ADVERTISEMENT

ನೋಟಿಸ್‌ಗೆ ಹೈಕೋರ್ಟ್‌ ತಡೆ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:00 IST
Last Updated 29 ಏಪ್ರಿಲ್ 2017, 20:00 IST
ನೋಟಿಸ್‌ಗೆ ಹೈಕೋರ್ಟ್‌ ತಡೆ
ನೋಟಿಸ್‌ಗೆ ಹೈಕೋರ್ಟ್‌ ತಡೆ   

ಬೆಂಗಳೂರು: ‘ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪರಿಶೀಲನೆ ನೆಪದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂಬ ಆಕ್ಷೇಪಿಸಿ ಮನೆ ಮಾಲೀಕರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ನಿಮ್ಮ ಕಟ್ಟಡ ನಿರ್ಮಾಣದ ನಕ್ಷೆ ನಿಯಮಬದ್ಧವಾಗಿಲ್ಲ’ ಎಂದು  ಹೊಂಬೇಗೌಡ  ನಗರ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆರ್‌.ಗಂಗಾಧರ ಅವರು ನೀಡಿರುವ ನೋಟಿಸ್‌ ಪ್ರಶ್ನಿಸಿ ಬನಶಂಕರಿ ಎರಡನೇ ಹಂತದ ನಿವಾಸಿ ಮಾಲಾ ಶ್ರೀಧರ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ನೋಟಿಸ್‌ಗೆ ತಡೆ ನೀಡಿದೆ.

ADVERTISEMENT

ಅರ್ಜಿಯ ಸಾರಾಂಶ: ‘ಜಯನಗರ 1ನೇ ಬ್ಲಾಕ್‌ನ ಮೂರನೇ ಮುಖ್ಯ ರಸ್ತೆಯಲ್ಲಿ ಹೊಸ ಕಟ್ಟಡ ನಿರ್ಮಿಸಲು ಹಳೆಯ ಕಟ್ಟಡ ಕೆಡವಲಾಗುತಿತ್ತು. ಈ ಸಮಯದಲ್ಲಿ ಸ್ಥಳೀಯ ವಾರ್ಡ್‌ ಅಧಿಕಾರಿ ಬಂದು  ದಬ್ಬಾಳಿಕೆ ಮಾಡಿ ಕೆಲಸ ಸ್ಥಗಿತಗೊಳಿಸಲು ಪ್ರಯತ್ನಿಸಿದರು.  ಇದಕ್ಕೆ ಮಣಿಯದೆ  ಕೆಲಸ ಮುಂದುವರಿಸಿದಾಗ ಅಧಿಕಾರಿಗಳು ಪದೇ ಪದೇ ಸ್ಥಳಕ್ಕೆ ಬರಲು ಆರಂಭಿಸಿದರು. ಫೋನು ಮಾಡಿ ಕಿರಿಕಿರಿ ಮಾಡಲಾರಂಭಿಸಿದರು’ ಎಂಬುದು ಮಾಲಾ ಶ್ರೀಧರ ಅವರ ಆಕ್ಷೇಪ.

