ ನೀಡಲಾಗುವುದು. ಅಲ್ಲದೇ, ಉದ್ಯೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಕಾರ್ಮಿಕ ಇಲಾಖೆಯ ಮಾರ್ಗಸೂಚಿಗಳನ್ನು ಕಂಪೆನಿ ಪಾಲಿಸಿಲ್ಲ ಎಂದು  ಎಂದು ಮೇಘರಿಕ್‌ ತಿಳಿಸಿದರು.

ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ: ಬುಧವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿದ ಮಡಿವಾಳ ಠಾಣೆ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಮೇಘರಿಕ್‌ ಹೇಳಿದರು.

ಬಾಡಿಗೆ ಟ್ರಾವೆಲರ್
ಆರೋಪಿಗಳು ಟೆಂಪೊ ಟ್ರಾವೆಲರನ್ನು ಬಾಡಿಗೆ ಪಡೆದು ಓಡಿಸುತ್ತಿದ್ದರು.  ಅವರು ಯಾವುದೇ ನಿರ್ದಿಷ್ಟ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡಿರಲಿಲ್ಲ. ಪ್ರತಿದಿನ ಒಂದೊಂದು ಕಂಪೆನಿಗೆ ಬಾಡಿಗೆ ಹೋಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪೆನಿಗಳಿಗೆ ಉದ್ಯೋಗಿಗಳನ್ನು ಬಿಟ್ಟ ನಂತರ ಹೊರ ವರ್ತುಲ ರಸ್ತೆಯಲ್ಲಿ  ಬಾಡಿಗೆಗೆ ಹೋಗುತ್ತಿದ್ದರು. ಅದೇ ರೀತಿ ಶನಿವಾರ (ಅ.3) ರಾತ್ರಿ ಅವರು ದೊಮ್ಮಲೂರು ಕಡೆಗೆ ಹೋಗುತ್ತಿದ್ದಾಗ  ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಯುವತಿ ನಿಂತಿರುವುದನ್ನು ನೋಡಿರುವ ಆರೋಪಿಗಳು, ಡ್ರಾಪ್‌ ಕೊಡುವುದಾಗಿ ಅವರನ್ನು ಹತ್ತಿಸಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

* ಯುವತಿಯಿಂದ ಟಿಟಿಯ ನೋಂದಣಿ ಸಂಖ್ಯೆ ಬಗ್ಗೆ ಮಾಹಿತಿ

* ಅದನ್ನು ಆಧರಿಸಿ ಆರ್‌ಟಿಒ ಕಚೇರಿಗಳಲ್ಲಿ ಪರಿಶೀಲನೆ
* ಟಿಟಿಗಾಗಿ ಮಡಿವಾಳ, ಬೊಮ್ಮನಹಳ್ಳಿ, ಎಚ್‌ಎಸ್ಆರ್ ಲೇಔಟ್ ಸುತ್ತಮುತ್ತ ತಪಾಸಣೆ
* ಸಂಜೆ 4.30ರ ಸುಮಾರಿಗೆ ಎಚ್ಎಸ್‌ಆರ್‌ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ ಬಳಿ ಇರುವ ಬಗ್ಗೆ ಸುಳಿವು
* ಅಲ್ಲಿಗೆ ತೆರಳಿ ಅರೋಪಿಗಳ ಬಂಧನ, ಟಿಟಿ ಜಪ್ತಿ
* ಎಚ್ಎಸ್‌ಆರ್ ಲೇಔಟ್‌ನಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಕಡೆಗೆ ಹೋಗುತ್ತಿದ್ದ ಅರೋಪಿಗಳು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.