‘ಅಧಿಕಾರಿಗಳ ವರ್ತನೆಯನ್ನು ಕಮಿಷನರ್‌ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ (ಎಸಿಬಿ) ದೂರು ನೀಡಿದೆ. ಬಳಿಕ ಅಧಿಕಾರಿಗಳು,  ಈ ಕಟ್ಟಡ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ (ಆರ್ಎಂಪಿ) –2015ಕ್ಕೆ ಅನುಗುಣವಾಗಿಲ್ಲ. ಹಲವು  ನ್ಯೂನ್ಯತೆಗಳಿಂದ ಕೂಡಿದೆ’ ಎಂದು 21ರಂದು ನೋಟಿಸ್ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಕಾನೂನು ಬಾಹಿರ: ‘ಇದು ಬಿಬಿಎಂಪಿ ಬೈಲಾ–2003 ಅಥವಾ ಕರ್ನಾಟಕ ಪೌರಾಡಳಿತ ಕಾಯ್ದೆ (ಕೆಎಂಸಿ) –1976ಕ್ಕೆ ವಿರುದ್ಧವಾಗಿದೆ. ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕೆಂದಾಗ ಖಾಸಗಿ ಕಟ್ಟಡಗಳ ತಪಾಸಣೆಗೆ ಬರುವಂತಿಲ್ಲ.  ಹಾಗೇನಿದ್ದರೂ ಬರುವಂತಿದ್ದರೆ  ಕೆಎಂಸಿ ಕಾಯ್ದೆ ಕಲಂ 307ರ ಪ್ರಕಾರ ಮುಂಚಿತವಾಗಿಯೇ ನೋಟಿಸ್‌್ ನೀಡಿರಬೇಕು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಂವಿಧಾನ ವಿರೋಧಿ: ‘ನೋಟಿಸ್‌ ನೀಡಿರುವ ಕ್ರಮ ಕಾನೂನು ಬಾಹಿರ ಹಾಗೂ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ. ಆಧಾರರಹಿತ ಆಕ್ಷೇಪಣೆಗಳನ್ನು ಎತ್ತುವ ಮೂಲಕ ಅಧಿಕಾರಿಯು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಮೂರನೇ ಪ್ರತಿವಾದಿ ಹನುಮಂತಗೌಡ ಅವರ ತಕರಾರಿನಿಂದಾಗಿ ಈ ಜುಜುಬಿ ನೋಟಿಸ್‌ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಪಾಲಿಕೆ ಸದಸ್ಯರೇ ಪ್ರಬಲರು’
‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಖಾಸಗಿ ಗೃಹ ನಿರ್ಮಾಣ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವ ಮತ್ತು ಮನೆ ಮಾಲೀಕರಿಗೆ ಕಿರುಕುಳ ನೀಡಿ ಅವರಿಂದ ಹಣ ವಸೂಲು ಮಾಡುವ ಜಾಲ ನಗರದಲ್ಲಿ ಕಾರ್ಯನಿರತವಾಗಿದೆ’ ಎಂಬ ಆರೋಪವನ್ನು ಬಿಬಿಎಂಪಿ ಪರ ಹೈಕೋರ್ಟ್‌ ವಕೀಲ ಕೆ.ಎನ್‌.ಪುಟ್ಟೇಗೌಡ ನಿರಾಕರಿಸುತ್ತಾರೆ.

‘ಕೆಲ ನಿವೃತ್ತ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆ ಶಾಮೀಲಾಗಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರಿಗೆ ನಿಯಮ ಪಾಲನೆ ನೆಪದಲ್ಲಿ ತೊಂದರೆ ನೀಡುತ್ತಾರೆ ಎಂಬ ಫಿರ್ಯಾದುಗಳಲ್ಲಿ ಹುರುಳಿಲ್ಲ. ಯಾಕೆಂದರೆ ಪ್ರತಿ ವಾರ್ಡಿನಲ್ಲಿಯೂ ಆಯಾ ಪಾಲಿಕೆ ಸದಸ್ಯರೇ ಹೆಚ್ಚು ಬಲಿಷ್ಠರಾಗಿರುತ್ತಾರೆ. ಮೇಲಾಗಿ ಶಾಸಕರೂ ಕ್ಷೇತ್ರದ ಆಗುಹೋಗುಗಳ ಬಗ್ಗೆ ನಿಗಾ ಇರಿಸಿರುತ್ತಾರೆ’ ಎಂದು ಪುಟ್ಟೇಗೌಡ ಹೇಳುತ್ತಾರೆ.

ಆಕ್ಷೇಪಣೆಯ ಅಂಶಗಳು
ಆರ್‌.ಗಂಗಾಧರ ಅವರು 2016ರ ಡಿಸೆಂಬರ್‌ 27ರಂದು ಕಟ್ಟಡ ನಿರ್ಮಾಣ ನಕ್ಷೆಗೆ ಮಂಜೂರಾತಿ ನೀಡಿದ್ದರು. ಆದರೆ ಇದೇ ಎಂಜಿನಿಯರ್ 2017ರ ಏಪ್ರಿಲ್‌ 21ರಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ನಷ್ಟಭರ್ತಿಗೆ ಒತ್ತಾಯಿಸಬಹುದು.

* ಬಿಬಿಎಂಪಿಯಲ್ಲಿ ಲಂಚವಿಲ್ಲ ಎಂದು ಹೇಳಲಾರೆ. ಸ್ಥಳೀಯ  ಅಧಿಕಾರಿಗಳು ತಪ್ಪು ಮಾಡಿದರೆ ಅದಕ್ಕೆ ಅವರೇ ನೇರ ಹೊಣೆ. ನಿವೃತ್ತ ಅಧಿಕಾರಿಗಳ ಪ್ರಭಾವ ಕೆಲಸ ಮಾಡುವುದಿಲ್ಲ
ಕೆ.ಎನ್‌.ಪುಟ್ಟೇಗೌಡ,
ಬಿಬಿಎಂಪಿ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.